ಜನೌಷಧಿ ಕೇಂದ್ರದಿಂದ 11 ವರ್ಷಗಳಲ್ಲಿ ಜನರ 38 ಸಾವಿರ ಕೋಟಿ ಉಳಿತಾಯ: ಕೇಂದ್ರದ ವರದಿ

Published : Jul 30, 2025, 03:40 PM IST
Jan Aushadhi Kendra

ಸಾರಾಂಶ

2025 ಜೂನ್ 30ರವರೆಗೆ ದೇಶಾದ್ಯಂತ 16,912 ಜನೌಷಧಿ ಕೇಂದ್ರಗಳನ್ನು (ಜೆಎಕೆ) ತೆರೆಯಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಹೇಳಿದ್ದಾರೆ. 

ನವದೆಹಲಿ (ಜು.30): ಒಂದೆಡೆ ಕರ್ನಾಟಕ ಸರ್ಕಾರ, ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರದಿಂದ ಆಗಿರುವ ಲಾಭಗಳ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಕಳೆದ 11 ವರ್ಷಗಳಲ್ಲಿ ಜನೌಷಧಿ ಮಳಿಗೆಗಳು ನಾಗರಿಕರಿಗೆ ಸುಮಾರು 38,000 ಕೋಟಿ ರೂ.ಗಳನ್ನು ಉಳಿಸಿವೆ ಎಂದು ಸಂಸತ್ತಿಗೆ ಮಂಗಳವಾರ ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, 2025 ಜೂನ್ 30ರವರೆಗೆ ದೇಶಾದ್ಯಂತ 16,912 ಜನೌಷಧಿ ಕೇಂದ್ರಗಳನ್ನು (ಜೆಎಕೆ) ತೆರೆಯಲಾಗಿದೆ ಎಂದು ಹೇಳಿದರು.

"ಈ ಯೋಜನೆಯ ಪರಿಣಾಮವಾಗಿ, ಕಳೆದ 11 ವರ್ಷಗಳಲ್ಲಿ, ಬ್ರಾಂಡೆಡ್ ಔಷಧಿಗಳ ಬೆಲೆಗಳಿಗೆ ಹೋಲಿಸಿದರೆ ನಾಗರಿಕರಿಗೆ ಸುಮಾರು 38,000 ಕೋಟಿ ರೂಪಾಯಿಗಳ ಉಳಿತಾಯವಾಗಿದೆ" ಎಂದು ಸಚಿವರು ಹೇಳಿದರು.

ರಾಷ್ಟ್ರೀಯ ಆರೋಗ್ಯ ಖಾತೆಗಳ ಅಂದಾಜಿನ ಪ್ರಕಾರ, ಸಾಮಾನ್ಯ ಜನರ ಆರೋಗ್ಯ ವೆಚ್ಚದಲ್ಲಿ ಇದು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದೆ. 2014-15ರಲ್ಲಿ ಜನರ ಆರೋಗ್ಯ ವೆಚ್ಚ ಶೇ. 62.6ರಷ್ಟಿದ್ದರೆ, 2021-22ರಲ್ಲಿ ಶೇ.39.4ಕ್ಕೆ ಇಳಿದಿದೆ. ಜನರ ಆರೋಗ್ಯ ವೆಚ್ಚ ಕಡಿಮೆಯಾಗಲು ಈ ಯೋಜನೆ ಗಮನಾರ್ಹವಾಗಿ ಕೊಡುಗೆ ನೀಡಿದೆ ಎಂದು ಅವರು ಹೇಳಿದ್ದಾರೆ.

"ಜನೌಷಧಿ ಔಷಧವನ್ನು ಮತ್ತಷ್ಟು ವಿಸ್ತರಿಸುವ ಮತ್ತು ಆ ಮೂಲಕ ಜೇಬಿನಿಂದ ಹೊರಗಾಗುವ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ, ಸರ್ಕಾರವು ಮಾರ್ಚ್ 2027 ರ ವೇಳೆಗೆ 25,000 ಜನೌಷಧಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಿದೆ" ಎಂದು ಪಟೇಲ್ ಹೇಳಿದರು. ಈ ಮಳಿಗೆಗಳು 2,110 ಔಷಧಿಗಳು ಮತ್ತು 315 ಶಸ್ತ್ರಚಿಕಿತ್ಸಾ, ವೈದ್ಯಕೀಯ ಉಪಭೋಗ್ಯ ವಸ್ತುಗಳು ಮತ್ತು ಎಲ್ಲಾ ಪ್ರಮುಖ ಚಿಕಿತ್ಸಕ ಗುಂಪುಗಳನ್ನು ಒಳಗೊಂಡ ಸಾಧನಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದರು.

ಈ ಯೋಜನೆಯಡಿಯಲ್ಲಿ ಮಾರಾಟವಾಗುವ ಉತ್ಪನ್ನಗಳು ಮಾರುಕಟ್ಟೆಯಲ್ಲಿನ ಪ್ರಮುಖ ಬ್ರಾಂಡ್ ಉತ್ಪನ್ನಗಳಿಗಿಂತ ಶೇ. 50-80 ರಷ್ಟು ಅಗ್ಗವಾಗಿವೆ. ಯೋಜನೆಯ ಉತ್ಪನ್ನ ಬುಟ್ಟಿಯಲ್ಲಿ ಒಟ್ಟು 61 ಶಸ್ತ್ರಚಿಕಿತ್ಸಾ ಉಪಕರಣಗಳಿವೆ ಎಂದು ಪಟೇಲ್ ತಿಳಿಸಿದ್ದಾರೆ.

ಈ ಯೋಜನೆಯಡಿಯಲ್ಲಿ, 2023-24 ಮತ್ತು 2024-25ರಲ್ಲಿ ಕ್ರಮವಾಗಿ 1,470 ಕೋಟಿ ರೂ. ಮತ್ತು 2,022.47 ಕೋಟಿ ರೂ. ಎಂಆರ್‌ಪಿ ಮೌಲ್ಯದ ಔಷಧಿಗಳನ್ನು ಮಾರಾಟ ಮಾಡಲಾಗಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌