
ನವದೆಹಲಿ(ಅ.21): ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟಉತ್ತರ ಪ್ರದೇಶದ ಲಖೀಂಪುರ ಖೇರಿ(Lakhimpur Kheri) ಹಿಂಸಾಚಾರದ ತನಿಖೆಯಲ್ಲಿ ಪೊಲೀಸರು ಬೇಕಂತಲೇ ವಿಳಂಬ ಮಾಡುತ್ತಿರುವಂತೆ ತೋರುತ್ತಿದೆ ಎಂದು ಸುಪ್ರೀಂಕೋರ್ಟ್(Supreme Court) ಕಟು ಮಾತುಗಳಲ್ಲಿ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ. ‘ಇದು ಮುಗಿಯದ ಕತೆಯಾಗಬಾರದು. ಶೀಘ್ರದಲ್ಲೇ ಎಲ್ಲಾ ಸಾಕ್ಷಿಗಳ ಹೇಳಿಕೆ ದಾಖಲಿಸಿ. ಕೇವಲ 4 ಸಾಕ್ಷಿಗಳ ಹೇಳಿಕೆ ದಾಖಲಿಸಿ ಇನ್ನೂ 40 ಜನರನ್ನು ಏಕೆ ಸುಮ್ಮನೇ ಬಿಟ್ಟಿದ್ದೀರಿ?’ ಎಂದೂ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ(Harish Salve) ಅವರಿಗೆ ತಾಕೀತು ಮಾಡಿದೆ.
‘ಉತ್ತರ ಪ್ರದೇಶ(Uttar Pradesh) ಪೊಲೀಸರು ಈ ಪ್ರಕರಣದಲ್ಲಿ ವೃಥಾ ವಿಳಂಬ ಮಾಡುತ್ತಿದ್ದಾರೆ. ಅಂತಹ ಯೋಚನೆ ಬಿಟ್ಟುಬಿಡಿ. ಕೂಡಲೇ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಮ್ಯಾಜಿಸ್ಪ್ರೇಟ್ ಎದುರು ಎಲ್ಲಾ ಸಾಕ್ಷಿಗಳ ಹೇಳಿಕೆ ದಾಖಲಿಸಿ. ಪ್ರಕರಣದ ಸಂತ್ರಸ್ತರಿಗೆ ಹಾಗೂ ಸಾಕ್ಷಿಗಳಿಗೆ ರಕ್ಷಣೆ ಒದಗಿಸಿ’ ಎಂದು ಬುಧವಾರದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ ಸೂಚಿಸಿತು.
ಅಲ್ಲದೆ, ವಸ್ತುಸ್ಥಿತಿ ವರದಿ ನೀಡಿಕೆ ವಿಳಂಬಕ್ಕೂ ತರಾಟೆಗೆ ತೆಗೆದುಕೊಂಡ ಪೀಠ, ‘ಅಂದು ರಾತ್ರಿ 1 ಗಂಟೆಯವರೆಗೆ ನಾವು ವರದಿಗೆ ಕಾದೆವು. ನೀವು ಸಲ್ಲಿಸಲೇ ಇಲ್ಲ’ ಎಂದು ಕಿಡಿಕಾರಿತು.
‘ಪ್ರಕರಣದಲ್ಲಿ ಪ್ರಭಾವಿಗಳ ರಕ್ಷಣೆಗೆ ಪೊಲೀಸರು ಯತ್ನಿಸುತ್ತಿದ್ದಾರೆಂಬ ಭಾವನೆ ಸಾರ್ವಜನಿಕ ವಲಯದಲ್ಲಿರುವುದರಿಂದ, ಈವರೆಗೆ ಏಕೆ ಕೇವಲ 4 ಸಾಕ್ಷಿಗಳ ಹೇಳಿಕೆ ಮಾತ್ರ ದಾಖಲಿಸಿದ್ದೀರಿ, ಇನ್ನೂ 40 ಮಂದಿಯ ಹೇಳಿಕೆ ಏಕೆ ದಾಖಲಿಸಿಲ್ಲ?’ ಎಂದು ಕೋರ್ಟ್ ತರಾಟೆ ತೆಗೆದುಕೊಂಡಿತು.
ಸೆಕ್ಷನ್ 164ರ ಮಹತ್ವವೇನು?:
ಸಿಆರ್‌ಪಿಸಿ ಸೆಕ್ಷನ್ 164ರಡಿ ಮ್ಯಾಜಿಸ್ಪ್ರೇಟ್ ಎದುರು ಸಾಕ್ಷಿಯು ಹೇಳಿಕೆ ನೀಡಿದರೆ ಆ ಹೇಳಿಕೆಗೇ ಸಾಕ್ಷ್ಯದ ಸ್ಥಾನಮಾನ ಇರುವುದರಿಂದ ಅದು ಅತ್ಯಂತ ಮಹತ್ವದ್ದಾಗುತ್ತದೆ.
ಅ.3ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಷ್ ಮಿಶ್ರಾ ಜೀಪು ಹರಿಸಿ ನಾಲ್ವರು ರೈತರನ್ನು ಹತ್ಯೆಗೈದಿದ್ದಾರೆ ಎನ್ನಲಾದ ಪ್ರಕರಣ ಇದಾಗಿದ್ದು, ಆತನೂ ಸೇರಿದಂತೆ 10 ಮಂದಿ ಈವರೆಗೆ ಬಂಧಿತರಾಗಿದ್ದಾರೆ. ನಂತರದ ಹಿಂಸಾಚಾರದಲ್ಲಿ ಇನ್ನೂ ನಾಲ್ವರು ಮೃತಪಟ್ಟಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಸುಪ್ರೀಂ ತಾಕೀತು
- ಪೊಲೀಸರು ಈ ಪ್ರಕರಣದಲ್ಲಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ
- ತಕ್ಷಣ ಮ್ಯಾಜಿಸ್ಪ್ರೇಟ್ ಎದುರು ಎಲ್ಲ ಸಾಕ್ಷಿಗಳ ಹೇಳಿಕೆ ದಾಖಲಿಸಿ
- ಸಂತ್ರಸ್ತರು ಹಾಗೂ ಸಾಕ್ಷಿಗಳಿಗೆ ಸಮರ್ಪಕ ರಕ್ಷಣೆ ವ್ಯವಸ್ಥೆ ಮಾಡಿ
- ಇದು ಎಂದೂ ಮುಗಿಯದ ಕತೆ ಆಗದಂತೆ ಕ್ರಮವನ್ನು ಕೈಗೊಳ್ಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ