ದೇಶದ ಆರ್ಥಿಕತೆಗೆ ಪೆಟ್ಟು ನೀಡಲು ಸ್ವಪ್ನ ಅಕ್ರಮ ಚಿನ್ನ ಸಾಗಣೆ ಸಂಚು| ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಎನ್‌ಐಎ ಉಲ್ಲೇಖ| ತಮ್ಮ ದಂಧೆ ಮುಚ್ಚಿಡಲು ಯುಎಇ ರಾಯಭಾರಿ ಬ್ಯಾಗ್ ಬಳಕೆ| ವಿಚಾರಣೆ ವೇಳೆ ಹಲವು ಸ್ಫೋಟಕ ವಿಚಾರ ಬಾಯ್ಬಿಟ್ಟಸ್ವಪ್ನ
ಕೊಚ್ಚಿ(ಜು.22): ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ವಪ್ನಾ ಸುರೇಶ್, ಸಂದೀಪ್ ನಾಯರ್ ಹಾಗೂ ಇತರ ಆರೋಪಿಗಳು ದೊಡ್ಡ ಪ್ರಮಾಣದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ, ತನ್ಮೂಲಕ ದೇಶದ ಆರ್ಥಿಕ ಸ್ಥಿರತೆಗೆ ಹಾನಿಯನ್ನುಂಟು ಮಾಡಲು ಸಂಚು ರೂಪಿದ್ದರು ಎಂಬ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ಈ ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವರದಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರಲ್ಲಿ ಆರೋಪಿಗಳು ಚಿನ್ನ ಕಳ್ಳಸಾಗಣೆಯಿಂದ ಬಂದ ಹಣವನ್ನು ವಿವಿಧ ಮಾರ್ಗಗಳ ಮೂಲಕ ಭಯೋತ್ಪಾದನೆಗೆ ನೆರವು ನೀಡಲು ಬಳಸಿದ್ದರು ಎಂದು ಉಲ್ಲೇಖಿಸಲಾಗಿದೆ.
ತಮ್ಮ ಕಳ್ಳದಂಧೆಯನ್ನು ಮುಚ್ಚಿಡಲು ಆರೋಪಿಗಳು ಉದ್ದೇಶಪೂರ್ವಕವಾಗಿ ಯುಎಇಯ ರಾಯಭಾರಿ ಬ್ಯಾಗ್ ಬಳಸಿದ್ದರು. ವಿಚಾರಣೆ ವೇಳೆ ಸ್ವಪ್ನಾ ಸುರೇಶ್ ತಾನು ನಾಯರ್ ಮತ್ತು ಸರಿತಾ ಎಂಬಾತನ ಜೊತೆ ಸೇರಿ ತಿರುವನಂತಪುರದ ವಿವಿಧ ಕಡೆಗಳಲ್ಲಿ ಸಂಚು ರೂಪಿಸಿದ್ದಾಗಿ ಮತ್ತು ಈ ಕೃತ್ಯಕ್ಕೆ ಸರಿತಾರಿಂದ ಹಣವನ್ನು ಸ್ವೀಕರಿಸಿದ್ದಾಗಿಯೂ ಒಪ್ಪಿಕೊಂಡಿದ್ದಾಳೆ.
ಅಲ್ಲದೆ ಲಾಕ್‌ಡೌನ್ ವೇಳೆ ದೇಶದ ಹಣಕಾಸು ಪರಿಸ್ಥಿತಿ ಚೆನ್ನಾಗಿ ಇಲ್ಲದ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಚಿನ್ನ ಕಳ್ಳಸಾಗಣೆ ಮಾಡುವ ಮೂಲಕ ದೇಶದ ಹಣಕಾಸು ಸ್ಥಿರತೆಗೆ ಹಾನಿ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಬಾಯ್ಬಿಟ್ಟಿದ್ದಾಳೆ.