
ನಾಳೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಬಂಧಿಸಿದಂತೆ ದಿಲ್ಲಿಯಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ ಸೇರಿದಂತೆ 21 ವಿಪಕ್ಷ ನಾಯಕರು ಚೆನ್ನೈಗೆ ಬಂದು ಎಂ.ಕೆ. ಸ್ಟಾಲಿನ್ ಅವರ ಮನೆ ಬಾಗಿಲಿಗೆ ನಿಂತಿದ್ದು ಆಯಿತು. ಈ ದಿಲ್ಲಿಯ ಗದ್ದುಗೆಗೆ ಸಂಕಷ್ಟ ಎದುರಾದಾಗಲೆಲ್ಲಾ ತಮಿಳುನಾಡಿನ ನಾಯಕರು 'ಕಿಂಗ್‌ಮೇಕರ್' ಆಗುವುದು ಇದೇ ಮೊದಲಲ್ಲ. 1969ರ ಎಂ. ಕರುಣಾನಿಧಿ ಅವರಿಂದ ಹಿಡಿದು, ಜಯಲಲಿತಾ ಮತ್ತು ಇಂದಿನ ಸ್ಟಾಲಿನ್‌ವರೆಗೆ ದೆಹಲಿಯ ದಿಕ್ಕನ್ನೇ ಬದಲಿಸಿದ ಆ 7 ರೋಚಕ ಘಟನೆಗಳ ಹಿನ್ನೋಟ ಇಲ್ಲಿದೆ.
ಕಾಂಗ್ರೆಸ್ ಪಕ್ಷದಲ್ಲಿ ಒಡಕು ಉಂಟಾಗಿ ಇಂದಿರಾ ಗಾಂಧಿ ಅವರ ಸರ್ಕಾರ ಅಲ್ಪಮತಕ್ಕೆ ಕುಸಿದಾಗ, ಅವರಿಗೆ ಆಸರೆಯಾಗಿ ನಿಂತಿದ್ದು ತಮಿಳುನಾಡಿನ ಎಂ. ಕರುಣಾನಿಧಿ. ಅಂದು ಡಿಎಂಕೆಯ 25 ಸಂಸದರು ಬೆಂಬಲ ನೀಡಿದ್ದರಿಂದಲೇ ಇಂದಿರಾ ಸರ್ಕಾರ ಉಳಿಯಿತು, ವಿ.ವಿ. ಗಿರಿ ರಾಷ್ಟ್ರಪತಿಯಾದರು ಮತ್ತು ಐತಿಹಾಸಿಕ ಬ್ಯಾಂಕ್ ರಾಷ್ಟ್ರೀಕರಣ ಮಸೂದೆ ಪಾಸ್ ಆಯಿತು.
ತುರ್ತು ಪರಿಸ್ಥಿತಿಯ ವೇಳೆ ಡಿಎಂಕೆ ಸರ್ಕಾರವನ್ನು ವಜಾಗೊಳಿಸಿದಾಗ, ಎಂ.ಜಿ. ರಾಮಚಂದ್ರನ್ (MGR) ಅವರ ಎಐಎಡಿಎಂಕೆ ಪಕ್ಷವು ಕೇಂದ್ರ ಸರ್ಕಾರದ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳಿಗೆ ಬೆಂಬಲ ನೀಡಿ ದಿಲ್ಲಿಯ ನಿರ್ಧಾರಗಳಿಗೆ ಬಲ ತುಂಬಿತ್ತು.
ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ರಚನೆಯಾಗಲು ಮತ್ತು ಪ್ರಮುಖ ಮಸೂದೆಗಳು ಅಂಗೀಕಾರವಾಗಲು ಜಯಲಲಿತಾ ಅವರ ಎಐಎಡಿಎಂಕೆ (18 ಸಂಸದರು) ಕಾರಣವಾಗಿತ್ತು. ಆದರೆ 1999ರಲ್ಲಿ ಜಯಲಲಿತಾ ಬೆಂಬಲ ಹಿಂಪಡೆದಾಗ ವಾಜಪೇಯಿ ಸರ್ಕಾರ ಕೇವಲ 1 ಮತದ ಅಂತರದಿಂದ ಪತನಗೊಂಡು ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಬಳಿಕ ಡಿಎಂಕೆ ಎನ್‌ಡಿಎ ಕೈಹಿಡಿದು ಹೊಸ ಸರ್ಕಾರ ರಚನೆಗೆ ಕಾರಣವಾಯಿತು.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ಸರ್ಕಾರಕ್ಕೆ ಎಡಪಕ್ಷಗಳು ಬೆಂಬಲ ಹಿಂಪಡೆದಾಗ, ಸರ್ಕಾರ ಪತನದ ಅಂಚಿಗೆ ತಲುಪಿತ್ತು. ಆಗ ಕರುಣಾನಿಧಿ ಅವರ ಡಿಎಂಕೆ (16 ಸಂಸದರು) ಗಟ್ಟಿಯಾಗಿ ನಿಂತಿದ್ದರಿಂದಲೇ ವಿಶ್ವಾಸಮತ ಗೆದ್ದು, ಐತಿಹಾಸಿಕ ಅಣು ಒಪ್ಪಂದ ಮಸೂದೆ ಜಾರಿಗೆ ಬಂತು.
ಇಡೀ ದೇಶಕ್ಕೆ 'ಒಂದೇ ತೆರಿಗೆ' ಜಾರಿಗೆ ತರಲು ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು (2/3) ಬಹುಮತ ಬೇಕಿತ್ತು. ಅಂದು ಜಯಲಲಿತಾ ಅವರ ಎಐಎಡಿಎಂಕೆ ಪಕ್ಷವು ತಮಿಳುನಾಡಿಗೆ ವಿಶೇಷ ಪರಿಹಾರ ನೀಡುವ ಷರತ್ತಿನೊಂದಿಗೆ ಮಸೂದೆಯನ್ನು ಬೆಂಬಲಿಸಿದ್ದರಿಂದಲೇ ಜಿಎಸ್‌ಟಿ ಕಾನೂನಾಗಿ ಜಾರಿಯಾಯಿತು.
ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ, ರಾಜ್ಯಸಭೆಯಲ್ಲಿ ಸಂಖ್ಯಾಬಲವಿರಲಿಲ್ಲ. ಜಮ್ಮು-ಕಾಶ್ಮೀರದ ವಿಧಿ 370 ರದ್ದತಿ ಮತ್ತು ತ್ರಿವಳಿ ತಲಾಖ್ ನಿಷೇಧ ಮಸೂದೆ ಅಂಗೀಕಾರವಾಗುವಾಗ ಎಐಎಡಿಎಂಕೆ ಸಂಸದರು ರಾಜ್ಯಸಭೆಯಲ್ಲಿ ಸರ್ಕಾರದ ನೆರವಿಗೆ ನಿಂತು ಇತಿಹಾಸ ನಿರ್ಮಿಸಿದರು.
ಇಂದು ಸಂವಿಧಾನ ತಿದ್ದುಪಡಿ ಮಸೂದೆ ಪಾಸ್ ಮಾಡಲು ಕೇಂದ್ರ ಸರ್ಕಾರಕ್ಕೆ ಮೂರನೇ ಎರಡರಷ್ಟು (360 ಸಂಸದರು) ಬಹುಮತ ಬೇಕಿದೆ. ತಮಿಳುನಾಡಿನ ಲೋಕಸಭಾ ಸ್ಥಾನಗಳನ್ನು 39 ರಿಂದ 59ಕ್ಕೆ ಹೆಚ್ಚಿಸುವ ಮತ್ತು 1971ರ ಜನಗಣತಿಯ ಪಾಲನ್ನು 2051ರವರೆಗೆ ಉಳಿಸಿಕೊಳ್ಳುವ ಷರತ್ತಿನೊಂದಿಗೆ ಎಂ.ಕೆ. ಸ್ಟಾಲಿನ್ (22 ಸಂಸದರು) ಮಸೂದೆಗೆ ಬೆಂಬಲ ಸೂಚಿಸುವ ಮೂಲಕ ಮತ್ತೊಮ್ಮೆ ದಿಲ್ಲಿಯ 'ಕಿಂಗ್‌ಮೇಕರ್' ಆಗಿದ್ದಾರೆ. 1969ರಲ್ಲಿ ತಂದೆ ಕರುಣಾನಿಧಿ ದಿಲ್ಲಿಯ ಸರ್ಕಾರವನ್ನು ಉಳಿಸಿದ್ದರು, ಜಯಲಲಿತಾ ಒಂದು ಮತದಿಂದ ಸರ್ಕಾರ ಉರುಳಿಸಿ, ಜಿಎಸ್‌ಟಿಯಂತಹ ಮಸೂದೆಗೆ ಜೀವ ಕೊಟ್ಟಿದ್ದರು. ಈಗ ಅದೇ ಹಾದಿಯಲ್ಲಿ ಪುತ್ರ ಎಂ.ಕೆ. ಸ್ಟಾಲಿನ್ ಸಾಗಿದ್ದು, ದಿಲ್ಲಿಯ ಗದ್ದುಗೆಗೆ ತಮಿಳುನಾಡು ಈಗ ಮತ್ತೊಮ್ಮೆ 'ಕಿಂಗ್‌ಮೇಕರ್' ಆಗಿ ಹೊರಹೊಮ್ಮಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ