ನಾವೀನ್ಯತೆಯಲ್ಲಿ ರಾಜ್ಯ ನಂ.1: ಸತತ 2ನೇ ಬಾರಿ ಪ್ರಥಮ ಸ್ಥಾನ!

By Kannadaprabha NewsFirst Published Jan 21, 2021, 7:36 AM IST
Highlights

ನಾವೀನ್ಯತೆಯಲ್ಲಿ ರಾಜ್ಯ ನಂ.1| ನೀತಿ ಆಯೋಗದ ಸೂಚ್ಯಂಕದಲ್ಲಿ ಸತತ 2ನೇ ಬಾರಿ ಪ್ರಥಮ ರಾರ‍ಯಂಕ್‌| ಮಹಾರಾಷ್ಟ್ರ ನಂ.2, ತಮಿಳುನಾಡು ನಂ.3| ಬಿಹಾರಕ್ಕೆ ಕೊನೆ ಸ್ಥಾನ

ನವದೆಹಲಿ(ಜ.21): ಉದ್ದಿಮೆಗಳಿಗೆ ಸಂಬಂಧಿಸಿದ ನಾವೀನ್ಯತಾ ಸೂಚ್ಯಂಕದಲ್ಲಿ ಸತತ ಎರಡನೇ ಬಾರಿ ಕರ್ನಾಟಕವು ದೇಶದಲ್ಲೇ ನಂ.1 ಸ್ಥಾನ ಪಡೆದಿದೆ. ನೀತಿ ಆಯೋಗ ಸಿದ್ಧಪಡಿಸಿರುವ ಇಂಡೆಕ್ಸ್‌ ಇದಾಗಿದ್ದು, ಮಹಾರಾಷ್ಟ್ರ ನಂ.2 ಹಾಗೂ ತಮಿಳುನಾಡು ನಂ.3 ಸ್ಥಾನ ಪಡೆದಿವೆ.

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹಾಗೂ ಸಿಇಒ ಅಮಿತಾಭ್‌ ಕಾಂತ್‌ ಬುಧವಾರ 2020ರ ‘ಇನ್ನೋವೇಶನ್‌ ಇಂಡೆಕ್ಸ್‌’ ಪಟ್ಟಿಬಿಡುಗಡೆ ಮಾಡಿದರು. ಜಾಗತಿಕ ನಾವೀನ್ಯತಾ ಸೂಚ್ಯಂಕದ ಮಾದರಿಯಲ್ಲೇ ನೀತಿ ಆಯೋಗ ಭಾರತದ ವಿವಿಧ ರಾಜ್ಯಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ನಾವೀನ್ಯತಾ ಸೂಚ್ಯಂಕ ಬಿಡುಗಡೆ ಮಾಡುತ್ತದೆ. ಒಂದು ವರ್ಷದಲ್ಲಿ ನೋಂದಣಿಯಾದ ಜಿಯೋಗ್ರಾಫಿಕಲ್‌ ಇಂಡಿಕೇಶನ್‌ (ಜಿಐ), ಸ್ಟಾರ್ಟಪ್‌ ಉದ್ದಿಮೆಗಳಲ್ಲಿ ಹೂಡಿಕೆಯಾದ ಬಂಡವಾಳ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ಪನ್ನಗಳ ರಫ್ತು, ಉದ್ಯೋಗ ಸೃಷ್ಟಿ, ವಿದೇಶಿ ನೇರ ಬಂಡವಾಳ ಹೂಡಿಕೆಯ ಹರಿವು ಸೇರಿದಂತೆ ಒಟ್ಟು 36 ಅಂಶಗಳನ್ನು ಆಧರಿಸಿ ಈ ರಾರ‍ಯಂಕಿಂಗ್‌ ನೀಡಲಾಗುತ್ತದೆ.

ದೊಡ್ಡ ರಾಜ್ಯಗಳ ವಿಭಾಗದಲ್ಲಿ ಕರ್ನಾಟಕ ಮೊದಲ ಸ್ಥಾನ, ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನ ಹಾಗೂ ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ಪಟ್ಟಿಯಲ್ಲಿ ಹಿಮಾಚಲ ಪ್ರದೇಶ ಮೊದಲ ಸ್ಥಾನ ಗಳಿಸಿವೆ. ಜಾರ್ಖಂಡ್‌, ಛತ್ತೀಸ್‌ಗಢ ಹಾಗೂ ಬಿಹಾರ ಕೊನೆಯಿಂದ ಮೂರು ಸ್ಥಾನಗಳನ್ನು ಪಡೆದಿವೆ.

ನಾವೀನ್ಯತಾ ಸೂಚ್ಯಂಕದಲ್ಲಿ ದೊಡ್ಡ ರಾಜ್ಯಗಳ ಸರಾಸರಿ ದರ 25.35 ಇದ್ದರೆ, ಕರ್ನಾಟಕದ ದರ 42.5 ಇದೆ. ಮಹಾರಾಷ್ಟ್ರದ ದರ 38 ಹಾಗೂ ಕೊನೆಯ ಸ್ಥಾನದಲ್ಲಿರುವ ಬಿಹಾರದ ದರ 14.5 ಇದೆ. ಪಟ್ಟಿಯಲ್ಲಿರುವ ಟಾಪ್‌ 5 ರಾಜ್ಯಗಳಲ್ಲಿ ನಾಲ್ಕು ರಾಜ್ಯಗಳು (ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಕೇರಳ) ದಕ್ಷಿಣ ಭಾರತದವು ಎಂಬುದು ವಿಶೇಷ. ಕಳೆದ ವರ್ಷವೂ ನೀತಿ ಆಯೋಗದ ನಾವಿನ್ಯತಾ ಸೂಚ್ಯಂಕದಲ್ಲಿ ಕರ್ನಾಟಕ ನಂ.1 ಸ್ಥಾನ ಗಳಿಸಿತ್ತು.

ಟಾಪ್‌ 5 ರಾಜ್ಯಗಳು

1. ಕರ್ನಾಟಕ

2. ಮಹಾರಾಷ್ಟ್ರ

3. ತಮಿಳುನಾಡು

4. ತೆಲಂಗಾಣ

5. ಕೇರಳ

ಕಳಪೆ ಸಾಧನೆಯ ರಾಜ್ಯಗಳು

1. ಬಿಹಾರ

2. ಛತ್ತೀಸ್‌ಗಢ

3. ಜಾರ್ಖಂಡ್

click me!