
ಚೆನ್ನೈ (ಜ.24): ಕಬ್ಬಿಣದ ಯುಗವು ತಮಿಳುನಾಡಿನಲ್ಲಿ ಆರಂಭವಾಗಿತ್ತು. ರಾಜ್ಯದಲ್ಲಿ ಕ್ರಿಸ್ತ ಪೂರ್ವ 4000 ಇಸವಿ ಹಿಂದೆಯೇ ಕಬ್ಬಿಣದ ಬಳಕೆ ಶುರುವಾಗಿತ್ತು. 5300 ವರ್ಷಗಳ ಹಿಂದೆ ಕಬ್ಬಿಣ ಕರಗಿಸುವ ಕಲೆ ಪರಿಚಯಿಸಲಾಗಿತ್ತು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಗುರುವಾರ ಆ್ಯಂಟಿಕ್ವಿಟಿ ಆಫ್ ಐರನ್ (ಕಬ್ಬಿಣದ ಪ್ರಾಚೀನತೆ) ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸ್ಟಾಲಿನ್, ‘ತಮಿಳುನಾಡಿನಲ್ಲಿ ಕಬ್ಬಿಣದ ಬಳಕೆಯ ಕುರುಹುಗಳು ಲಭಿಸಿದ್ದು, ಅದನ್ನು ಪುಣೆ ಮತ್ತು ಅಮೆರಿಕದ ಫ್ಲೋರಿಡಾದಲ್ಲಿರುವ ವಿಶ್ವ ದರ್ಜೆಯ ಪ್ರಯೋಗಾಲಯಕ್ಕೆ ಕಳುಹಿಸಿ ಫಲಿತಾಂಶ ಪಡೆಯಲಾಗಿದೆ.
ಇದರಲ್ಲಿ ತಮಿಳುನಾಡಿನಲ್ಲಿಯೇ ಕಬ್ಬಿಣ ಯುಗ ಆರಂಭವಾಗಿತ್ತು ಎಂದು ಸಾಬೀತಾಗಿದೆ. ದಕ್ಷಿಣ ಭಾರತದಲ್ಲಿ ಕ್ರಿಸ್ತಪೂರ್ವ 3345ರಕ್ಕೂ ಮುನ್ನವೇ ಕಬ್ಬಿಣದ ಪರಿಚಯವಾಗಿತ್ತು ಎಂದು ತಿಳಿದುಬಂದಿದೆ’ ಎಂದರು. ಜೊತೆಗೆ, ‘ನಾನು ಹಿಂದಿನಿಂದಲೂ ಭಾರತದ ಇತಿಹಾಸವು ತಮಿಳುನಾಡಿನಿಂದ ಆರಂಭವಾಗಬೇಕು ಎಂದು ಪ್ರತಿಪಾದಿಸುತ್ತಿದ್ದೇನೆ. ಈಗ ನನ್ನ ಕೂಗಿಗೆ ಶಕ್ತಿ ಬಂದಿದೆ’ ಎಂದು ಹರ್ಷಿಸಿದರು. ಸ್ಟಾಲಿನ್ ಹೇಳಿಕೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಭಾರತದ ಶ್ರೀಮಂತ ಪರಂಪರೆಯು ವಿಶ್ವವನ್ನು ಪ್ರೇರೇಪಿಸುತ್ತಿದೆ. ತಮಿಳುನಾಡಿನಲ್ಲಿಯೇ ಕಬ್ಬಿಣದ ಯುಗ ಶುರುವಾಗಿತ್ತು ಎಂದಿದ್ದಾರೆ.
ಗಂಗೆ ರೀತಿ ಯಮುನೆಯಲ್ಲಿ ಕೇಜ್ರಿ ಸ್ನಾನ ಮಾಡಬಲ್ಲರೇ?: ‘ಕೇಜ್ರಿವಾಲ್ ಅವರು ದೆಹಲಿಯಲ್ಲಿ ತಮ್ಮ ಸಚಿವರೊಂದಿಗೆ ಯಮುನಾ ನದಿಯಲ್ಲಿ ಸ್ನಾನ ಮಾಡಬಲ್ಲರೇ?’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸವಾಲೆಸೆದಿದ್ದಾರೆ. ದಿಲ್ಲಿ ವಿಧಾನಸಭೆ ಚುನಾವಣೆ ನಿಮಿತ್ತ ಪ್ರಚಾರದ ಸಭೆಯಲ್ಲಿ ಮಾತನಾಡಿದ ಯೋಗಿ, ‘ಆಪ್ ಸರ್ಕಾರ ದೆಹಲಿಯನ್ನು ಕಸದ ತೊಟ್ಟಿ ಮಾಡಿದೆ. ಸ್ವಚ್ಛ ನೀರು, ವಿದ್ಯುತ್ ಹಾಗೂ ಸಬ್ಸಿಡಿಗಳಂತಹ ಅಗತ್ಯ ಸೇವೆಗಳನ್ನೂ ನಿರ್ಲಕ್ಷಿಸುತ್ತಿದೆ. ನಿನ್ನೆ ನಾನು ನನ್ನ ಸಚಿವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದಂತೆ ಕೇಜ್ರಿವಾಲ್‌ಗೆ ದೆಹಲಿಯ ಯಮುನಾದಲ್ಲಿ ಮಾಡುವುದು ಸಾಧ್ಯವೇ’ ಎಂದರು. ಆಪ್ ಸಚಿವರು ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾಗಳಿಗೆ ದೆಹಲಿಯಲ್ಲಿ ನೆಲೆ ಒದಗಿಸುತ್ತಿದ್ದಾರೆ ಎಂದು ಆರೋಪಿಸಿದ ಯೋಗಿ, ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವನ್ನು ತರುವುದು ಅಗತ್ಯ ಎಂದರು. ದೆಹಲಿಯಲ್ಲಿ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ರಂದು ಫಲಿತಾಂಶ ಘೋಷಣೆಯಾಗಲಿದೆ.
ಶಕ್ತಿ ಉತ್ಪಾದನೆಗಾಗಿ ಕೈಗೊಂಡಿರುವ ಪರಮಾಣು ಸಮ್ಮಿಳನ ಪ್ರಯೋಗ: ಕೃತಕ ಸೂರ್ಯನನ್ನು ಬೆಳಗಿಸಿದ ಚೀನಾ
ಪುಷ್ಪ-2’ ನಿರ್ದೇಶಕ ಸುಕುಮಾರ್ ಕಚೇರಿ ಮೇಲೆ ಐಟಿ ದಾಳಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ‘ಪುಷ್ಪ-2’ ಚಿತ್ರದ ನಿರ್ದೇಶಕ ಸುಕುಮಾರ್ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ನಿರ್ದೇಶಕರು ಮತ್ತು ಮೈತ್ರಿ ಮೂವಿ ಮೇಕರ್ಸ್‌ನ ಇತರ ಸದಸ್ಯರಿಗೆ ಸಂಬಂಧಿಸಿದ ಇನ್ನಿತರ ಸ್ಥಳಗಳ ಮೇಲೂ ದಾಳಿಗಳು ಮುಂದುವರೆಯುವ ನಿರೀಕ್ಷೆಯಿದೆ. ಮಂಗಳವಾರ (ಜ.21) ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಸೇರಿದಂತೆ ‘ಪುಷ್ಪ-2’ ಮತ್ತು ‘ಗೇಮ್ ಚೇಂಜರ್’ ನಿರ್ಮಾಪಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ದಾಳಿ ನಡೆಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ