ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವನ್ನು 'ಒಳನುಸುಳುಕೋರರ ಮೈತ್ರಿಕೂಟ' ಮತ್ತು 'ಮಾಫಿಯಾದ ಗುಲಾಮ' ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಆದಿವಾಸಿ ಮೀಸಲಾತಿಗೆ ಕತ್ತರಿ ಬೀಳುವ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರ ಬಗ್ಗೆ ಅಗೌರವದ ಹೇಳಿಕೆ ನೀಡಿದ್ದಕ್ಕಾಗಿ ಶಿವಸೇನೆ ನಾಯಕರನ್ನು ಟೀಕಿಸಿದ್ದಾರೆ.
ರಾಂಚಿ:ಕೆಲ ದಿನಗಳಲ್ಲಿ ಚುನಾವಣೆ ಎದುರಿಸಲಿರುವಜಾರ್ಖಂಡ್‌ನಲ್ಲಿ ಸೋಮವಾರ ಮೊದಲ ಚುನಾವಣಾ ಸಮಾವೇಶ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟವನ್ನು 'ಒಳನುಸುಳುಕೋರರ ಮೈತ್ರಿಕೂಟ' ಹಾಗೂ 'ಮಾಫಿಯಾದ ಗುಲಾಮ' ಎಂದು ಟೀಕಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಜೆಎಂಎಂ-ಕಾಂಗ್ರೆಸ್ ಗೆದ್ದರೆ ಆದಿವಾಸಿಗಳ ಮೀಸಲಿಗೆ ಕತ್ತರಿ ಬೀಳಲಿದೆ. ಆ ಮೀಸಲು ಕಾಂಗ್ರೆಸ್‌ನ ಮುಸ್ಲಿಂ ಮತಬ್ಯಾಂಕ್‌ಗೆ ಹೋಗಲಿದೆ ಎಂದೂ ಎಚ್ಚರಿಸಿದ್ದಾರೆ.
ಗಢವಾ ಹಾಗೂ ಚೈಬಾಸಾದಲ್ಲಿ ಮಾತನಾಡಿದ ಮೋದಿ, 'ತುಷ್ಟಿಕರಣದ ರಾಜಕೀಯ ಉತ್ತುಂಗಕ್ಕೆ ತಲುಪಿದ್ದು, ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿಯನ್ನೊಳಗೊಂಡ ಮೈತ್ರಿಕೂಟ ಬಾಂಗ್ಲಾದ ಒಳನುಸು ಳುಕೋರರನ್ನು ಬೆಂಬಲಿಸುತ್ತಿದೆ. ಮತಬ್ಯಾಂಕ್ ರಾಜಕೀಯಕ್ಕಾಗಿ ಅವರಿಗೆ ರಾಜ್ಯದಲ್ಲಿ ನೆಲೆಸಲು ಅವಕಾಶ ನೀಡಲಾಗುತ್ತಿದೆ. ಇದು ಸಾಮಾಜಿಕ ವ್ಯವಸ್ಥೆ ಹಾಗೂ ಬುಡಕಟ್ಟು ಜನಾಂಗಕ್ಕೆ ಮಾರಕ. ಶಾಲೆಗಳಲ್ಲಿ ಸರಸ್ವತಿ ವಂದನೆ ನಿಲ್ಲಿಸಿ, ದುರ್ಗಾ ಪೂಜೆಯಂದು ಕರ್ಪ್ಯೂ ಜಾರಿಗೊಳಿಸಿದ್ದು ದೊಡ್ಡ ಬೆದರಿಕೆಯಾಗಿದೆ' ಎಂದರು.
ಮಹಿಳೆಯರಿಗೆ ಕೈ ಕೂಟ ಗೌರವ ನೀಡಲ್ಲ: ಮೋದಿ
ಮಹಾರಾಷ್ಟ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಶೈನಾ ಎನ್‌ಸಿ ಅವರನ್ನು ಶಿವಸೇನೆ (ಯುಬಿಟಿ) ಸಂಸದ ಅರವಿಂದ ಸಾವಂತ್ 'ಆಮದು ಮಾಲು' ಎಂದಿದ್ದನ್ನು ಖಂಡಿಸಿದ ಮೋದಿ, 'ಇಂಥ ಹೇಳಿಕೆಯಿಂದ ನಮ್ಮ ತಾಯಂದಿರು, ಅಕ್ಕ-ತಂಗಿಯರು ಆಘಾತಕ್ಕೆ ಒಳಗಾಗಿದ್ದಾರೆ. ಇದು ಕಾಂಗ್ರೆಸ್ ಮಿತ್ರರ ಮನಃಸ್ಥಿತಿಯ ಸಂಕೇತ. ಇದಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಹರಿಹಾಯ್ದರು. ಜಾರ್ಖಂಡ್‌ನಲ್ಲಿ ನ.13 ಹಾಗೂ ನ.20ರಂದು ಹಾಗೂ ಮಹಾರಾಷ್ಟ್ರದಲ್ಲಿ ನ.20ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ನ.23ಕ್ಕೆ ಮತ ಎಣಿಕೆ ಇದೆ.