
ಜಮ್ಮು : ಜಮ್ಮು-ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಗುರುವಾರ ಸಂಭವಿಸಿದ ಮೇಘಸ್ಫೋಟದಿಂದಲ್ಲಿ ಮೃತಪಟ್ಟವರ ಸಂಖ್ಯೆ 60 ದಾಟಿದೆ. ಈವರೆಗೆ 160ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ 38 ಜನರ ಸ್ಥಿತಿ ಚಿಂತಾಜನಕವಾಗಿದೆ. 100 ಮಂದಿಗೆ ಗಾಯಗಳಾಗಿವೆ.
ಕಿಶ್ತ್ವಾರ್ ಸನಿಹ ಶನಿವಾರ ದೇವಿ ಜಾತ್ರೆ ನಡೆಯುತ್ತಿರುವ ವೇಳೆ ಮೇಘಸ್ಫೋಟ ಸಂಭವಿಸಿತ್ತು. ಆಗ ಭಾರಿ ಮಳೆ ಕಾರಣ ಪ್ರವಾಹ ಸೃಷ್ಟಿಯಾಗಿ ಜನರು ಕೊಚ್ಚಿಹೋಗಿದ್ದರು. ಈ ನಡುವೆ ಘಟನಾ ಸ್ಥಳಕ್ಕೆ ಶನಿವಾರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭೇಟಿ ನೀಡಲಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಿಎಂ, ‘ಭಾನುವಾರ ಈ ಬಗ್ಗೆ ವಿಚಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದ್ದರು. ಅವರಿಗೆ ಎಲ್ಲಾ ಮಾಹಿತಿಗಳನ್ನು ನೀಡಿದ್ದೇನೆ. ಎಲ್ಲಾ ನೆರವು ನೀಡಿದ್ದಕ್ಕಾಗಿ ನಮ್ಮ ಜನ ಮತ್ತು ಸರ್ಕಾರದ ಪರವಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರತಿಕೂಲ ಹವಾಮಾನದ ಮುನ್ಸೂಚನೆ ಇದ್ದರೂ ಏಕೆ ಇಷ್ಟೊಂದು ಸಾವಾಯಿತು ಎಂಬುದನ್ನು ತನಿಖೆ ಮಾಡಿಸುತ್ತೇನೆ. ಇದರ ಹೊಣೆ ನಾವೇ ಹೊರಬೇಕು’ ಎಂದು ವಿಷಾದದ ಧಾಟಿಯಲ್ಲಿ ಹೇಳಿದರು.
ಮತ್ತೊಂದೆಡೆ ಮೃತಪಟ್ಟವರ ಪೈಕಿ 21 ಜನರ ಗುರುತು ಪತ್ತೆಯಾಗಿದೆ. ಗುರುತು ಪತ್ತೆಗಾಗಿಯೇ ವಾಟ್ಸಾಪ್ ಗ್ರೂಪ್‌ಗಳನ್ನು ಮಾಡಿದ್ದು, ಭದ್ರತಾ ಸಿಬ್ಬಂದಿ ಅದರಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಭಾರಿ ಮಳೆ: 150ಕ್ಕೂ ಹೆಚ್ಚು ಸಾವು
ಪೇಶಾವರ/ಇಸ್ಲಾಮಾಬಾದ್ : ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ ಒಂದೇ ದಿನದಲ್ಲಿ 150ಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ. ಖೈಬರ್ ಪಖ್ತುನ್ವಾ, ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಭೂಕುಸಿತಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಅನಿರೀಕ್ಷಿತ ಭಾರಿ ಮಳೆಯಿಂದಾಗಿ ಗಿಲ್ಗಿಟ್ ಬಾಲ್ಟಿಸ್ತಾನ್ ಹೆದ್ದಾರಿ, ಕಾರಕೋರಂ ಹೆದ್ದಾರಿಗಳು ತೀವ್ರವಾಗಿ ಹಾನಿಯಾಗಿವೆ. ಪ್ರವಾಹದಿಂದಾಗಿ ತಗ್ಗು ಪ್ರದೇಶಗಳು ಕೊಚ್ಚಿ ಹೋಗಿದ್ದು, ಪರಿಣಾಮ ಗುಡ್ಡ ಕುಸಿತಗಳು ಸಂಭವಿಸಿವೆ. ನೀಲಂ ಮತ್ತು ಝೇಲಂ ಕಣಿವೆಗಳಲ್ಲಿ ಜನರು ಪರದಾಡುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪಿಒಕೆಯ ಮುಜಫ್ಫರಾಬಾದ್ ಜಿಲ್ಲೆಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು 6 ಜನರ ಕುಟುಂಬವೇ ಮೃತಪಟ್ಟಿದೆ. ಗಿಲ್ಗಿಟ್ ಪ್ರಾಂತ್ಯದಲ್ಲಿ ಸುಮಾರು 600 ಪ್ರವಾಸಿಗರು ಅತಂತ್ಯಕ್ಕೆ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಇನ್ನು ಏರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ