60 ಕೆಜಿ ಚಿನ್ನ, 10 ಕೆಜಿ ಬೆಳ್ಳಿ, 50 ಕೋಟಿ ನಗದು, ಕಾಶಿ ವಿಶ್ವನಾಥ ಕೂಡ ಈಗ ಶ್ರೀಮಂತ!

By Santosh NaikFirst Published Dec 13, 2022, 6:46 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದ ಕಾಶಿ ವಿಶ್ವನಾಥ ಧಾಮ ಮೊದಲ ವರ್ಷದಲ್ಲಿಯೇ ಕಾಣಿಕೆಗಳ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕಾಣಿಕೆಗಳ ರೂಪದಲ್ಲಿ ಭಕ್ತರು ನೀಡಿದ ಹಣ 100ಕೋಟಿಗೂ ಅಧಿಕ ಎಂದು ಅಂದಾಜು ಮಾಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ಗೆ ಸರ್ಕಾರ ಹಾಕಿದ್ದ ಹಣವನ್ನು ಹೆಚ್ಚೆಂದರೆ 4-5 ವರ್ಷಗಳಲ್ಲಿ ವಾಪಾಸ್‌ ಪಡೆದುಕೊಳ್ಳಲಿದೆ ಎನ್ನುವ ವಿಶ್ವಾಸ ಬಂದಿದೆ.

ಲಕ್ನೋ (ಡಿ.13): ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ ಭಕ್ತರ ಸಂಖ್ಯೆ ಮಾತ್ರವಲ್ಲದೆ ಇಲ್ಲಿಗೆ ಬೀಳುತ್ತಿರುವ ಕಾಣಿಖೆಯಲ್ಲೂ ದಾಖಲೆಯ ಏರಿಕೆಯಾಗಿದೆ. ಮಾಹಿತಿಯ ಪ್ರಕಾರ, ಕಾಶಿ ವಿಶ್ವನಾಥ ಧಾಮ ತನ್ನ ಮೊದಲ ವರ್ಷದಲ್ಲೇ ಕಾಣಿಕೆಗಳ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕಳೆದ ಒಂದು ವರ್ಷದಲ್ಲಿ, ಕಾಶಿ ವಿಶ್ವನಾಥ ಧಾಮಕ್ಕೆ ಭೇಟಿ ನೀಡಲು ಭಾರತ ಮತ್ತು ವಿದೇಶಗಳಿಂದ ಬಂದ ಶಿವಭಕ್ತರು, ಕಾಶಿ ವಿಶ್ವನಾಥನ ಧಾಮಕ್ಕೆ ನಗದು, ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳನ್ನು ಕಾಣಿಕೆಯ ರೂಪದಲ್ಲಿ ಅರ್ಪಿಸಿದ್ದಾರೆ.  ದೇವಸ್ಥಾನದ ಆಡಳಿತ ಮಂಡಳಿ ಹೇಳಿರುವ ಅಂದಾಜಿನ ಪ್ರಕಾರ, ಭಕ್ತರು ಕಾಣಿಕೆ ರೂಪದಲ್ಲಿ ನೀಡಿರುವ ವಸ್ತುಗಳ ಒಟ್ಟಾರೆ ಮೌಲ್ಯ 100 ಕೋಟಿಗೂ ಅಧಿಕವಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್‌ 13 ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮವನ್ನು ಲೋಕಾರ್ಪಣೆ ಮಾಡಿದ್ದರು. ಈ ವೇಳೆ ಸ್ಥಳೀಯ ಆಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯಿಂದ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಕುಮಾರ್ ವರ್ಮಾ ಅವರು ಧಾಮದಲ್ಲಿ ನೀಡಿರುವ ಕಾಣಿಕೆಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಧಾಮ ಉದ್ಘಾಟನೆಯಾದಾಗಿನಿಂದ ಭಕ್ತರು 50 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನಗದು ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಈ ಪೈಕಿ ಶೇ 40ರಷ್ಟು ಹಣ ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಲಾಗಿದೆ.

50 ಕೋಟಿಗೂ ಹೆಚ್ಚು ಬೆಲೆಬಾಳುವ ಚಿನ್ನ, ಬೆಳ್ಳಿ ಕಾಣಿಕೆ: ಸುನೀಲ್ ಕುಮಾರ್ ಪ್ರಕಾರ, ಕಾಶಿ ವಿಶ್ವನಾಥ ಧಾಮದಲ್ಲಿ 60 ಕೆಜಿ ಚಿನ್ನ, 10 ಕೆಜಿ ಬೆಳ್ಳಿ ಮತ್ತು 1500 ಕೆಜಿ ತಾಮ್ರವನ್ನು ಅರ್ಪಿಸಲಾಗಿದೆ. ಇದರ ಮೌಲ್ಯ 50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಮೂಲಕ 2021ರ ಡಿಸೆಂಬರ್ 13ರಿಂದ ಇಲ್ಲಿಯವರೆಗೆ ಭಕ್ತರು 100 ಕೋಟಿಗೂ ಹೆಚ್ಚು ಹಣವನ್ನು ಕಾಣಿಕೆ ಸಲ್ಲಿಸಿದ್ದಾರೆ. ಕಾಶಿ ವಿಶ್ವನಾಥ ದೇವಾಲಯದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ಕಾಣಿಕೆ ಹರಿದುಬಂದ ಇತಿಹಾಸ ಇದ್ದಿರಲಿಲ್ಲ. ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ.500ಕ್ಕೂ ಹೆಚ್ಚಾಗಿದೆ.  ಮತ್ತೊಂದೆಡೆ, ದೇವಾಲಯದ ಆಡಳಿತದ ಪ್ರಕಾರ, ದೇವಾಲಯದ ಉದ್ಘಾಟನೆಯ ನಂತರ 7.35 ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ.

ಕಾಶಿಗಿಂತ ನಾಲ್ಕು ಪಟ್ಟು ಬೃಹತ್‌ ಆದ ಮಹಾಕಾಳ ಕಾರಿಡಾರ್‌ ಅ. 11ಕ್ಕೆ ಮೋದಿಯಿಂದ ಲೋಕಾರ್ಪಣೆ

4-5 ವರ್ಷಗಳಲ್ಲಿ ನಿರ್ಮಾಣ ವೆಚ್ಚ ವಾಪಾಸ್‌: ಈ ವರ್ಷ ದಾಖಲೆ ಕಾಣಿಕೆಯಾಗಿರುವುದರಿಂದ ಮುಂದಿನ 4ರಿಂದ 5 ವರ್ಷಗಳಲ್ಲಿ ಭಕ್ತರ ಕಾಣಿಕೆ ಹಾಗೂ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡಗಳ ಆದಾಯದಿಂದ ಕಾರಿಡಾರ್‌ಗೆ ತಗಲುವ ವೆಚ್ಚವನ್ನು ವಾಪಾಸ್‌ ಪಡೆದುಕೊಳ್ಳಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಂದಾಜಿಸಿದೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮತ್ತು ಪರಿಹಾರಕ್ಕಾಗಿ ಸುಮಾರು 900 ಕೋಟಿ ರೂಪಾಯಿ ವೆಚ್ಚವಾಗಿದೆ. ಕಾಶಿ ವಿಶ್ವನಾಥ ಧಾಮ ಪ್ರಾರಂಭವಾದಾಗಿನಿಂದ ವಾರಣಾಸಿಗೆ ಪ್ರವಾಸಿಗರು ಮತ್ತು ಸಂದರ್ಶಕರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದಾಗಿ, ಸಾರಿಗೆ, ಹೋಟೆಲ್‌ಗಳು, ಅತಿಥಿಗೃಹಗಳು, ದೋಣಿ ನಡೆಸುವವರು, ಕಾರ್ಮಿಕರು, ಜವಳಿ ಉದ್ಯಮ, ಕರಕುಶಲ ಮತ್ತು ಇತರ ವ್ಯವಹಾರಗಳ ಮೂಲಕ ಆರ್ಥಿಕತೆಯು ವೇಗವನ್ನು ಪಡೆಯುತ್ತಿದೆ.

Kashi Vishwanath Dham: ಉ. ಪ್ರದೇಶದಲ್ಲಿ ಗಾಂಧಿಗಳಿಗೆ ಸಾಧ್ಯವಾಗದ್ದು, ಮೋದಿಗೆ ಸಾಧ್ಯವಾಗಿದ್ಹೇಗೆ.?

ಕಾಶಿ ವಿಶ್ವನಾಥ ದೇವಸ್ಥಾನ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಪ್ರತಿದಿನ ಸುಮಾರು 3,000 ಪ್ರವಾಸಿಗರು ಬರುತ್ತಾರೆ. ಕೆಲವು ಸಂದರ್ಭಗಳಲ್ಲಿ,  1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಈ ಧಾಮಕ್ಕೆ ಬರುತ್ತಾರೆ. 15.5 ಮೀಟರ್ ಎತ್ತರದ ಚಿನ್ನದ ಶಿಖರ ಮತ್ತು ಚಿನ್ನದ ಆನಿಯನ್‌ ಡೋಮ್‌ ದೇವಸ್ಥಾನದ ಆಕರ್ಷಣೆಯಾಗಿದೆ. 1835 ರಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರು ದಾನ ಮಾಡಿದ ಶುದ್ಧ ಚಿನ್ನದಿಂದ ಮಾಡಲಾದ ಮೂರು ಗುಮ್ಮಟಗಳು ಇದಾಗಿದೆ. ಶ್ರೀ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಅನ್ನು ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಮಣಿಕರ್ಣಿಕಾ ಘಾಟ್ ನಡುವೆ ಗಂಗಾ ನದಿಯ ಉದ್ದಕ್ಕೂ ನಿರ್ಮಿಸಲಾಗಿದೆ, ಇದು ಯಾತ್ರಾರ್ಥಿಗಳಿಗೆ ವಿವಿಧ ಸೌಕರ್ಯಗಳನ್ನು ಒದಗಿಸುತ್ತದೆ.

click me!