ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಲ್ಲಿದ್ದ ಧೈರ್ಯ ಮತ್ತು ದೃಢ ನಿಶ್ಚಯದ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.
ನಂದೂರ್‌ಬಾರ್ (ಮಹಾರಾಷ್ಟ್ರ) (ಮೇ.12): ‘ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಭಾಷಣಗಳು ಬರೀ ಪೊಳ್ಳು’ ಎಂದು ಶನಿವಾರ ಕಿಡಿಕಾರಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಲ್ಲಿದ್ದ ಧೈರ್ಯ ಮತ್ತು ದೃಢ ನಿಶ್ಚಯದ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಮಾಡಿದ ಮಾರನೇ ದಿನವೇ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಿಯಾಂಕಾ, ‘ಏನಾದರೂ ಹೇಳಿದರೆ ಮೋದಿ ಗೊಳೋ ಎಂದು ಕಣ್ಣೀರಿಡುತ್ತಾರೆ.
ಆದರೆ ಇದು ಸಾರ್ವಜನಿಕ ಜೀವನ. ಇಲ್ಲಿ ನೀವು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಕಲಿಯಬೇಕಿದೆ. ಅವರು ದುರ್ಗೆಯ ರೀತಿಯಲ್ಲಿದ್ದರು. ಅವರು ಪಾಕಿಸ್ತಾನವನ್ನೇ ಎರಡು ತುಂಡು ಮಾಡಿದರು. ಅವರಿಂದ ಧೈರ್ಯ ಮತ್ತು ದೃಢ ನಿಶ್ಚಯದ ಗುಣಗಳನ್ನು ನೀವೂ ಅಳವಡಿಸಿಕೊಳ್ಳಬೇಕು. ಆದರೆ ಅವರನ್ನೇ ನೀವು ದೇಶದ್ರೋಹಿ ಎಂದು ಟೀಕಿಸುತ್ತಿರುವಾಗ ಅವರಿಂದ ನೀವು ಏನು ಕಲಿಯಲು ಸಾಧ್ಯ?’ ಎಂದು ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಇದೇ ವೇಳೆ ‘ಬಿಜೆಪಿ ಆದಿವಾಸಿಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತಿಲ್ಲ. ಮೋದಿ ಅವರ ಮಾತು ಬರೀ ಪೊಳ್ಳು. ಅದರಲ್ಲಿ ಯಾವುದೇ ಸತ್ವ ಇರುವುದಿಲ್ಲ.
ಮೋದಿ 3ನೇ ಸಲ ಪ್ರಧಾನಿ ಆಗೋದು ಕಷ್ಟ: ಮಲ್ಲಿಕಾರ್ಜುನ ಖರ್ಗೆ ಭವಿಷ್ಯ
ನಿನ್ನೆ ಅವರು ತಾವು ಶಬರಿಯನ್ನು ಗೌರವಿಸುವುದಾಗಿ ಹೇಳಿಕೊಂಡರು ಆದರೆ ಉನ್ನಾವ್, ಹತ್ರಾಸ್‌ನಲ್ಲಿ ಹಲವು ಶಬರಿಗಳು ಸಂಕಷ್ಟಕ್ಕೆ ಸಿಕ್ಕಾಗ ಅವರೇಕೆ ಮೌನವಾಗಿದ್ದರು? ಮಹಿಳಾ ಕುಸ್ತಿಪಟುಗಳ ತಮ್ಮ ಮೇಲಿನ ದೌರ್ಜನ್ಯ ವಿರೋಧಿಸಿ ಬೀದಿಗಿಳಿದಾಗ ಅವರಿಗೆ ನ್ಯಾಯ ಒದಗಿಸುವ ಬದಲು ಆರೋಪಿಯ ಪುತ್ರನಿಗೆ ಲೋಕಸಭೆ ಟಿಕೆಟ್ ಕೊಟ್ಟಿದ್ದು ಏಕೆ? ಆದಿವಾಸಿ ಎಂಬ ಕಾರಣಕ್ಕೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೂತನ ಸಂಸತ್ ಭವನ ಉದ್ಘಾಟಿಸಲಾಗಲೀ ಅಥವಾ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಿಲ್ಲ’ ಎಂದು ಪ್ರಿಯಾಂಕಾ ಆರೋಪಿಸಿದರು.