ದೆಹಲಿ ಮೇಲೆ ದೆಹಲಿ ಸರ್ಕಾರಕ್ಕೇ ಅಧಿಕಾರ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

By Kannadaprabha News  |  First Published May 12, 2023, 7:05 AM IST

ದೆಹಲಿಯ ಮೇಲಿನ ಅಧಿಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವೆ ಸದಾ ನಡೆಯುತ್ತಿದ್ದ ತಿಕ್ಕಾಟಕ್ಕೆ ಸುಪ್ರೀಂಕೋರ್ಟ್‌ ಕೊನೆಗೂ ಇತಿಶ್ರೀ ಹಾಡಿದ್ದು, ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿಯಲ್ಲಿನ ಸೇವೆಗಳಿಗೆ ಸಂಬಂಧಿಸಿದ ಆಡಳಿತದಲ್ಲಿ ದೆಹಲಿ ಸರ್ಕಾರಕ್ಕೇ ಅಧಿಕಾರವಿದೆ ಎಂದು ತೀರ್ಪು ನೀಡಿದೆ.


ನವದೆಹಲಿ: ದೆಹಲಿಯ ಮೇಲಿನ ಅಧಿಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವೆ ಸದಾ ನಡೆಯುತ್ತಿದ್ದ ತಿಕ್ಕಾಟಕ್ಕೆ ಸುಪ್ರೀಂಕೋರ್ಟ್‌ ಕೊನೆಗೂ ಇತಿಶ್ರೀ ಹಾಡಿದ್ದು, ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿಯಲ್ಲಿನ ಸೇವೆಗಳಿಗೆ ಸಂಬಂಧಿಸಿದ ಆಡಳಿತದಲ್ಲಿ ದೆಹಲಿ ಸರ್ಕಾರಕ್ಕೇ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಇದೇ ವೇಳೆ, ಕಾನೂನು ಸುವ್ಯವಸ್ಥೆ, ಪೊಲೀಸ್‌ ಹಾಗೂ ಭೂಮಿಗೆ ಸಂಬಂಧಿಸಿದ ಅಧಿಕಾರ ದೆಹಲಿ ಸರ್ಕಾರಕ್ಕಿಲ್ಲ ಎಂದೂ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ತನ್ನ ಸರ್ವಾನುಮತದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ತೀರ್ಪನ್ನು ಮುಕ್ತ ಕಂಠದಿಂದ ಸ್ವಾಗತಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (Arvind kejriwal), ‘ಇದು ಪ್ರಜಾಪ್ರಭುತ್ವದ ಗೆಲುವು. ದೆಹಲಿಯ ಜನರಿಗೆ ನ್ಯಾಯ ಒದಗಿಸಿದ್ದಕ್ಕೆ ಸುಪ್ರೀಂಕೋರ್ಟ್‌ಗೆ (Supreme Court) ಹೃದಯಪೂರ್ವಕ ಧನ್ಯವಾದಗಳು. ಇದರಿಂದ ದೆಹಲಿಯ ಅಭಿವೃದ್ಧಿ ಚಟುವಟಿಕೆಗಳು ಹಲವು ಪಟ್ಟು ಹೆಚ್ಚಿನ ವೇಗ ಪಡೆಯಲಿವೆ’ ಎಂದು ಹೇಳಿದ್ದಾರೆ. ‘ಇದು ದೇಶಾದ್ಯಂತ ರಾಜ್ಯ ಸರ್ಕಾರಗಳನ್ನು ಬೀಳಿಸಲು ನಡೆಸುವ ಪ್ರಯತ್ನಗಳಿಗೆ ನೀಡಿದ ಬಿಗಿಯಾದ ತಪರಾಕಿ’ ಎಂದು ಆಮ್‌ ಆದ್ಮಿ ಪಕ್ಷ ಹೇಳಿದೆ.

Tap to resize

Latest Videos

ಸುಪ್ರೀಂಕೋರ್ಟ್‌ ಆದೇಶದ ಬೆನ್ನಲ್ಲೇ ದೆಹಲಿ ಸರ್ಕಾರದ ಸೇವಾ ಇಲಾಖೆಯ ಕಾರ್ಯದರ್ಶಿ ಆಶಿಶ್‌ ಮೋರ್‌( Ashis more) ಅವರನ್ನು ವರ್ಗ ಮಾಡಿರುವ ಆಪ್‌ ಸರ್ಕಾರ, ಅವರ ಸ್ಥಾನಕ್ಕೆ ಜಲಮಂಡಳಿಯ ಮಾಜಿ ಸಿಇಒ ಎ.ಕೆ.ಸಿಂಗ್‌ (A.K. Singh) ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

ತನ್ನಿಂದ ಬಿಜೆಪಿಗೆ 104 ಸ್ಥಾನ ಎಂದು ಲೆ. ಗವರ್ನರ್‌ ಹೇಳಿದ್ದರು: ಕೇಜ್ರಿವಾಲ್‌

ಹಳೆಯ ಸುಪ್ರೀಂ ತೀರ್ಪು ವಜಾ:

ಈ ಹಿಂದೆ 2019ರಲ್ಲಿ ಸುಪ್ರೀಂಕೋರ್ಟ್‌ ದೆಹಲಿ ಸರ್ಕಾರಕ್ಕೆ ಸೇವೆಗಳಿಗೆ ಸಂಬಂಧಿಸಿದ ಆಡಳಿತದ ಮೇಲೆ ಅಧಿಕಾರವಿಲ್ಲ ಎಂದು ತೀರ್ಪು ನೀಡಿತ್ತು. ಅದನ್ನು ತಿರಸ್ಕರಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪಂಚ ಸದಸ್ಯ ಪೀಠ, ‘ದೆಹಲಿ ಕೇಂದ್ರಾಡಳಿತ ಪ್ರದೇಶದ ಲಕ್ಷಣಗಳು ವಿಶಿಷ್ಟವಾಗಿವೆ. ಇಲ್ಲಿನ ಚುನಾಯಿತ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣ ಬೇಕಾಗುತ್ತದೆ. ಇಲ್ಲಿ ಕೇಂದ್ರ ಸರ್ಕಾರದ ಅಧಿಕಾರ ವಿಸ್ತರಣೆಯು ಸಂವಿಧಾನಕ್ಕೆ ವ್ಯತಿರಿಕ್ತವಾಗುತ್ತದೆ. ದೆಹಲಿ ಕೂಡ ಇತರ ರಾಜ್ಯಗಳಂತೆಯೇ ಸರ್ಕಾರವನ್ನು ಹೊಂದಿದೆ ಎಂದು ಹೇಳಿದೆ.

ಕೇಂದ್ರಕ್ಕೆ ಅಧಿಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ಧ:

ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ, ಪೊಲೀಸ್‌ ಹಾಗೂ ಭೂಮಿಯನ್ನು ಹೊರತುಪಡಿಸಿ ಶಾಸಕಾಂಗ ಹಾಗೂ ಕಾರ್ಯಾಂಗದ ಮೇಲೆ ಅಧಿಕಾರಗಳಿವೆ. ದೆಹಲಿಯ ಆಡಳಿತಾತ್ಮಕ ವಿಷಯಗಳಲ್ಲಿ ಕೇಂದ್ರಕ್ಕೆ ಪರಮಾಧಿಕಾರವಿದ್ದರೆ ಅದರಿಂದ ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ಧಕ್ಕೆಯಾಗುತ್ತದೆ. ಶಾಸಕಾಂಗ ಹಾಗೂ ಕಾರ್ಯಾಂಗದಿಂದ ‘ಸೇವೆಗಳನ್ನು’ ಹೊರಗಿಟ್ಟರೆ ಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ನಿಯಂತ್ರಣವೇ ಇರುವುದಿಲ್ಲ. ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆ ನಮ್ಮ ಸಂವಿಧಾನದ ಮೂಲಭೂತ ತತ್ವವಾಗಿವೆ’ ಎಂದು ಮುಖ್ಯ ನ್ಯಾಯಮೂರ್ತಿಗಳು ತುಂಬಿದ ಕೋರ್ಟ್‌ನಲ್ಲಿ ತೀರ್ಪು ಓದಿದರು.

ದಿಲ್ಲಿ ಸರ್ಕಾರದ ಸಲಹೆಗೆ ಎಲ್‌ಜಿ ಬದ್ಧ:

ಅಧಿಕಾರಿಗಳು ಮಂತ್ರಿಗಳಿಗೆ ವರದಿ ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಸಾಮೂಹಿಕ ಜವಾಬ್ದಾರಿಯ ತತ್ವ ಹಳಿ ತಪ್ಪುತ್ತದೆ. ಪ್ರಜಾಸತ್ತಾತ್ಮಕ ಸರ್ಕಾರದ ವ್ಯವಸ್ಥೆಯಲ್ಲಿ ಆಡಳಿತಕ್ಕೆ ಸಂಬಂಧಿಸಿದ ಅಧಿಕಾರ ಚುನಾಯಿತ ಸರ್ಕಾರದ ಬಳಿ ಇರಬೇಕು. ಲೆಫ್ಟಿನೆಂಟ್‌ ಗವರ್ನರ್‌ (lieutenant Governor)ಅವರು ದೆಹಲಿ ಸರ್ಕಾರದ ಸಚಿವ ಸಂಪುಟದ ಸಲಹೆಗೆ ಬದ್ಧರಾಗಿರಬೇಕು ಎಂದೂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.

ಗವರ್ನರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಆಪ್ ಸರ್ಕಾರಕ್ಕೆ ಮುಖಭಂಗ, ಕೇಜ್ರಿವಾಲ್‌ಗೆ ಮಂಗಳಾರತಿ!

2015ರಲ್ಲಿ ಕೇಂದ್ರ ಗೃಹ ಸಚಿವಾಲಯ(Home Ministry) ದೆಹಲಿಯಲ್ಲಿನ ಸೇವೆಗಳ ಮೇಲೆ ತನಗೆ ಅಧಿಕಾರವಿದೆ ಎಂದು ಅಧಿಸೂಚನೆ ಹೊರಡಿಸಿತ್ತು. ಅದನ್ನು ಆಪ್‌ ಸರ್ಕಾರ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಕಾನೂನು ಸಮರ ನಡೆದು, ಕೊನೆಗೆ ಸುಪ್ರೀಂಕೋರ್ಟ್‌ ಈ ಪ್ರಕರಣ ಇತ್ಯರ್ಥಪಡಿಸಲು ಸಾಂವಿಧಾನಿಕ ಪೀಠ (Constitutional Bench) ರಚಿಸಿತ್ತು. ಅದು ಈಗ ಅಂತಿಮ ತೀರ್ಪು ನೀಡಿದೆ.

click me!