
ಕಾಸರಗೋಡು: ಸಾಕ್ಷರತೆಯ ವಿಚಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕೇರಳ ರಾಜ್ಯದಲ್ಲಿ ಮುಸ್ಲಿಂ ಜೋಡಿಯೊಂದು ತಾವು ಮದ್ವೆಯಾದ 29 ವರ್ಷಗಳ ನಂತರ ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಮತ್ತೊಮ್ಮೆ ವಿವಾಹವಾಗಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ಇವರು ತಮ್ಮ ಮೂವರು ಹೆಣ್ಣು ಮಕ್ಕಳಿಗೆ ತಮ್ಮ ಅನುವಂಶೀಯ ಆಸ್ತಿ ಹೋಗುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಮದ್ವೆಯಾಗಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆ ಇಂತಹ ವಿಶೇಷ ಮದ್ವೆಗೆ ಸಾಕ್ಷಿಯಾಯ್ತು. ಕುಂಚಾಕೊ ಬೋಬನ್ (Kunchacko Boban) ಅಭಿನಯದ 'ಎನ್ ತಾನ್ ಕೇಸ್ ಕೊಡು' ಎಂಬ ಮಲೆಯಾಳಂ ಸಿನಿಮಾದಲ್ಲಿ ನಟಿಸಿರುವ ವೃತ್ತಿಯಲ್ಲಿ ವಕೀಲರು ಆಗಿರುವ, ನಟ ಸಿ ಶುಕ್ಕೂರ್ ಹಾಗೂ ಇವರ ಪತ್ನಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಪ್ರೊ. ವೈಸ್ ಚಾನ್ಸೆಲರ್ ಡಾ ಶೀನಾ ಹೀಗೆ ಮರು ಮದುವೆಯಾದವರು. ಇದಕ್ಕೂ ಮೊದಲು ಈ ಜೋಡಿ 1994ರ ಅಕ್ಟೋಬರ್‌ನಲ್ಲಿ ವಿವಾಹವಾದರು. ಅಂದು ಅವರ ವಿವಾಹವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಾಣಕ್ಕಾಡ್ ಸೈಯದ್ ಹೈದರ್ ಅಲಿ ಶಿಹಾಬ್ ತಂಗಲ್ ಅವರು ನಡೆಸಿ ಕೊಟ್ಟಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ದಂಪತಿಗಳು ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವಾಗ ಪ್ರತಿಜ್ಞೆಯನ್ನು ಹೊಸದಾಗಿಸುವುದು ಸಾಮಾನ್ಯವಾಗಿದೆ.
ಹಾಗೆಯೇ ಕೆಲವು ಹಿಂದೂ ಸಮುದಾಯಗಳಲ್ಲಿ, ಪತಿಗೆ 60 ಅಥವಾ 80 ವರ್ಷವಾದಾಗ ದಂಪತಿಗಳು ಮರುಮದುವೆ ಮಾಡಿಕೊಳ್ಳುತ್ತಾರೆ. ಆದರೆ ಸಿ ಶುಕ್ಕೂರ್ ಮತ್ತು ಡಾ ಶೀನಾ ಅವರು ಮುಸ್ಲಿಂ ಉತ್ತರಾಧಿಕಾರ ಕಾನೂನುಗಳಲ್ಲಿ ವಿಧಿಸಲಾದ ಕೆಲವು ಷರತ್ತುಗಳಿಂದ ತಮ್ಮ ವಿವಾಹವನ್ನು ಮರು-ನೋಂದಣಿ ಮಾಡುವ ಸಲುವಾಗಿ ಈ ವಿಶೇಷ ನಿರ್ಧಾರ ತೆಗೆದುಕೊಂಡಿದ್ದಾರೆ.
ಅವರ ಮೊದಲ ಮದುವೆಯನ್ನು ಷರಿಯಾ ಕಾನೂನಿನಡಿಯಲ್ಲಿ ನಡೆಸಲಾಗಿರುವುದರಿಂದ, ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಅವರ ಹೆಣ್ಣುಮಕ್ಕಳು ತಮ್ಮ ತಂದೆಯ ಆಸ್ತಿಯ ಮೂರನೇ ಎರಡರಷ್ಟು ಪಾಲು ಮಾತ್ರ ಪಡೆಯುತ್ತಿದ್ದರು, ಉಳಿದ ಆಸ್ತಿ ಪುರುಷ ವಾರಸುದಾರರಿಲ್ಲದ ಕಾರಣ ಶುಕ್ಕೂರ್ ಅವರ ಸಹೋದರರಿಗೆ ಹೋಗುತ್ತಿತ್ತು.
ಆದರೆ ದಂಪತಿ ತಮ್ಮ ಆಸ್ತಿ ತಮ್ಮ ಹೆಣ್ಣು ಮಕ್ಕಳಿಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಲು, ವಿಶೇಷ ವಿವಾಹ ಕಾಯಿದೆಯಡಿಯಲ್ಲಿ (Special Marriage Act) ಮತ್ತೊಮ್ಮೆ ವಿವಾಹವಾದರು. ಅದರ ಅಡಿಯಲ್ಲಿ ಯಾವುದೇ ವ್ಯಕ್ತಿಯ ಆಸ್ತಿಯ ಉತ್ತರಾಧಿಕಾರವು ಭಾರತೀಯ ಉತ್ತರಾಧಿಕಾರ ಕಾಯಿದೆಯಡಿ (Indian Succession Act) ನಿಯಂತ್ರಿಸಲ್ಪಡುತ್ತದೆ. ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಶುಕ್ಕೂರ್, ಈ ಹಿಂದೆ ಎರಡೂ ಬಾರಿ ತಾನು ಸಾವಿನ ಮನೆವರೆಗೆ ಹೋಗಿ ಬಂದಿದ್ದು, ಈ ವೇಳೆ ನನ್ನ ಮಕ್ಕಳಿಗಾಗಿ ನಾನು ಏನು ಮಾಡಿದ್ದೇನೆ ಏನು ಬಿಟ್ಟು ಹೋಗುತ್ತಿದ್ದೇನೆ. ನಾನು ಬಿಟ್ಟು ಹೋದ ಆಸ್ತಿ ಅವರಿಗೆ ಸಿಗುವುದೇ ಎಂಬ ಯೋಚನೆ ಬಂತು ಎಂದು ಹೇಳಿಕೊಂಡಿದ್ದಾರೆ.
1937 ರ ಮುಸ್ಲಿಂ ವೈಯಕ್ತಿಕ ಕಾನೂನು (Shariat) ಅನ್ವಯ ಕಾಯಿದೆ ಮತ್ತು ನ್ಯಾಯಾಲಯಗಳು ತೆಗೆದುಕೊಂಡ ನಿಲುವಿನ ಪ್ರಕಾರ, ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಮಾತ್ರ ಹೆಣ್ಣುಮಕ್ಕಳಿಗೆ ಹೋಗುತ್ತದೆ ಮತ್ತು ಉಳಿದವು ಅವರಿಗೆ ಗಂಡು ಮಕ್ಕಳಿಲ್ಲದಿದ್ದರೆ ತಂದೆಯ ಅವರ ಸಹೋದರರಿಗೆ ಹೋಗುತ್ತದೆ. ಇದಲ್ಲದೆ, ಷರಿಯಾ ಕಾನೂನಿನ ಅಡಿಯಲ್ಲಿ, ಉಯಿಲು ಬರೆಯುವುದನ್ನು ಅನುಮತಿಸಲಾಗುವುದಿಲ್ಲ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಮರು ಮದುವೆಯಾಗಿರುವುದರಿಂದ ಪುತ್ರರಿಗೆ ಅನುಕೂಲವಾಗುವ ತಾರತಮ್ಯದ ಪಿತ್ರಾರ್ಜಿತ ಕಾನೂನು ಕೊನೆಗೊಳಿಸಲು ಸಹಾಯ ಮಾಡುತ್ತದೆ ಎಂದು ಶುಕ್ಕೂರ್ ಹೇಳಿದರು. ಅಲ್ಲಾಹನು ನಮ್ಮ ಹೆಣ್ಣುಮಕ್ಕಳ ಆತ್ಮ ವಿಶ್ವಾಸ ಮತ್ತು ಘನತೆಯನ್ನು ಹೆಚ್ಚಿಸಲಿ. ಅಲ್ಲಾ ಮತ್ತು ನಮ್ಮ ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮರು ಮದುವೆಯಾಗುವ ನಿರ್ಧಾರ ಮೂಲಕ ತಾವು ಯಾರನ್ನೂ ಅಥವಾ ಯಾವುದನ್ನೂ ಅಥವಾ ಷರಿಯಾ ಕಾನೂನನ್ನು ಧಿಕ್ಕರಿಸಲು ಉದ್ದೇಶಿಸಿಲ್ಲ ಎಂದು ಅವರು ಹೇಳಿದ್ದಾರೆ. ವಿಶೇಷ ವಿವಾಹ ಕಾಯ್ದೆಯ ಮೂಲಕ ಮದುವೆಯಾಗುವವರ ಮೇಲೆ ಮುಸ್ಲಿಂ ವೈಯಕ್ತಿಕ ಕಾನೂನು ಪರಿಣಾಮ ಬೀರುವುದಿಲ್ಲ ಎಂಬ ಸಾಧ್ಯತೆಯನ್ನು ಮಾತ್ರ ನಾವು ಅನ್ವೇಷಿಸುತ್ತಿದ್ದೇವೆ. ನಾನು ಮತ್ತು ಶೀನಾ ನಮ್ಮ ಮಕ್ಕಳಿಗಾಗಿ ಮರುಮದುವೆಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಟಿವಿ ಚಾನೆಲ್‌ನೊಂದಿಗೆ ಮಾತನಾಡಿದ ಅವರು, ನಾವು ನಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬಯಸುತ್ತೇವೆ ಎಂದರು. ಅವರ ಪತ್ನಿ ಡಾ. ಶೀನಾ ಮಾತನಾಡಿ, ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಮದುವೆಯಾದ ನಂತರದಲ್ಲಿ ಜನಿಸಿದ ಕೇವಲ ಹೆಣ್ಣು ಮಕ್ಕಳನ್ನು ಹೊಂದಿರುವ ಅನೇಕ ಮುಸ್ಲಿಂ ಕುಟುಂಬಗಳು ಈ ಕಾನೂನಿನಿಂದ ಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಕಾಲೇಜಿನಲ್ಲಿ ಪಾಠ ಮಾಡುವಾಗ ಅಥವಾ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವಾಗ, ಅದು ಮುಗಿದ ನಂತರ, ಅನೇಕ ಪೋಷಕರು ನನ್ನ ಬಳಿಗೆ ಬಂದು ಇದು ಸರಿಯೇ ಎಂದು ಕೇಳುತ್ತಾರೆ. ನಾವು ವರ್ಷಗಳಿಂದ ಈ ಬಗ್ಗೆ ಸಮಸ್ಯೆ ಪರಿಹರಿಸುವ ಬಗ್ಗೆ ಕೇಳಿದ್ದೇವೆ. ನಮಗೆ ಎರಡು ಆಯ್ಕೆಗಳಿವೆ ಒಂದು ಕಾನೂನು ಮಾರ್ಗವನ್ನು ಬದಲಾಯಿಸುವುದು. ಹಾಗೂ ಜೀವನದ ಆಯ್ಕೆಯ ಮೂಲಕ ದಾರಿ ತೋರಿಸುವುದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ