ಜಹಾಂಗೀರಪುರಿ ದಿಲ್ಲಿ ಗಲಭೆ 'ಸೂತ್ರಧಾರಿ' ಅನ್ಸಾರ್‌ ಬಂಧನ

Published : Apr 18, 2022, 03:31 AM IST
ಜಹಾಂಗೀರಪುರಿ ದಿಲ್ಲಿ ಗಲಭೆ 'ಸೂತ್ರಧಾರಿ' ಅನ್ಸಾರ್‌ ಬಂಧನ

ಸಾರಾಂಶ

ಅನ್ಸಾರ್‌, ಗುಂಡು ಹಾರಿಸಿದ ಅಸ್ಲಾಂ ಸೇರಿ 20 ಮಂದಿ ಸೆರೆ ತನಿಖೆಯ ವೇಳೆ ಅನ್ಸಾರ್‌ ಸೂತ್ರಧಾರಿ ಎಂಬ ವಿಷಯ ಬೆಳಕಿಗೆ ಗಲಭೆಕೋರರ ಬಳಿ ಇದ್ದವು ಮಾರಕಾಸ್ತ್ರ, ಪಿಸ್ತೂಲು, ಕಲ್ಲು

ನವದೆಹಲಿ(18): ಹನುಮ ಜಯಂತಿ ವೇಳೆ ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ(Jahangirpuri) ಶನಿವಾರ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಘಟನೆಯ ‘ಸೂತ್ರಧಾರಿ’ ಎಂದು ಹೇಳಲಾಗಿರುವ ಅನ್ಸಾರ್‌ (Anser) ಹಾಗೂ ಪೊಲೀಸರು, ಹನುಮ ಭಕ್ತರು ಮತ್ತು ಜನರ ಮೇಲೆ 7-8 ಸುತ್ತು ಗುಂಡು ಹಾರಿಸಿದ್ದ ಮೊಹಮ್ಮದ್‌ ಅಸ್ಲಾಂ (Mohammed Aslam) ಸೇರಿದಂತೆ 20 ಮಂದಿಯನ್ನು ಭಾನುವಾರ ಬಂಧಿಸಿದ್ದಾರೆ.

ಅನ್ಸಾರ್‌ (35) ಎಂಬಾತ ಈ ಘಟನೆಯ ಸೂತ್ರಧಾರ ಎಂದು ತನಿಖೆಯ ವೇಳೆ ಗೊತ್ತಾಗಿದೆ. ಈತ ಈ ಹಿಂದೆ 2 ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ಜೂಜಾಟ ಪ್ರಕರಣಗಳಲ್ಲಿ ಅನೇಕ ಬಾರಿ ಬಂಧಿತನಾಗಿದ್ದ. ತನಿಖೆಯ ವೇಳೆ ಈತನೇ ಸೂತ್ರಧಾರಿ ಎಂದು ತಿಳಿದುಬಂದಿದೆ. ಹೀಗಾಗಿ ಈತನನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಡಿಸಿಪಿ ಉಷಾ ರಂಗ್ನಾನಿ (Usha Rangnani) ತಿಳಿಸಿದ್ದಾರೆ.

ಇದೇ ವೇಳೆ, ಇನ್ನೊಬ್ಬ ಬಂಧಿತ ಮೊಹಮ್ಮದ್‌ ಅಸ್ಲಾಂ (21) ಕೂಡ ಒಬ್ಬ ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿಯಾಗಿದ್ದು, ಸಬ್‌ ಇನ್ಸ್‌ಪೆಕ್ಟರ್‌ (Sub Inspector) ಒಬ್ಬರು ಸೇರಿದಂತೆ ಹಲವರ ಮೇಲೆ 7-8 ಸುತ್ತು ಗುಂಡು ಹಾರಿಸಿದ್ದ. ಈತನಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ. 2020ರಲ್ಲಿ ಕೂಡ ಈತ ಮಾರಕಾಸ್ತ್ರ ಬಳಸಿ ಹಲ್ಲೆ ನಡೆಸಿದ ಕೃತ್ಯದಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಅಸ್ಲಾಂ ಇನ್ನೂ ಅಪ್ರಾಪ್ತ ಆತ ಹುಟ್ಟಿದ್ದು 2005ರಲ್ಲಿ ಎಂದು ಹೇಳಿಕೊಂಡಿದ್ದಾರೆ. ಇದನ್ನು ಪೊಲೀಸರು(Police) ತಳ್ಳಿಹಾಕಿದ್ದು, ಬಂಧಿತನ ವಯಸ್ಸು 21 ಎಂದು ಸ್ಪಷ್ಟಪಡಿಸಿದ್ದಾರೆ.

ಮಾರಕಾಸ್ತ್ರ ಹೇಗೆ ಬಂದವು ಎಂಬ ತನಿಖೆ

ಪ್ರಸಕ್ತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಭಾರೀ ಭದ್ರತೆ ಏರ್ಪಡಿಸಲಾಗಿದೆ. ಗಲಭೆಕೋರರ ಬಳಿ ಪಿಸ್ತೂಲು, ಮಾರಕಾಸ್ತ್ರ ಹಾಗೂ ಭಾರೀ ಪ್ರಮಾಣದಲ್ಲಿ ಕಲ್ಲು ಇದ್ದವು ಎಂದು ಸ್ಥಳದಲ್ಲಿದ್ದ ಪೊಲೀಸರೇ ನೋಡಿದ್ದಾರೆ. ಹೀಗಾಗಿ ಇಷ್ಟೊಂದು ಅಸ್ತ್ರಗಳು ಅವರ ಬಳಿ ಹೇಗೆ ತಲುಪಿದವು ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಕಲ್ಲು ತೂರಾಟದಲ್ಲಿ ಮಕ್ಕಳೂ ಭಾಗಿ

ಶನಿವಾರ ಶೋಭಾಯಾತ್ರೆ ವೇಳೆ ನಡೆದ ಕಲ್ಲುತೂರಾಟದಲ್ಲಿ (stone Pelting) ಹಲವು ಚಿಕ್ಕ ಮಕ್ಕಳು ಕೂಡಾ ಭಾಗಿಯಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳಲ್ಲಿ ಮಕ್ಕಳು ಕೂಡಾ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಇಂಥ ಕೃತ್ಯಕ್ಕೆ ಬಳಸಿಕೊಂಡವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸುವಂತೆ ಮಕ್ಕಳ ಹಕ್ಕುಗಳ ಕುರಿತ ರಾಷ್ಟ್ರೀಯ ಆಯೋಗ ಪೊಲೀಸರಿಗೆ ಸೂಚಿಸಿದೆ.

ಶನಿವಾರ ಏನಾಗಿತ್ತು?

ಶನಿವಾರ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಜಹಾಂಗೀರ್‌ಪುರಿಯಲ್ಲಿ ಮಸೀದಿಯೊಂದರ ಮುಂದೆ ಕೋಮುಗಲಭೆ ಸಂಭವಿಸಿತ್ತು. ಮುಸ್ಲಿಂ ಸಮುದಾಯದವರು ಹಾಗೂ ಹನುಮ ಭಕ್ತರ ನಡುವೆ ಕಲ್ಲು ತೂರಾಟ ನಡೆದಿತ್ತು. ಎರಡೂ ಗುಂಪಿನ ನಡುವಿನ ಘರ್ಷಣೆಯಲ್ಲಿ ಪೊಲೀಸರು ಸಿಕ್ಕಿಬಿದ್ದಿದ್ದರು ಹಾಗೂ 8 ಪೊಲೀಸರು ಸೇರಿ 9 ಮಂದಿಗೆ ಗಾಯಗಳಾಗಿದ್ದವು. ಹಲವು ವಾಹನಗಳಿಗೆ ಕೂಡ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ