* ವರದಕ್ಷಿಣೆ ಪಿಡುಗು ತಡೆಯಲು ಇನ್ನೊಂದು ಕ್ರಮ
* ವರದಕ್ಷಿಣೆ ಪಡೆಯಲ್ಲ: ಕೇರಳ ಸರ್ಕಾರಿ ನೌಕರರಿಗೆ ಘೋಷಣೆ ಕಡ್ಡಾಯ
ತಿರುವನಂತಪುರಂ(ಜು.26): ಹಲವು ವರದಕ್ಷಿಣೆ ಕಿರುಕುಳ ಸಾವು ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ, ರಾಜ್ಯದ ಎಲ್ಲಾ ಪುರುಷ ಸರ್ಕಾರಿ ನೌಕರರು ‘ವಧುವಿನ ಕುಟುಂಬದಿಂದ ವರದಕ್ಷಿಣೆ ಪಡೆದಿಲ್ಲ, ಪಡೆಯುವುದಿಲ್ಲ’ ಎಂದು ಘೋಷಣಾ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆದೇಶಿಸಿದೆ.
ನವವಿವಾಹಿತರು ವಿವಾಹವಾದ ಒಂದು ತಿಂಗಳ ಒಳಗಾಗಿ ಪ್ರಮಾಣಪತ್ರ ಸಲ್ಲಿಸಬೇಕು. ಅದರಲ್ಲಿ ಉದ್ಯೋಗಿಯ ಪತ್ನಿ, ತಂದೆ ಮತ್ತು ಮಾವನ ಸಹಿ ಇರಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಈ ಪ್ರಮಾಣ ಪತ್ರವನ್ನು ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಬೇಕು. ಸರ್ಕಾರದ ವಿವಿಧ ಇಲಾಖೆಗಳು ವರದಕ್ಷಿಣೆಗೆ ಪ್ರಚೋದಿಸಿಲ್ಲ, ಪಡೆದಿಲ್ಲ ಎಂದು ಉದ್ಯೋಗಿಗಳಿಂದ ಹೇಳಿಕೆ ಸಂಗ್ರಹಿಸಿ, ವರ್ಷಕ್ಕೆ 2 ಬಾರಿ ಏಪ್ರಿಲ್ ಮತ್ತು ಅಕ್ಟೋಬರ್‌ನಲ್ಲಿ ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ವರದಕ್ಷಿಣೆ ಕೇಳುವುದು ಮತ್ತು ಪಡೆಯುವುದು ಎರಡೂ ಶಿಕ್ಷಾರ್ಹ ಅಪರಾಧ. ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷ ಸಜೆ ಮತ್ತು ಕನಿಷ್ಠ 15,000 ರು. ದಂಡ ವಿಧಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೇರಳದಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಕೇರಳ ವರದಕ್ಷಿಣೆ ನಿಷೇಧ (ತಿದ್ದುಪಡಿ) ಕಾಯ್ದೆ-2021 ಜಾರಿ ಮಾಡಿ, ಪ್ರತಿ ಜಿಲ್ಲೆಗೂ ವರದಕ್ಷಿಣೆ ನಿಷೇಧ ಅಧಿಕಾರಿಗಳನ್ನು ನೇಮಕ ಮಾಡಿದೆ. ಇತ್ತೀಚೆಗೆ ಈ ಪಿಡುಗಿನ ವಿರುದ್ಧ ರಾಜ್ಯಪಾಲರು ಒಂದು ದಿನದ ಉಪವಾಸ ಕೂಡ ಮಾಡಿದ್ದರು.