
ಪುಣೆ (ಜೂ.27) ಉದ್ಯಮಿ ಪುತ್ರ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪೊಲೀಸ್ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಕೇತನ್ ಹಾಗೂ ಸಿಯಾ ಗೊಯೆಲ್ ನಡುವೆ ನಿಶ್ಚಿತಾರ್ಥ ನಡೆದು ಮದುವೆಗೆ ಸಿದ್ದತೆ ಅಂತಿಮ ಹಂತದಲ್ಲಿತ್ತು. ಇದರ ನಡುವೆ ಭಾವಿ ಪತ್ನಿ ಸಿಯಾ ಗೊಯೆಲ್ ಪುಣೆಯ ಲೋಹಘಡ ಬೆಟ್ಟದ ಮೇಲಿನಿಂದ ಕೇತನ್ ತಳ್ಳಿ ಹಾಕಿ ಹತ್ಯೆ ಮಾಡಿದ್ದಳು. ಈ ಪ್ರಕರಣ ಸಂಬಂಧ ಇದೀಗ ಮತ್ತೊಂದು ಮಾಹಿತಿ ಬಯಲಾಗಿದೆ. ಹತ್ಯೆ ಮಾಡಿದ ಸಿಯಾ ಗೊಯೆಲ್ ಹಾಗೂ ಆಕೆಯ ಪ್ರಿಯತಮ ಚೇತನ್ ಚೌಧರಿ ನಡುವಿನ ಪ್ರೀತಿ ಹುಟ್ಟಲು ಕ್ರಿಕೆಟ್ ಕಾರಣವಾಗಿತ್ತು ಅನ್ನೋ ಮಾಹಿತಿ ಬಯಲಾಗಿದೆ.
ಸಿಯಾ ಗೊಯೆಲ್ ಹಾಗೂ ಚೇತನ್ ಚೌಧರಿ ಪ್ರೀತಿಯಲ್ಲಿ ಬಿದ್ದಿದ್ದರು. ಇದ್ಯಾವುದರ ಅರಿವಿಲ್ಲದ ಪೋಷಕರು ಕೇತನ್ ಅಗರ್ವಾಲ್ ಜೊತೆ ಮದುವೆ ಮಾಡಲು ಮುಂದಾಗಿದ್ದರು. ಕೇತನ್ ಮದುವೆಯಾಗಲು ಸಿಯಾ ಗೊಯೆಲ್‌ಗೆ ಇಷ್ಟವರಿಲ್ಲ. ಸಿಯಾ ಗೊಯೆಲ್ ಹಾಗೂ ಗೆಳೆಯ ಚೇತನ್ ಚೌಧರಿ ನಡುವಿನ ರಿಲೇಶನ್‌ಶಿಪ್ ಗಾಢವಾಗಿ ಇರಲಿಲ್ಲ. ಬಿಟ್ಟಿರಲಾರದ ಪ್ರೀತಿ ಆಗಿರಲಿಲ್ಲ. ಇವರಿಬ್ಬರು ಕ್ರಿಕೆಟ್ ಪಂದ್ಯದಿಂದ ಪರಿಚಯಸ್ಥರಾಗಿದ್ದರು. ಸಿಯಾ ಗೊಯೆಲ್ ಸಹೋದರ ಸಾಹಿಲ್ ಗೊಯೆಲ್ ಕ್ರಿಕೆಟಿಗನಾಗಿದ್ದ. ಸಾಹಿಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಸಿಯಾ ಕೂಡ ಹಾಜರಾಗುತ್ತಿದ್ದರು. ಸಾಹಿಲ್ ಆಡುತ್ತಿದ್ದ ತಂಡದಲ್ಲೇ ಚೇತನ್ ಚೌಧರಿ ಕೂಡ ಕ್ರಿಕೆಟ್ ಆಡುತ್ತಿದ್ದರು. ಹೀಗಾಗಿ ಸಿಯಾ ಹಾಗೂ ಚೇತನ್ ಪರಿಯಸ್ಥರಾಗಿದ್ದಾರೆ.
ಕ್ರಿಕೆಟ್‌ನಲ್ಲಿ ಪರಿಚಯವಾಗಿದ್ದ ಚೇತನ್ ಚೌಧರಿ ಜೊತೆ ಮೆಸೇಜ್, ಚಾಟ್ ಶುರುವಾಗಿತ್ತು. ದಿಢೀರ್ ಸಿಯಾ ಗೊಯೆಲ್ ಚೇತನ್ ಚೌಧರಿಯಿಂದ ದೂರವಾಗಿದ್ದಳು. 2025ರಲ್ಲಿ ಇವರಿಬ್ಬರ ಗೆಳೆಯರೊಬ್ಬರು ದೀಪಾವಳಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಮಿಂದೆದ್ದ ಸಿಯಾ ಹಾಗೂ ಚೇತನ್ ಚೌಧರಿ ಮತ್ತೆ ಮಾತುಕತೆ ಆರಂಭಿಸಿದ್ದರು.
ಜನವರಿಯಿಂದ ಸಿಯಾ ಹಾಗೂ ಚೇತನ್ ಚೌಧರಿ ಬರೋಬ್ಬರಿ 2004 ಬಾರಿ ಕರೆ ಮಾಡಿ ಮಾತನಾಡಿದ್ದಾರೆ. ಇವರಿಬ್ಬರು ಒಟ್ಟು ಮಾತನಾಡಿದ ಗಂಟೆ ಬರೋಬ್ಬರಿ 238 ಗಂಟೆ. ಕ್ರಿಕೆಟ್ ಮೂಲಕ ಸಿಯಾ ಹಾಗೂ ಚೇತನ್ ಪರಿಚಯವಾಗಲು ಸಾಹಿಲ್ ಗೊಯೆಲ್ ಕಾರಣವಾಗಿದ್ದ. ಹೀಗಾಗಿ ಸಾಹಿಲ್ ವಿಚಾರಣೆ ನಡೆಸಲಾಗಿದೆ.
ಕೇತನ್ ಅಗರ್ವಾಲ್ ಹತ್ಯೆಗೂ ಮೊದಲು ಜೂನ್ 17 ರಂದು ಪುಣೆಯ ಲುಲ್ಲಾನಗರದಲ್ಲಿರುವ ಕೆಫೆಯಲ್ಲಿ ಸಿಯಾ ಹಾಗೂ ಚೇತನ್ ಚೌಧರಿ ಭೇಟಿಯಾಗಿದ್ದರು. ಸಂಜೆ ಸುಮಾರು 4.30 ರಿಂದ 5.30ರ ಸಮಯದಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಇದೀಗ ಈ ಭೇಟಿಯಲ್ಲೇ ಕೇತನ್ ಹತ್ಯೆಗೆ ಪ್ಲಾನ್ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಭೇಟಿಯ ಚರ್ಚೆ ಮಾಹಿತಿ ಪಡೆಯಲು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
ಪುಣೆಯ ಆಗರ್ಭ ಶ್ರೀಮಂತನಾಗಿ ಗುರುತಿಸಿಕೊಂಡಿರುವ ಉದ್ಯಮಿ ವಿಶಾಲ್ ಅಗರ್ವಾಲ್ ಇದೀಗ ಮಗನ ಕಳೆದುಕೊಂಡು ಅಸ್ವಸ್ಥರಾಗಿದ್ದಾರೆ. ಕೇತನ್ ಪೋಷಕರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದಿದ್ದಾರೆ. ಆದರೆ ಮಗನ ಕಳೆದುಕೊಂಡ ನೋವಿನಿಂದ ಹೊರಬರಲು ಸಾಧ್ಯವಾಗದೆ ಮನೆಯಲ್ಲೇ ಕುಳಿತಿದ್ದಾರೆ. ಉದ್ಯಮ ಸಾಮ್ರಾಜ್ಯ ನಡೆಸುತ್ತಿರುವ ವಿಶಾಲ್ ಅಗರ್ವಾಲ್ ಮಗನ ಸಾವಿನ ಬಳಿಕ ಯಾರ ಫೋನ್ ಸ್ವೀಕರಿಸುತ್ತಿಲ್ಲ. ಯಾರ ಜೊತೆಗೂ ಮಾತನಾಡಲು ಬಯಸುತ್ತಿಲ್ಲ ಎಂದು ವರದಿಯಾಗಿದೆ.
ಇತ್ತ ಸಿಯಾ ಗೊಯೆಲ್ ಪೋಷಕರು ಘಟನೆಯಿಂದ ತೀವ್ರ ನೊಂದಿದ್ದಾರೆ. ತಮ್ಮ ಮಗಳು ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ, ಅಥವಾ ಅದೇ ಕೋಟೆಯಿಂದ ತಳ್ಳಿ ಹಾಕಿ ಸಾಯಿಸಲಿ ಎಂದಿದ್ದಾರೆ. ಮಗಳ ಕೃತ್ಯವನ್ನು ಪೋಷಕರು ಖಂಡಿಸಿದ್ದು ಕಠಿಣ ಶಿಶ್ರಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ