ಪತ್ನಿ ಬಸಂತಿ ಪಟೇಲ್‌ನನ್ನು ಇಸ್ಲಾಂಗೆ ಮತಾಂತರ ಮಾಡಿದ್ದ ಬಂಧಿತ ಐಸಿಸ್‌ ಉಗ್ರ!

By Santosh NaikFirst Published Oct 2, 2023, 6:47 PM IST
Highlights

ದೆಹಲಿ ಪೊಲೀಸ್‌ನ ಸ್ಪೆಷಲ್‌ ಸೆಲ್‌ ಸೋಮವಾರ ಐಸಿಸ್‌ ಉಗ್ರ ಶಹನವಾಜ್‌ನನ್ನು ಬಂಧಿಸಿದ್ದು, ಆತನ ಕೆಲವು ವಿವರಗಳನ್ನು ಬಹಿರಂಗಪಡಿಸಿದೆ. ಕರ್ನಾಟಕದ ವಿಶ್ವೇಶ್ವರಯ್ಯ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಆತ ಮೈನಿಂಗ್‌ ಇಂಜಿನಿಯರಿಂಗ್‌ ಮಾಡಿದ್ದ ಎಂದು ತಿಳಿಸಿದ್ದಾರೆ.

ನವದೆಹಲಿ (ಅ.2): ಕೇರಳ ಬಳಿಕ ಕರ್ನಾಟಕ ಕೂಡ ಐಸಿಸ್‌ಗೆ ನೆಲೆಯಾಗ್ತಿದ್ಯಾ  ಎನ್ನುವ ಅನುಮಾನಗಳು ವ್ಯಕ್ತವಾಗಿದೆ. ದೆಹಲಿಯಲ್ಲಿ ಬಂಧಿತನಾಗಿರುವ ಐಸಿಸ್‌ ಉಗ್ರ ಮೊಹಮದ್‌ ಶಹನವಾಜ್‌, ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿದ್ದು ಮಾತ್ರವಲ್ಲ ಹುಬ್ಬಳ್ಳಿ, ಧಾರವಾಡದಲಿದ್ದು ದೇಶವಿರೋಧಿ ಕೃತ್ಯ ಮಾಡಿದರೂ ರಾಜ್ಯದ ಭದ್ರತಾ ವಿಭಾಗಕ್ಕೆ ಸಣ್ಣ ಸುಳಿವೂ ಕೂಡ ಸಿಕ್ಕಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಬಂಧನಕ್ಕೊಳಗಾಗಿರುವ ಐಸಿಸ್ ಭಯೋತ್ಪಾದಕ ಶಹನವಾಜ್ ತನ್ನ ಪತ್ನಿ ಬಸಂತಿ ಪಟೇಲ್ ಅವರನ್ನು ಇಸ್ಲಾಂಗೆ ಮತಾಂತರ ಮಾಡಿದ್ದ ಎಂದು ದೆಹಲಿ ಪೊಲೀಸ್‌ ಸ್ಪೆಷಲ್‌ ಸೆಲ್‌ ಸೋಮವಾರ ಹೇಳಿದೆ. ಎನ್‌ಐಎಯ ಮೋಸ್ಟ್‌ ವಾಂಟೆಂಡ್‌ ಉಗ್ರನ ಪಟ್ಟಿಯಲ್ಲಿದ್ದ ಶಹನವಾಜ್‌, ಕರ್ನಾಟಕದ ಪ್ರತಿಷ್ಠಿತ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೈನಿಂಗ್ ಎಂಜಿನಿಯರಿಂಗ್‌ ಅಭ್ಯಾಸ ಮಾಡಿದ್ದ ಎಂದು ತಿಳಿಸಿದ್ದಾರೆ.  ಪೊಲೀಸರ ಪ್ರಕಾರ, ಶಹನವಾಜ್‌ನನ್ನು ಇಂದು ದಕ್ಷಿಣ ದೆಹಲಿಯ ಜೈತ್‌ಪುರದಿಂದ ಬಂಧಿಸಲಾಗಿದೆ. ಇವರಲ್ಲದೆ, ರಾಷ್ಟ್ರೀಯ ತನಿಖಾ ಸಂಸ್ಥೆಯು, ತಲೆಗೆ ಬಹುಮಾಣ ಘೋಷಣೆ ಮಾಡಿದ್ದ ಇನ್ನೂ ಇಬ್ಬರು ಉಗ್ರರರನ್ನು ಬಂಧಿಸಲೂ ಯಶಸ್ವಿಯಾಗಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶೇಷ ಪೊಲೀಸ್ ಆಯುಕ್ತ (ಸ್ಪೆಷಲ್‌ ಸೆಲ್‌) ಎಚ್‌ಎಸ್ ಧಲಿವಾಲ್, “ಕಳೆದ ತಿಂಗಳು ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಎನ್‌ಐಎ ಈ ಮೂವರು ಹುಡುಕಿಕೊಟ್ಟರೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅವರಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಶಹನವಾಜ್, ಆತನ ಇಬ್ಬರು ಸಹಚರರಾದ ಮೊಹಮ್ಮದ್ ರಿಜ್ವಾನ್ ಅಶ್ರಫ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿ ಅವರನ್ನು ಬಂಧಿಸಲಾಗಿದೆ. ಅಶ್ರಫ್‌ನನ್ನು ಲಕ್ನೋದಲ್ಲಿ ಬಂಧಿಸಲಾಗಿದ್ದು, ಅರ್ಷದ್‌ನನ್ನು ಮೊರಾದಾಬಾದ್‌ನಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳಿಂದ ಕಳುಹಿಸಲಾದ ಬಾಂಬ್ ತಯಾರಿಕೆ ಜ್ಞಾನ ಮತ್ತು ಇತರ ದೋಷಾರೋಪಣೆ ಸಾಮಗ್ರಿಗಳನ್ನು ಶಹನವಾಜ್‌ ಇದ್ದ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಧಲಿವಾಲ್ ಹೇಳಿದರು. “ಪ್ಲಾಸ್ಟಿಕ್ ಟ್ಯೂಬ್‌ಗಳು ಮತ್ತು ಕಬ್ಬಿಣದ ಪೈಪ್‌ಗಳು ಸೇರಿದಂತೆ ಹಲವಾರು ಸ್ಫೋಟಕಗಳನ್ನು ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಹೊರತಾಗಿ ಪಿಸ್ತೂಲ್, ಕಾರ್ಟ್ರಿಡ್ಜ್‌ಗಳು ಮತ್ತು ಪಾಕ್ ಮೂಲದ ಹ್ಯಾಂಡ್ಲರ್‌ಗಳಿಂದ ಕಳುಹಿಸಲಾದ ಬಾಂಬ್ ತಯಾರಿಕೆಯ ಪಠ್ಯಗಳನ್ನೂ ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.

ಪಶ್ಚಿಮ ಘಟ್ಟಗಳು, ದಕ್ಷಿಣ ಭಾರತದ ಪ್ರಮುಖ ಪ್ರದೇಶಗಳಾದ ಹುಬ್ಬಳ್ಳಿ, ಧಾರವಾಡ ಮತ್ತು ಗುಜರಾತ್‌ನ ಅಹಮದಾಬಾದ್‌ ಸ್ಥಳಗಳನ್ನು ತಮ್ಮ ಅಡುಗುತಾಣಗಳನ್ನಾಗಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿರೋ ಐಸಿಸ್‌ ಉಗ್ರ ಬಂಧನ: ದೆಹಲಿ ಪೊಲೀಸರ ಕಾರ್ಯಾಚರಣೆ

ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಧಲಿವಾಲ್, “ಶಹನವಾಜ್ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೈನಿಂಗ್ ಎಂಜಿನಿಯರಿಂಗ್‌ ಅಭ್ಯಾಸ ಮಾಡಿದ್ದಾರೆ. ಆತನ ಪತ್ನಿ ಬಸಂತಿ ಪಟೇಲ್ ಇಸ್ಲಾಂಗೆ ಮತಾಂತರಗೊಂಡಿದ್ದು, ಆಕೆಯನ್ನು ಈಗ ಮರಿಯಮ್‌ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು. ಪೊಲೀಸರ ಪ್ರಕಾರ, ಮೂವರು ವಾಂಟೆಡ್ ಶಂಕಿತ ಭಯೋತ್ಪಾದಕರನ್ನು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಜಿಹಾದಿ ಕೃತ್ಯ: ಎನ್‌ಐಎ ಚಾರ್ಜ್‌ಶೀಟ್

ಕಳೆದ ತಿಂಗಳು, ಪುಣೆ ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಮಾಡ್ಯೂಲ್ ಪ್ರಕರಣದಲ್ಲಿ ಬೇಕಾಗಿರುವ ಶಹನವಾಜ್‌ ಸೇರಿದಂತೆ ನಾಲ್ವರು ಭಯೋತ್ಪಾದಕ ಶಂಕಿತರ ಚಿತ್ರಗಳನ್ನು ಎನ್‌ಐಎ ಬಿಡುಗಡೆ ಮಾಡಿತು ಮತ್ತು ಅವರ ಬಗ್ಗೆ ಮಾಹಿತಿ ನೀಡಿದಲ್ಲಿ ತಲಾ 3 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿತು. ಬಂಧನ ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಸಂಸ್ಥೆ ತಿಳಿಸಿತ್ತು.

click me!