ಪತಿ ಅಥವಾ ಕುಟುಂಬದವರಿಲ್ಲದೆ ಮಹಿಳೆಯರು ಮಸೀದಿಗೆ ಬರುವಂತಿಲ್ಲ: ಜಾಮಾ ಮಸೀದಿ ಆದೇಶ!

By Santosh NaikFirst Published Nov 24, 2022, 6:40 PM IST
Highlights

ದೆಹಲಿಯ ಜಾಮಾ ಮಸೀದಿ ಆಡಳಿತ ಮಂಡಳಿ, ಜಾಮಾ ಮಸೀದಿಗೆ ಮಹಿಳೆಯರು ತನ್ನ ಪತಿ ಅಥವಾ ಕುಟುಂಬ ಸದಸ್ಯರ ಜೊತೆ ಬರುವುದನ್ನು ಕಡ್ಡಾಯ ಮಾಡಿದೆ. ಒಬ್ಬರೇ ಮಸೀದಿಯ ಒಳಗೆ ಬರಲು ಅನುಮತಿಯಿಲ್ಲ ಎಂದು ಹೇಳಿದ್ದು ಇದನ್ನು ದೆಹಲಿ ಮಹಿಳಾ ಆಯೋಗ ಖಂಡನೆ ಮಾಡಿದೆ.

ನವದೆಹಲಿ (ನ.24): ದೆಹಲಿಯ ಜಾಮಾ ಮಸೀದಿಯಲ್ಲಿ ಮಹಿಳೆಯರ ಏಕಾಂಗಿ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ನೋಟಿಸ್‌ನ ಪ್ರತಿಯನ್ನು ಮಸೀದಿಯ ಗೋಡೆಗಳ ಮೇಲೆ ಅಂಟಿಸಲಾಗಿದೆ, ಅದರ ಪ್ರಕಾರ ಹೆಣ್ಣುಮಕ್ಕಳು ಅಥವಾ ಹುಡುಗಿಯರು ಏಕಾಂಗಿಯಾಗಿ ಮಸೀದಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಅಂದರೆ ಹುಡುಗಿಯರ ಗುಂಪು ಕೂಡ ಮಸೀದಿಯೊಳಗೆ ಹೋಗುವಂತಿಲ್ಲ.  ಈ ಬಗ್ಗೆ ಮಸೀದಿ ಆಡಳಿತ ಮಂಡಳಿಯವರು ಕಾರಣ ನೀಡಿ ಒಂಟಿ ಹುಡುಗಿಯರು ಸಮಯಾವಕಾಶ ನೀಡಿ ಹುಡುಗರನ್ನು ಮಸೀದಿಯಲ್ಲಿ ಭೇಟಿಯಾಗಲು ಆಹ್ವಾನಿಸುತ್ತಾರೆ. ಅವರು ಇಲ್ಲಿ ಡ್ಯಾನ್ಸ್ ವಿಡಿಯೋ ಮಾಡುತ್ತಾರೆ, ನಾವು ಅದನ್ನು ಬ್ಯಾನ್ ಮಾಡುತ್ತಿದ್ದೇವೆ. ಆದರೆ, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ವಿಷಯವಾಗಿ ಮಸೀದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಆದೇಶದ ಬಗ್ಗೆ ವಿವಾದ ಹೆಚ್ಚಿದ ನಂತರ, ಜಾಮಾ ಮಸೀದಿ ವಕ್ತಾರ ಸಬೀವುಲ್ಲಾ ಖಾನ್ ಸ್ಪಷ್ಟೀಕರಣ ನೀಡಿದ್ದು, ಕುಟುಂಬ ಅಥವಾ ಪತಿಯೊಂದಿಗೆ ಬರುವ ಮಹಿಳೆಯರಿಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಸೀದಿ ಆವರಣದಲ್ಲಿ ಅನೈತಿಕ ಚಟುವಟಿಕೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

| Delhi|Women's entry not banned. When women come alone-improper acts done, videos shot,ban is to stop this. No restrictions on families/married couples.Making it a meeting point inapt for religious places:Sabiullah Khan,Jama Masjid PRO on entry of women coming alone banned pic.twitter.com/HiOebKaiGr

— ANI (@ANI)


ಮಹಿಳೆಯರಿಗೆ ನಿಷೇಧ ಹೇರಿಲ್ಲ ಎಂದು ಈ ವೇಳೆ ಸ್ಪಷ್ಟನೆ ನೀಡಿದ್ದಾರೆ. ಕುಟುಂಬ ಅಥವಾ ವಿವಾಹಿತ ದಂಪತಿಗಳಿಗೆ ಯಾವುದೇ ನಿಷೇಧವಿಲ್ಲ. ಆದರೆ, ಇಲ್ಲಿಗೆ ಒಬ್ಬೊಬ್ಬರೇ ಬರುವ ಹುಡುಗಿಯರು, ಹುಡಗರನ್ನು ಭೇಟಿ ಮಾಡಲು ಸಮಯ ನೀಡುತ್ತಾರೆ. ಇಲ್ಲಿ ಅನುಚಿತ ವರ್ತನೆ ನಡೆಯುತ್ತದೆ. ಹುಡುಗಿಯರು ಮಸೀದಿಯಲ್ಲಿ ನೃತ್ಯ ಮಾಡುತ್ತಾರೆ. ಅದನ್ನು ಇನ್ಸ್‌ಟಾಗ್ರಾಮ್‌ ಹಾಗೂ ಟಿಕ್‌ ಟಾಕ್‌ನಲ್ಲಿ ವಿಡಿಯೋಗಳನ್ನು ಮಾಡುತ್ತಾರೆ. ಈ ಎಲ್ಲಾ ಚಟುವಟಿಕೆಗಳನ್ನು ತಡೆಯಲು ಈ ನಿಷೇಧ ಹೇರಲಾಗಿದೆ. ಯಾರು ಬೇಕಾದರೂ ಇಲ್ಲಿ ಬರಬಹುದು. ಆದರೆ, ಪ್ರಾರ್ಥನೆಗೆ ಮಾತ್ರವೇ ಅವಕಾಶ. ಆದರೆ, ಯಾರೂ ಕೂಡ ಧಾರ್ಮಿಕ ಸ್ಥಳವನ್ನು ಪಾರ್ಕ್‌ ಎನ್ನುವ ರೀತಿಯಲ್ಲಿ ಪರಿಗಣಿಸುವುದನ್ನು ನಾವು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಧಾರ್ಮಿಕ ಸ್ಥಳಗಳು ಯಾವುದೇ ಆಗಿರಲಿ, ಅದು ಮಸೀದಿ, ದೇವಸ್ಥಾನ ಅಥವಾ ಗುರುದ್ವಾರವೇ ಆಗಿರಲಿ. ಪ್ರಾರ್ಥನೆ ಮಾಡಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದರೆ, ಧಾರ್ಮಿಕ ಸ್ಥಳಗಳಿಗೆ ಬಂದು ನೃತ್ಯ ಮಾಡುವುದು, ವಿಡಿಯೋ ಮಾಡುವುದನ್ನು ಸಹಿಸಲು ಆಗೋದಿಲ್ಲ. ಇಂದೂ ಕೂಡ ಜಾಮಾ ಮಸೀದಿಗೆ 20 ರಿಂದ 25 ಮಹಿಳೆಯರ ಗುಂಪು ಬಂದಿತ್ತು. ಅವರೆಲ್ಲರಿಗೂ ಪ್ರವೇಶ ನೀಡಲಾಗಿದೆ ಎಂದು ಮಸೀದಿಯ ಆಡಳಿತ ಮಂಡಳಿ ತಿಳಿಸಿದೆ.

ಯುಪಿ ಬದೌನ್‌ನ ಜಾಮಾ ಮಸೀದಿಯ ಸ್ಥಳ ಶಿವ ದೇವಸ್ಥಾನ, ಸೆ. 9ಕ್ಕೆ ಕೋರ್ಟ್‌ನಲ್ಲಿ ವಿಚಾರಣೆ

ಪಿಟಿಐ ವರದಿಯ ಪ್ರಕಾರ ಪ್ರತಿನಿತ್ಯ ಸಾವಿರಾರು ಜನರನ್ನು ಆಕರ್ಷಣೆ ಮಾಡುವ 17 ನೇ ಶತಮಾನದ ಮೊಘಲ್-ಯುಗದ ಸ್ಮಾರಕದ ಹೊರಗಡೆ ನೋಟಿಸ್‌ ಅಂಟಿಸಲಾಗಿದ್ದು, ಜಾಮಾ ಮಸೀದಿಯ ಒಳಗೆ ಮಹಿಳೆಯರ ಏಕಾಂಗಿ ಪ್ರವೇಶ ಹಾಗೂ ಮಹಿಳೆಯರ ಗುಂಪಿನ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ ಎಂದು ಬರೆಯಲಾಗಿದೆ. ಹಾಗಂತ ಮಸೀದಿಯಲ್ಲಿ ವಿಡಿಯೋ ಮಾಡುವುದು, ನೃತ್ಯ ಮಾಡುವಂಥ ಚಟುವಟಿಕೆಯಲ್ಲಿ ಮಹಿಳೆಯರು ಮಾತ್ರವೇ ಭಾಗಿಯಾಗಿದ್ದಾರೆ ಎನ್ನುವುದನ್ನು ಮಸೀದಿಯ ಆಡಳಿತ ಮಂಡಳಿ ಒಪ್ಪಿಕೊಂಡಿಲ್ಲ. ಅವರ ನೋಟಿಸ್‌ನಲ್ಲೂ ಇದನ್ನು ಹೇಳಲಾಗಿಲ್ಲ. ನೋಟಿಸ್‌ನ ಯಾವ ಕಡೆಯಲ್ಲೂ ಇಂಥ ಕೃತ್ಯದಲ್ಲಿ ಭಾಗಿಯಾಗುವ ಪುರುಷರಿಗೂ ನಿಷೇಧ ವಿಧಿಸಲಾಗುವುದು ಎಂದು ಬರೆದಿಲ್ಲ.

Fact Check: ಜಾಮಾ ಮಸೀದಿಯ ಗುಮ್ಮಟಕ್ಕೆ ಹಾನಿ? ಇಲ್ಲಿದೆ ವೈರಲ್‌ ಫೋಟೋ ಅಸಲಿಯತ್ತು

ಇದಕ್ಕೂ ಮುನ್ನ ಜಾಮಾ ಮಸೀದಿಗೆ ಬರುವ ವ್ಯಕ್ತಿಗಳಿಗೆ ಫೋಟೋ ಹಾಗೂ ಚಿತ್ರಗಳನ್ನು ತೆಗೆಯುವ ಅವಕಾಶ ಇದ್ದಿರಲಿಲ್ಲ. "ಮಸೀದಿಯೊಳಗೆ ಸಂಗೀತ ವೀಡಿಯೊ ಚಿತ್ರೀಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ." ಎನ್ನುವ ಸೂಚನೆಯನ್ನೂ ಕಾಣಬಹುದಾಗಿದೆ.

ನಿರ್ಧಾರ ತಪ್ಪು ಎಂದ ಮಹಿಳಾ ಆಯೋಗ: ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ತಡೆಯುವ ನಿರ್ಧಾರ ಸಂಪೂರ್ಣ ತಪ್ಪು ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ಮಹಿಳೆ ಮತ್ತು ಪುರುಷರ ನಡುವೆ ಪ್ರಾರ್ಥನೆಯ ಹಕ್ಕಿನಲ್ಲಿ ಯಾವುದೇ ವ್ಯತ್ಯಾಸ ಇರಬಾರದು. ಈ ವಿಚಾರದಲ್ಲಿ ಜಾಮಾ ಮಸೀದಿಗೆ ನೋಟಿಸ್ ನೀಡುತ್ತಿರುವುದಾಗಿಯೂ ತಿಳಿಸಿದ್ದಾಳೆ.

 

click me!