ಕಾಶ್ಮೀರದಲ್ಲಿ ನೀರವ ಮೌನ ಪ್ರವಾಸಿ ತಾಣಗಳು ಬಿಕೋ 5 ಉಗ್ರರು, 3 ಸ್ಥಳ, 10 ನಿಮಿಷದ ದಾಳಿ

Published : Apr 25, 2025, 10:38 PM ISTUpdated : Apr 25, 2025, 10:43 PM IST
ಕಾಶ್ಮೀರದಲ್ಲಿ ನೀರವ ಮೌನ ಪ್ರವಾಸಿ ತಾಣಗಳು ಬಿಕೋ 5 ಉಗ್ರರು, 3 ಸ್ಥಳ, 10 ನಿಮಿಷದ ದಾಳಿ

ಸಾರಾಂಶ

ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. ಪಹಲ್ಗಾಂನಂತಹ ಪ್ರವಾಸಿ ತಾಣಗಳು ಖಾಲಿಯಾಗಿವೆ. ಪ್ರವಾಸಿಗರು ಹಿಂತಿರುಗುತ್ತಿದ್ದು, ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಉಗ್ರರು ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಭದ್ರತಾ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನವದೆಹಲಿ: ಭಾರತದ ಮುಕುಟದಂತಿರುವ ಪ್ರಾಕೃತಿಕ ಸೌಂದರ್ಯದ ಗಣಿ ಕಾಶ್ಮೀರದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತಾಣಗಳು ಕಳೆದ 2 ದಿನಗಳಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

ಏ.22ರಂದು ಕೆಲವೇ ನಿಮಿಷಗಳಲ್ಲಿ ನಡೆದ ಭೀಕರ ಉಗ್ರದಾಳಿಯಿಂದಾಗಿ, ಕೇವಲ ಎರಡು ದಿನಗಳಲ್ಲಿ ಕಾಶ್ಮೀರದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅದರಲ್ಲೂ, ಮಿನಿ ಸ್ವಿಜರ್ಲೆಂಡ್‌ ಎಂದೇ ಖ್ಯಾತವಾಗಿದ್ದ ಪಹಲ್ಗಾಂ ಕಣಿವೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ದಾಲ್‌ ಸರೋವರದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಪ್ರವಾಸಿಗರನ್ನು ಹೊತ್ತೊಯ್ಯಬೇಕಿದ್ದ ವಿಮಾನಗಳು ಖಾಲಿಯಾಗಿ ಹಾರುತ್ತಿದ್ದು, ಮರಳುವಾಗ ಜೀವಭಯದಿಂದ ಕಾಶ್ಮೀರ ತೊರೆಯುತ್ತಿರುವ ಕುಟುಂಬಗಳನ್ನು ಹೊತ್ತುಬರುತ್ತಿವೆ. ಅನುದಿನ ಅಜಾನ್‌ ಮೊಳಗುತ್ತಿದ್ದ ಮಸೀದಿಗಳ ಧ್ವನಿವರ್ದಕಗಳಲ್ಲಿ ಬಂದ್‌ಗೆ ಕರೆ ಕೊಡುತ್ತಿವೆ.

ಪಹಲ್ಗಾಮ್ ದಾಳಿ ಪ್ರಶ್ನಿಸಿದ ಪಾಕ್‌ ಪತ್ರಕರ್ತನನ್ನು ದೂರವಿಟ್ಟ ಅಮೆರಿಕ ವಿದೇಶಾಂಗ ವಕ್ತಾರೆ

ಜನರು, ವರ್ತಕರು, ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ಖಾಲಿತನ ಆವರಿಸಿದೆ. ಜನರ ಓಡಾಟ ಕಂಡರೂ, ಅದು ಉಗ್ರದಾಳಿ ಖಂಡಿಸಿ, ‘ಹಿಂದೂಸ್ತಾನ್‌ ಜಿಂದಾಬಾದ್‌’ ಘೋಷಣೆಯೊಂದಿಗೆ, ಉಗ್ರರ ಸೆದೆಬಡಿವ ಆಗ್ರಹದೊಂದಿಗೆ ನಡೆಯುತ್ತಿರುವ ಪ್ರತಿಭಟನೆಯಾಗಿದೆ.

ಪ್ರವಾಸಿಗರನ್ನೇ ನಂಬಿಕೊಂಡಿದ್ದ ಕಾಶ್ಮೀರದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಪದ್ಮಶ್ರೀ ವಿಜೇತ ಕುಶಲಕರ್ಮಿ ಗುಲಾಂ ರಸೂಲ್‌ ಖಾನ್‌, ‘ಇಲ್ಲಿನ ವಾತಾವರಣವನ್ನು ಕೆಡಿಸುತ್ತಿರುವವರನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಬೇಕು. ಇಲ್ಲಿನ ಜನ ಪ್ರವಾಸೋದ್ಯಮದ ಮೇಲೆಯೇ ಅವಲಂಬಿತರಾಗಿದ್ದಾರೆ’ ಎಂದು ದುಃಖದಿಂದ ನುಡಿದಿದ್ದಾರೆ.

ಭಾರತ ಗಡಿ ಮುಚ್ಚಿದ್ರೆ ಪಾಕಿಸ್ತಾನದ ತಲೆನೋವಿಗೆ ಪ್ಯಾರಸಿಟಮಾಲ್ ಕೂಡ ಸಿಗೋಲ್ಲ!

5 ಉಗ್ರರು, 3 ಸ್ಥಳ, 10 ನಿಮಿಷದ ದಾಳಿ
26 ಪ್ರವಾಸಿಗರ ಬಲಿ ಪಡೆದ ಕಾಶ್ಮೀರದ ಪಹಲ್ಗಾಂ ದಾಳಿ ಹೇಗೆ ನಡೆದಿತ್ತು ಎಂಬ ಚಿತ್ರಣ ಇದೀಗ ಬಯಲಾಗಿದೆ. ದಾಳಿ ನಡೆದ ಬೈಸರಣ್‌ ಹುಲ್ಲುಗಾವಲು ಪ್ರದೇಶಕ್ಕೆ ಪಕ್ಕದಲ್ಲೇ ಇದ್ದ ಪೈನ್‌ ಅರಣ್ಯಗಳಿಂದ 5 ಜನರ ಉಗ್ರರ ಗುಂಪೊಂದು ಏಕಾಏಕಿ ಪ್ರವಾಸಿಗರು ಇದ್ದ 3 ವಿವಿಧ ಸ್ಥಳಗಳತ್ತ ಪ್ರತ್ಯೇಕವಾಗಿ ಧಾವಿಸಿತು.

ಬಳಿಕ ಅಲ್ಲಿ ಪುರುಷರನ್ನು ಮುಂದೆ ಕರೆದು, ಹಿಂದೂ ಮತ್ತು ಮುಸ್ಲಿಮರನ್ನು ಪ್ರತ್ಯೇಕವಾಗಿ ಸಾಲು ಮಾಡಿತು. ಎಲ್ಲರ ಬಳಿಯೂ ಕಲ್ಮಾ ಹೇಳಲು ಸೂಚಿಸಿದರು. ಯಾರು ಕಲ್ಮಾ ಹೇಳಲಿಲ್ಲವೋ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದರು. ಮತ್ತೊಂದು ಉಗ್ರರ ತಂಡ ಪ್ರವಾಸಿಗರ ಹೆಸರು ಕೇಳಿ ಅವರ ಗುರುತಿನ ಚೀಟಿ ಪರಿಶೀಲಿಸಿತು. ಜೊತೆಗೆ ಅವರ ವಸ್ತ್ರಗಳನ್ನು ಕಳಚಿ ಅವರು ಮುಸ್ಲಿಂ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಗುಂಡು ಹಾರಿಸಿತು. ಮೂರು ಸ್ಥಳಗಳ ಪೈಕಿ ಕೆಲವು ಕಡೆ ಸತತ 10 ನಿಮಿಷ ಗುಂಡು ಹಾರಿಸಿದರು. ಮೊದಲ ಗುಂಡಿನ ದಾಳಿ ನಡೆದಿದ್ದು ಮಧ್ಯಾಹ್ನ 1.50ರ ವೇಳೆಗೆ. ಆದರೆ ಆ ಕುರಿತ ಮೊದಲ ಮಾಹಿತಿ ಭದ್ರತಾ ಪಡೆಗಳಿಗೆ ರವಾನೆಯಾಗಿದ್ದು 2.30ರ ವೇಳೆಗೆ. ಸುದ್ದಿ ತಿಳಿದು ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಉಗ್ರರು ಅಲ್ಲಿಂದ ಪರಾರಿಯಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ