ಗುಜರಾತ್‌ ವಜ್ರ ವ್ಯಾಪಾರಿ ಮೇಲೆ ಐಟಿ ದಾಳಿ: 518 ಕೋಟಿ ರೂ. ಅಕ್ರಮ ಪತ್ತೆ!

By Kannadaprabha NewsFirst Published Sep 26, 2021, 8:49 AM IST
Highlights

* ಗುಜರಾತಿನ ಪ್ರಖ್ಯಾತ ವಜ್ರದ ವ್ಯಾಪಾರಿಗೆ ಐಟಿ ಶಾಕ್

* ಬೃಹತ್‌ ಪ್ರಮಾಣದ ಅವ್ಯವಹಾರದ ದಾಖಲೆಗಳು ವಶ

* 5 ವರ್ಷದಲ್ಲಿ ಲೆಕ್ಕ ನೀಡದೇ ಸುಮಾರು 518 ಕೋಟಿ ರು. ತೆರಿಗೆ ವಂಚನೆ

ನವದೆಹಲಿ(ಸೆ.26): ಗುಜರಾತಿನ ಪ್ರಖ್ಯಾತ ವಜ್ರದ ವ್ಯಾಪಾರಿ(Diamond Trader) ಆದಾಯ ತೆರಿಗೆ ಪಾವತಿಸುವದರಿಂದ ತಪ್ಪಿಸಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ(Income tax Department) ದಾಳಿ ನಡೆಸಿದೆ. ವಜ್ರದ ವ್ಯಾಪಾರಿ(Dramond Trader) ಕಳೆದ 5 ವರ್ಷದಲ್ಲಿ ಲೆಕ್ಕ ನೀಡದೇ ಸುಮಾರು 518 ಕೋಟಿ ರು. ಮೌಲ್ಯದ ಸಣ್ಣ ಗಾತ್ರದ ವಜ್ರಗಳ ವ್ಯವಹಾರ ನಡೆಸಿದ್ದಾರೆ ಎಂದು ವಿತ್ತ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

ವಜ್ರದ ವ್ಯಾಪಾರಿಗೆ ಸೇರಿದ ಸುಮಾರು 23 ಸ್ಥಳಗಳ ಮೇಲೆ ಐಟಿ ದಾಳಿ ನಡೆಸಿದೆ. ಗುಜರಾತ್‌ನ ಸೂರತ್‌(Surat), ನವಸಾರಿ, ಮೋರ್ಬಿ, ವಂಕಾನೆರ್‌ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿರುವ ಕಚೇರಿಗಳ ಮೇಲೆ ಸೆ.22ರಂದು ದಾಳಿ ನಡೆಸಲಾಗಿದೆ. ಈ ಕಂಪೆನಿ ವಜ್ರದ ವ್ಯಾಪಾರದ ಜೊತೆಗೆ ಟೈಲ್ಸ್‌ ವ್ಯವಹಾರವನ್ನು ನಡೆಸುತ್ತಿತ್ತು ಎಂದು ವಿತ್ತ ಸಚಿವಾಲಯ ಹೇಳಿದೆ.

ವ್ಯಾಪಾರಿಯ ನಂಬಿಕಸ್ಥ ನೌಕರರ ವಶದಲ್ಲಿ ಸೂರತ್‌ ಮತ್ತು ಮುಂಬೈನಲ್ಲಿ ಇಡಲಾಗಿದ್ದ ತಪ್ಪು ಲೆಕ್ಕ ನೀಡಿರುವ ಬೃಹತ್‌ ಪ್ರಮಾಣದ ಕಾಗದ ಮತ್ತು ಡಿಜಿಟಲ್‌ ಮಾದರಿಯಲ್ಲಿದ್ದ ದಾಖಲೆ ಪತ್ರಗಳನ್ನು ದಾಳಿಯ ಸಮಯದಲ್ಲಿ ಜಪ್ತಿ ಮಾಡಲಾಗಿದೆ. ಇದರಲ್ಲಿ ಲೆಕ್ಕ ನೀಡದೇ ವಜ್ರ ಖರೀದಿ ಮಾಡಿರುವ ಹಾಗೂ ಮಾರಾಟ ಮಾಡಿರುವ ದಾಖಲೆಗಳು ಸೇರಿವೆ.

ಕಳೆದ 2 ವರ್ಷಗಳಲ್ಲಿ ಸುಮಾರು 189 ಕೋಟಿ ಮೌಲ್ಯದ ವಜ್ರ ಖರೀದಿ ಮಾಡಿ 1040 ಕೋಟಿ ಮೌಲ್ಯದ ವಜ್ರ ಮಾರಾಟ ಮಾಡಿದ್ದಾರೆ ಎನ್ನುವುದು ದಾಖಲೆಗಳಿಂದ ತಿಳಿದು ಬಂದಿದೆ. ದಾಳಿಯ ಸಮಯದಲ್ಲಿ 80 ಕೋಟಿ ರಿಯಲ್‌ ಎಸ್ಟೇಟ್‌ ಅವ್ಯವಹಾರ ನಡೆಸಲಾಗಿರುವುದು ತಿಳಿದು ಬಂದಿದೆ. 1.95 ಕೋಟಿ ಮೌಲ್ಯದ ನಗದು ಹಾಗೂ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

click me!