⦁ ವಿಜಯಪುರ ಮೂಲದ CISF ಯೋಧ ಶ್ರೀನಗರದಲ್ಲಿ ನಿಧನ..
⦁ ಯೋಧನ ಸ್ವಗ್ರಾಮದಲ್ಲಿ ಮಡುಗಟ್ಟಿದ ಶೋಕ..
⦁ ಯೋಧರ ಗ್ರಾಮ ಎಂದೇ ಖ್ಯಾತಿ ಪಡೆದಿರುವ ಲೋಣಿ ಬಿಕೆ ಗ್ರಾಮ..
⦁ ಇದೆ ಮೊದಲ ಬಾರಿ ದೇಶ ಸೇವೆಗೆ ಹೋದ ಯೋಧ ನಿಧನ..!
* ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಏ12) : ಶ್ರೀನಗರದಲ್ಲಿ ಗುಂಡು ತಗುಲಿ ವಿಜಯಪುರ ಜಿಲ್ಲೆಯ ಕೇಂದ್ರ ಆಂತರಿಕ ಭದ್ರತಾ ಪಡೆಯ ಸಿಬ್ಬಂದಿ ವೀರ ಮರಣ ಹೊಂದಿದ್ದಾರೆ. ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದ ಯೋಧ ದಯಾನಂದ ಮಲ್ಲಿಕಾರ್ಜುನ್ ಪಾಟೀಲ್ (27) ನಿಧನರಾಗಿದ್ದಾರೆ.. ಪೈರಿಂಗ್ ವೇಳೆ ಆಕಸ್ಮಿಕ ಗುಂಡು ತಗುಲಿದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ..
5 ವರ್ಷಗಳ ಹಿಂದೆ ಭದ್ರತಾ ಪಡೆ ಸೇರಿದ..! ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದ ದಯಾನಂದ ಪಾಟೀಲ್ ಕಳೆದ ಐದು ವರ್ಷದ ಹಿಂದೆ ಸಿಐಎಸ್‌ಎಫ್ ಸೇರ್ಪಡೆಯಾಗಿದ್ದ. ಮೊದಲಿನಿಂದಲು ಸೇನೆ ಸೇರಬೇಕು, ಭಾರತಾಂಬೆಯ ಸೇವೆ ಮಾಡಬೇಕು ಎನ್ನುವ ಹಂಬಲ ಇತ್ತು. ಕಷ್ಟಪಟ್ಟು ಭದ್ರತಾ ಪಡೆ ಸೇರಿದ್ದ ಎನ್ನಲಾಗಿದೆ. ದಯಾನಂದ ತಂದೆ ಟ್ರಕ್ ಡ್ರೈವರ್ ಆಗಿ, ಮಗನ್ನ ಬೆಳೆಸಿ ದೇಶಕ್ಕೆ ನೀಡಿದ್ದರು. ತಾಯಿ ಮಲ್ಲಮ್ಮ, ಸಹೋದರ ಭೀಮಾಶಂಕರ್ ಹಾಗೂ ಮೂವರು ಸಹೋದರಿಯರನ್ನ ಅಗಲಿದ್ದಾರೆ..
ವರ್ಷದ ಹಿಂದಷ್ಟೇ ಆಗಿತ್ತು ಮದುವೆ..! ದಯಾನಂದ ಪಾಟೀಲ್ ಕಳೆದ 2021 ಮೇ ತಿಂಗಳಲ್ಲಿ ಗ್ರಾಮಕ್ಕೆ ಆಗಮಿಸಿದ್ದಾಗ ಮದುವೆಯಾಗಿತ್ತು. ಮದುವೆಯಾದ ಬಳಿಕ ಪತ್ನಿಯನ್ನು ದಯಾನಂದ ಜೊತೆಗೆ ಕರೆದುಕೊಂಡು ಹೋಗಿದ್ದ. ಕರ್ತವ್ಯ ಕೈಗೊಂಡಿದ್ದ ಶ್ರೀನಗರದಲ್ಲೆ ಕಾಟರ್ಸ್ ನಲ್ಲಿ ದಯಾನಂದ ವಾಸವಿದ್ದ ಎನ್ನಲಾಗಿದೆ. ಇನ್ನು ಮಗನ ಸಾವಿನ ಸುದ್ದಿ ಕೇಳಿದ ತಾಯಿ ಮಲ್ಲಮ್ಮ, ತಂದೆ ಮಲ್ಲಿಕಾರ್ಜುನ್ ಸೇರಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ..
ಲೋಣಿ ಬಿಕೆಯಲ್ಲಿ ಮಡುಗಟ್ಟಿದ ಶೋಕ..! ದಯಾನಂದ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಲೋಣಿ ಬಿಕೆ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ದಯಾನಂದ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ಇದೆ ಮೊದಲ ಬಾರಿ ಈ ಗ್ರಾಮದಲ್ಲಿ ಸೇನೆಗೆ ಹೋದ ಯೋಧ ನಿಧನರಾಗಿದ್ದಾರೆ ಎನ್ನಲಾಗ್ತಿದೆ ಗ್ರಾಮಕ್ಕೆ ಗ್ರಾಮವೇ ಕಂಬನಿ ಮಿಡಿಯುತ್ತಿದೆ..
ಯೋಧರ ಗ್ರಾಮ ಚಡಚಣ ತಾ. ಲೋಣಿ ಬಿಕೆ..! ಇನ್ನು ಲೋಣಿ ಬಿಕೆ ಗ್ರಾಮವನ್ನ ಯೋಧರ ಗ್ರಾಮ ಅಂತಲೇ ಕರೆಯಲಾಗುತ್ತೆ. ಸಧ್ಯ 15 ಕ್ಕು ಅಧಿಕ ಯುವಕರು ದೇಶ ಸೇವೆಯಲ್ಲಿದ್ದಾರೆ. ಗ್ರಾಮದಲ್ಲಿ 40ಕ್ಕು ಅಧಿಕ ನಿವೃತ್ತ ಯೋಧರಿದ್ದಾರೆ. ಇನ್ನು ಇಷ್ಟು ವರ್ಷಗಳಲ್ಲೆ ದೇಶ ಸೇವೆಗೆ ತೆರಳಿದ ಯೋಧರು ಅನಾಹುತಕ್ಕೆ ಒಳಗಾಗಿರಲಿಲ್ಲ. ಇದೆ ಮೊದಲ ಬಾರಿ ದೇಶ ಸೇವೆಗೆ ಹೋದ ಗ್ರಾಮದ ಯುವಕ ಅಗಲಿದ್ದು ದುಃಖ ಹೆಚ್ಚಿಸಿದೆ.. ಇನ್ನು ಗ್ರಾಮದ ಹಿರಿಯರಾದ ಕೆ ಎಸ್ ಪಾಟೀಲ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕರು ಬಿಎಂ ಕೋರೆ, ಮುಖಂಡರಾದ ಚಂದ್ರಶೇಖರ್ ಅವಜಿ ಸೇರಿದಂತೆ ಗ್ರಾಮ ಗಣ್ಯರು ಯೋಧನ ನಿಧನಕ್ಕೆ ಕಂಬನಿಮಿಡಿದ್ದಾರೆ.
ನಾಡಿದ್ದು ಪಾರ್ಥಿವ ಶರೀರ ಬರೋ ಸಾಧ್ಯತೆ.. ಕರ್ತವ್ಯ ವೇಳೆಯಲ್ಲೆ ಗುಂಡಿಗೆ ಬಲಿಯಾದ ದಯಾನಂದ ಪಾಟೀಲ್ ಪಾರ್ಥಿವ ಶರೀರ ನಾಡಿದ್ದು ಸ್ವಗ್ರಾಮ ಲೋಣಿ ಬಿ ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಧ್ಯ ಬಂದಿರುವ ಪ್ರಾಥಮಿಕ ಮಾಹಿತಿಗಳಂತೆ ಮಿಸ್ ಪೈರ್ ನಿಂದ ಅವಘಡ ಎನ್ನಲಾಗ್ತಿದೆ. ಆದ್ರೆ ಅಸಲಿಗೆ ಅಲ್ಲಿ ನಡೆದದ್ದೇನು ಎನ್ನುವ ಮಾಹಿತಿ ಸಿಗಬೇಕಿದೆ. ಕೋಣೆಯೊಂದರಲ್ಲಿ ದಯಾನಂದ ರಕ್ತದ ಮಡುವಲ್ಲಿ ಬಿದ್ದಿರುವ ಪೋಟೊಗಳು ಲಭ್ಯವಾಗಿದ್ದು, ಕೋಣೆಯ ಚಾವಣಿಯ ಒಳ ಭಾಗದಲ್ಲಿ 5 ಗುಂಡುಗಳು ಸಹ ತಗುಲಿವೆ.. ಗನ್ ನಿಂದ ಹಾರಿದ ಗುಂಡುಗಳು ತಗುಲಿದ್ದಾ ಅಥವಾ ಉಗ್ರ ಪಡೆಯಿಂದ ಬಂದ ಗುಂಡು ತಗುಲಿದ್ದಾ ಎನ್ನುವ ಬಗ್ಗೆ ಮಾಹಿತಿಗಳು ಸಿಗಬೇಕಿದೆ.