
ದೆಹಲಿ (ನ.25) ಮದುವೆ ಸಂಭ್ರಮ ಒಂದೆರೆಡು ದಿನಕ್ಕೆ ಮುಗಿಯಲ್ಲ. ಹಳದಿ, ಮಹೆಂದಿ, ಸಂಗೀತ್ ಸೆರೆಮನಿ ಸೇರಿದಂತೆ ಕನಿಷ್ಠ ಒಂದು ವಾರ ಸಂಭ್ರಮವೋ ಸಂಭ್ರಮ. ಈಗ ಪಾರ್ಟಿ ಇಲ್ಲದೆ ಯಾವುದೇ ಮದುವೆ ಆರಂಭಗೊಳ್ಳುವುದಿಲ್ಲ, ಮದುವೆ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಪ್ರತಿ ಕಾರ್ಯಕ್ರಮದಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗುತ್ತದೆ. ಅದರಲ್ಲೂ ಮಹೆಂದಿ, ಹಳದಿ, ಸಂಗೀತ್ ಕಾರ್ಯಕ್ರಮ ಸೇರಿದಂತೆ ಕೆಲ ಕಾರ್ಯಕ್ರಮ ತಡ ರಾತ್ರಿವರೆಗೂ, ಕೆಲವೊಮ್ಮೆ ಮುಂಜಾನೆವರೆಗೂ ನಡೆಯುತ್ತದೆ. ಹೀಗೆ ಪಾರ್ಟಿಯಲ್ಲಿ ಮಿಂದೆದ್ದು, ಬಳಿಕ ಮದುವೆಗೆ ಹಾಜಾರುವುದು ಹೇಗೆ? ಹ್ಯಾಂಗೋವರ್‌ನಿಂದ ತಲೆ ಎತ್ತಲು ಸಾಧ್ಯವಾಗದ ಪರಿಸ್ಥಿತಿ ಹೊಸದೇನಲ್ಲ. ಹೀಗಾಗಿ ಇಂತ ಹ್ಯಾಂಗೋವರ್ ಪಾರ್ಟಿಗಳಿಂದ ಹೊರಬರಲು ಮದುವೆ ಮನೆಯಲ್ಲೇ ಐವಿ ಡ್ರಿಪ್ ಹಾಕಿದ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ತಜ್ಞರು ಇದರ ಅಪಾಯವನ್ನು ಬಿಡಿಸಿ ಹೇಳಿದ್ದಾರೆ.
ದೆಹಲಿಯ ಮದುವೆ ಮನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಮದುವೆ ಮನೆಯಲ್ಲೇ ಮಿನಿ ಐವಿ ಡ್ರಿಪ್ ಸೆಂಟರ್ ತೆರೆಯಲಾಗಿದೆ. ವೈದ್ಯರು, ನರ್ಸ್, ಹ್ಯಾಂಗೋವರ್‌ನಿಂದ ತಲೆ ಎತ್ತಲೂ ಸಾಧ್ಯವಾಗದವರಿಗೆ ಡ್ರಿಪ್ ಹಾಕುತ್ತಿದ್ದಾರೆ. ಕೇವಲ ಮದ್ಯ ಪಾರ್ಟಿ ಮಾಡಿ ಹ್ಯಾಂಗೋವರ್ ಆದವರಿಗೆ ಮಾತ್ರವಲ್ಲ, ತಡರಾತ್ರಿ ವರೆಗೆ ಪಾರ್ಟಿಯಲ್ಲಿ ಕುಣಿದು ಸುಸ್ತಾದವರಿಗೂ ಡ್ರಿಪ್ ಹಾಕಲಾಗಿದೆ. ಸಾಮೂಹಿಕವಾಗಿ ಮದುವೆಯ ಮನೆಯ ಬಹುತೇಕರು ಡ್ರಿಪ್ ಹಾಕಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಈ ವಿಡಿಯೋ ಕೆಲವೇ ಕ್ಷಣದಲ್ಲಿ ಭಾರಿ ಲೈಕ್ಸ್ ಪಡೆದುಕೊಂಡಿದೆ. ಬಹುತೇಕ ಮದುವೆಯಲ್ಲಿ ಹ್ಯಾಂಗೋವರ್ ದೊಡ್ಡ ಸಮಸ್ಯೆ. ಇದಕ್ಕೆ ಉತ್ತರ ಎಂಬಂತೆ ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಡ್ರಿಪ್‌ನಲ್ಲಿ ಎಲೆಕ್ಟ್ರೋಲೈಟ್ಸ್, ವಿಟಾಮಿನ ಸಿ ಮಿಶ್ರಣದ ಡ್ರಿಪ್ ಅತಿಥಿಗಳಿಗೆ, ಕುಟುಂಬಸ್ಥರಿಗೆ ಹಾಕಲಾಗಿದೆ. ಇದರಿಂದ ಮದ್ಯದ ಹ್ಯಾಂಗೋವರ್‌ನಿಂದ ವೇಗವಾಗಿ ಹೊರಬರಲು ಸಾಧ್ಯವಾಗುತ್ತದೆ. ಜೊತೆಗೆ ಮದುವೆ ಕಾರ್ಯಕ್ರಮದಲ್ಲಿ ಅತೀವ ಉಲ್ಲಾಸದಿದಂ ಪಾಲ್ಗೊಳ್ಳುವುದು ಮಾತ್ರವಲ್ಲ, ಮತ್ತೆ ಪಾರ್ಟಿಯಲ್ಲಿ ಮಸ್ತಿ ಮಾಡಲು ಸಾಧ್ಯಾವಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ದೆಹಲಿಯ ಮದುವೆಯಲ್ಲಿ ವೃತ್ತಿಪರ ವೈದ್ಯರೇ ಡ್ರಿಪ್ಸ್ ಹಾಕಿದ್ದಾರೆ.
ಡ್ರಿಪ್ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಡ್ರಿಪ್ ಹಾಕಿ ಹ್ಯಾಂಗೋವರ್ ಓಡಿಸಿದ ಆರೋಗ್ಯ ಸಂಸ್ಥೆಯಿಂದ ಸ್ಪಷ್ಟನೆ ಬಂದಿದೆ. ವೃತ್ತಿಪರ ವೈದ್ಯರೇ ಡ್ರಿಪ್ ಹಾಕಿದ್ದಾರೆ. ಎಲ್ಲಾ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ತ ಆರೋಗ್ಯ ಪರವಾನಗಿ ವೈದ್ಯರು ಹಾಗೂ ಆರೋಗ್ಯ ಸಂಸ್ಥೆ ಇದನ್ನು ನಿರ್ವಹಿಸಿದೆ ಎಂದಿದ್ದಾರೆ.
ಹ್ಯಾಂಗೋವರ್ ಬಿಡಿಸಲು ಐವಿ ಡ್ರಾಪ್ ಉತ್ತಮವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ತ್ವರಿತವಾಗಿ ಪರಿಹಾರ ಸಿಗುವುದರಲ್ಲಿ ಅನುಮಾನವಿಲ್ಲ. ಆದರೆ ಬೇರೆ ಬೇರೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಸರಿಯಾದ ಪ್ರಮಾಣದಲ್ಲಿ ನೀರು, ಸೂಕ್ತ ನಿದ್ದೆ ಸೇರಿದಂತೆ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಹ್ಯಾಂಗೋವರ್‌ನಿಂದ ಹೊರಬರುವುದು ಇರುವುದರಲ್ಲಿ ಉತ್ತಮ ಮಾರ್ಗ. ಆದರೆ ಐವಿ ಡ್ರಿಪ್ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂದು ವೈದ್ಯರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ