ಕೊಲ್ಲಾಪುರ ಜ್ಯೋತಿಬಾ ದೇಗುಲದ ಅರ್ಚಕರಿಂದ ಹಲ್ಲೆ; ದೇವರ ಮುಂದೆ ಒಡೆಯುವ 'ತೆಂಗಿನಕಾಯಿ' ಭಕ್ತರ ತಲೆಗೆ ಹೊಡೆದರು!

Published : Mar 23, 2026, 05:34 PM IST
Kolhapur jyotiba temple clash

ಸಾರಾಂಶ

ಮಹಾರಾಷ್ಟ್ರದ ಕೊಲ್ಹಾಪುರದ ಪ್ರಸಿದ್ಧ ಜ್ಯೋತಿಬಾ ದೇಗುಲದಲ್ಲಿ ಕ್ಷುಲ್ಲಕ ಕಾರಣಕ್ಕೆ ಅರ್ಚಕರು ಮತ್ತು ಭಕ್ತರ ನಡುವೆ ಭೀಕರ ಮಾರಾಮಾರಿ ನಡೆದಿದೆ. ಸುಮಾರು 20 ಅರ್ಚಕರು ಸೇರಿ ಇಬ್ಬರು ಭಕ್ತರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಓರ್ವ ಅರ್ಚಕ ತೆಂಗಿನಕಾಯಿಯಿಂದ ಭಕ್ತನ ತಲೆಗೆ ಹೊಡೆದಿದ್ದಾನೆ.

ಕೊಲ್ಹಾಪುರ/ಚಿಕ್ಕೋಡಿ (ಮಾ.23): ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸುಪ್ರಸಿದ್ಧ ಜ್ಯೋತಿಬಾ ದೇಗುಲದಲ್ಲಿ ಅರ್ಚಕರು ಮತ್ತು ಭಕ್ತರ ನಡುವೆ ನಡೆದ ಭೀಕರ ಮಾರಾಮಾರಿ ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ಹೋಗಿದ್ದು, ಸುಮಾರು 15 ರಿಂದ 20 ಅರ್ಚಕರು ಸೇರಿ ಇಬ್ಬರು ಭಕ್ತರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.

ತೆಂಗಿನಕಾಯಿಯಿಂದ ತಲೆಗೆ ಹೊಡೆದ ಅರ್ಚಕ!

ದೂರದ ಊರುಗಳಿಂದ ದೇವರ ದರ್ಶನಕ್ಕೆಂದು ಬಂದಿದ್ದ ಇಬ್ಬರು ಭಕ್ತರ ಮೇಲೆ ಅರ್ಚಕರು ಮುಗಿಬಿದ್ದಿದ್ದಾರೆ. ಈ ವೇಳೆ ಒಬ್ಬ ಅರ್ಚಕ ಕೈಯಲ್ಲಿದ್ದ ತೆಂಗಿನಕಾಯಿಯಿಂದ ಭಕ್ತನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ದೃಶ್ಯವು ಸಿಸಿಟಿವಿ ಹಾಗೂ ಅಲ್ಲಿನ ಜನರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಅರ್ಚಕರು ಗುಂಪುಗೂಡಿ ಭಕ್ತರನ್ನು ಸುತ್ತುವರಿದು ಮನಬಂದಂತೆ ಥಳಿಸಿದ್ದಾರೆ. ದೇವರ ಸೇವೆ ಮಾಡಬೇಕಾದ ಪುರೋಹಿತರೇ ಈ ರೀತಿ ರೌಡಿಗಳಂತೆ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್:

ದೇವಸ್ಥಾನದ ಆವರಣದಲ್ಲೇ ನಡೆದ ಈ ಮಾರಾಣಾಂತಿಕ ಹಲ್ಲೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ವಿಡಿಯೋದಲ್ಲಿ ಅರ್ಚಕರು ಭಕ್ತರನ್ನು ಅಟ್ಟಾಡಿಸಿ ಹೊಡೆಯುವುದು ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುವುದು ಸ್ಪಷ್ಟವಾಗಿ ಕಾಣುತ್ತಿದೆ. 'ದೇವಸ್ಥಾನಕ್ಕೆ ಹೋಗುವುದು ನೆಮ್ಮದಿಗಾಗಿ, ಆದರೆ ಅಲ್ಲಿ ಈ ರೀತಿಯ ದೌರ್ಜನ್ಯ ನಡೆದರೆ ಭಕ್ತರು ಯಾರನ್ನು ನಂಬಬೇಕು?' ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಪೊಲೀಸರ ಮಧ್ಯಪ್ರವೇಶ - ತಣ್ಣಗಾದ ಗಲಾಟೆ:

ಹಲ್ಲೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ. ಅರ್ಚಕರ ಗುಂಪಿನಿಂದ ಭಕ್ತರನ್ನು ರಕ್ಷಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಹಲ್ಲೆಗೊಳಗಾದ ಭಕ್ತರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಅವರ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

 

ಗಲಾಟೆಗೆ ಕಾರಣವೇನು?

ಇಷ್ಟೊಂದು ಭೀಕರವಾಗಿ ಗಲಾಟೆ ನಡೆಯಲು ಕಾರಣವೇನು ಎಂಬುದು ಇನ್ನು ನಿಗೂಢವಾಗಿಯೇ ಉಳಿದಿದೆ. ದರ್ಶನದ ಸಾಲಿನಲ್ಲಿ ನಿಲ್ಲುವ ವಿಚಾರವೋ ಅಥವಾ ದಕ್ಷಿಣೆ ವಿಚಾರವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಕ್ತರು ಅರ್ಚಕರ ಜೊತೆ ವಾಗ್ವಾದ ನಡೆಸಿದ್ದರೇ ಅಥವಾ ಅರ್ಚಕರೇ ಮೊದಲು ಪ್ರಚೋದನೆ ನೀಡಿದ್ದರೇ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸದ್ಯಕ್ಕೆ ಘಟನೆಗೆ ಸಂಬಂಧಿಸಿದಂತೆ ಕೆಲವು ಅರ್ಚಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಕೊಲ್ಹಾಪುರದ ಜ್ಯೋತಿಬಾ ದೇಗುಲವು ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಇಂತಹ ಪವಿತ್ರ ಸ್ಥಳದಲ್ಲಿ ನಡೆದ ಈ ಹಿಂಸಾಚಾರವು ದೇಗುಲದ ಘನತೆಗೆ ಕುಂದು ತಂದಿದೆ. ತಪ್ಪಿತಸ್ಥ ಅರ್ಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್​ ಈ ಒಂದು ಅಪಾಯಕ ಹೆಜ್ಜೆ ಇಟ್ಟರೆ ಇಡೀ ವಿಶ್ವವೇ ಸ್ತಬ್ಧ! ಇಂಟರ್​ನೆಟ್​ ಇಲ್ಲದೇ ಜಗತ್ತು ಅಲ್ಲೋಲ ಕಲ್ಲೋಲ
Breaking News: 'ಧುರಂಧರ್ 2' ಅಧಿಕೃತ ಕಲೆಕ್ಷನ್ ರಿಪೋರ್ಟ್ ಹಂಚಿಕೊಂಡ ನಿರ್ಮಾಪಕರು; ಕಂಡು ಕೇಳರಿಯದ ದಾಖಲೆಗೆ ಬೆಚ್ಚಿಬಿದ್ದ ಜಗತ್ತು!