ಜನ್ಮಸಿದ್ದ ಪೌರತ್ವ ರದ್ದು, ಅಮೆರಿಕದಲ್ಲಿ ಹೆಚ್ಚಾದ ಭಾರತೀಯ ಮೂಲದ ಗರ್ಭಿಣಿಯರ ಸಿಸೇರಿಯನ್‌ ಹೆರಿಗೆ!

Published : Jan 23, 2025, 07:15 PM IST
ಜನ್ಮಸಿದ್ದ ಪೌರತ್ವ ರದ್ದು, ಅಮೆರಿಕದಲ್ಲಿ ಹೆಚ್ಚಾದ ಭಾರತೀಯ ಮೂಲದ ಗರ್ಭಿಣಿಯರ ಸಿಸೇರಿಯನ್‌ ಹೆರಿಗೆ!

ಸಾರಾಂಶ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನ್ಮಸಿದ್ಧ ಪೌರತ್ವ ರದ್ದುಗೊಳಿಸುವ ನಿರ್ಧಾರದಿಂದಾಗಿ, ಅಮೆರಿಕದಲ್ಲಿರುವ ಭಾರತೀಯ ಮೂಲದ ಗರ್ಭಿಣಿಯರು ಫೆಬ್ರವರಿ 20 ರ ಮೊದಲು ಹೆರಿಗೆ ಮಾಡಿಸಿಕೊಳ್ಳಲು ಆತುರದಲ್ಲಿದ್ದಾರೆ. ಕೆಲವರು ಅವಧಿಪೂರ್ವ ಹೆರಿಗೆಗಾಗಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಳ್ಳಲು ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ.

ನವದೆಹಲಿ (ಜ.23): ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜನ್ಮಸಿದ್ಧ ಪೌರತ್ವ ರದ್ದುಗೊಳಿಸುವ ತೀರ್ಮಾನ ಘೋಷಣೆ ಮಾಡಿದ್ದಾರೆ. ಆದರೆ, ಅವರ ಈ ನಿರ್ಧಾರ ಜಾರಿಗೆ ಬರುವ ಮುನ್ನವೇ ಅಮೆರಿಕದಲ್ಲಿ ತಮ್ಮ ಮಕ್ಕಳು ಹುಟ್ಟಲಿ ಎಂದು ಸಾಕಷ್ಟು ಗರ್ಭಿಣಿಯರು ಮೆಟರ್ನಿಟಿ ಕ್ಲಿನಿಕ್‌ಗಳತ್ತ ಧಾವಿಸುತ್ತಿದ್ದಾರೆ. ಭಾರತೀಯ ಮೂಲದ ದಂಪತಿಗಳು ಕೂಡ ವೈದ್ಯರ ಅಪಾಂಯ್ಟ್‌ಮೆಂಟ್‌ಗಳನ್ನು ತೆಗೆದುಕೊಳ್ಳುತ್ತಿದ್ದು, ಫೆಬ್ರವರಿ 20ರ ಒಳಗಾಗಿ ಸಿಸೇರಿಯನ್‌ ಮೂಲಕ ಹೆರಿಗೆ ಮಾಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಭಾರತೀಯ ಮೂಲದ ಗೈನಕಾಲಾಜಿಸ್ಟ್‌ ಒಬ್ಬರು ಹೇಳುವ ಪ್ರಕಾರ, ದಂಪತಿಗಳಿಂದ ಕನಿಷ್ಠವೆಂದರೂ 20 ಇಂಥ ಕರೆ ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ವಹಿಸಿಕೊಂಡ ಬೆನ್ನಲ್ಲೇ ಹೊರಡಿಸಿರುವ ಕಾರ್ಯಕಾರಿ ಆದೇಶದಲ್ಲಿ ಫೆ.20 ಹಾಗೂ 20ರ ನಂತರದಿಂದ ಅಮೆರಿಕದಲ್ಲಿ ಯಾವುದೇ ಜನ್ಮಸಿದ್ಧ ಪೌರತ್ವ ಇರೋದಿಲ್ಲ ಎಂದು ತಿಳಿಸಿದ್ದಾರೆ. ಫೆಬ್ರವರಿ 19 ರ ನಂತರ, ಅಮೆರಿಕದ ನಾಗರಿಕರಲ್ಲದ ದಂಪತಿಗಳಿಗೆ ಜನಿಸುವ ಮಕ್ಕಳು ನೈಸರ್ಗಿಕ ಅಮೆರಿಕನ್ ನಾಗರಿಕರಾಗಿರುವುದಿಲ್ಲ ಎನ್ನುವುದು ಈ ಆದೇಶವಾಗಿದೆ.

ಅಮೆರಿಕದಲ್ಲಿ ತಾತ್ಕಾಲಿಕ H-1B ಮತ್ತು L1 ವೀಸಾಗಳ ಮೇಲೆ ಕೆಲಸ ಮಾಡುತ್ತಿರುವ ಹತ್ತಾರು ಸಾವಿರ ಭಾರತೀಯರಿದ್ದಾರೆ. ಅವರು ಅಮೆರಿಕದಲ್ಲಿ ಶಾಶ್ವತ ನಿವಾಸವನ್ನು ನೀಡುವ ಗ್ರೀನ್ ಕಾರ್ಡ್‌ಗಳಿಗೂ ಕ್ಯೂನಲ್ಲಿದ್ದಾರೆ. ಅಮೆರಿಕದ ನಾಗರಿಕರು ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಯಾರೂ ಇಲ್ಲದ ಪೋಷಕರಿಗೆ ಜನಿಸಿದ ಮಕ್ಕಳು ಹುಟ್ಟಿನಿಂದಲೇ ಅಮೆರಿಕದ ನಾಗರಿಕರಾಗುವುದಿಲ್ಲ. ಇದೇ ಕಾರಣಕ್ಕೆ ಫೆಬ್ರವರಿ 20 ಕ್ಕಿಂತ ಮೊದಲು ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸಿಕೊಳ್ಳಲು ಆತುರ ಹೆಚ್ಚುತ್ತಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ನ್ಯೂಜೆರ್ಸಿಯ ಡಾ. ಎಸ್. ಡಿ. ರಾಮಾ ಅವರ ಹೆರಿಗೆ ಚಿಕಿತ್ಸಾಲಯವು ಎಂಟು ಮತ್ತು ಒಂಬತ್ತನೇ ತಿಂಗಳ ಗರ್ಭಿಣಿಯರಿಂದ ಭಾರೀ ಪ್ರಮಾಣದಲ್ಲಿ ಸಿ-ಸೆಕ್ಷನ್‌ ಹೆರಿಗೆಗಳ ಮನವಿಯನ್ನು ಸ್ವೀಕಾರ ಮಾಡಿವೆ. ಕೆಲವು ಕೇಸ್‌ಗಳಲ್ಲಿ ಅವರ ಪೂರ್ಣಾವಧಿಯ ಗರ್ಭಕ್ಕೆ ಇನ್ನೂ ಕೆಲುವು ತಿಂಗಳು ಬಾಕಿ ಉಳಿದಿವೆ.

"ಏಳು ತಿಂಗಳ ಗರ್ಭಿಣಿಯೊಬ್ಬಳು ತನ್ನ ಪತಿಯೊಂದಿಗೆ ಅವಧಿಪೂರ್ವ ಹೆರಿಗೆಗೆ ನೋಂದಣಿ ಮಾಡಿಕೊಳ್ಳಲು ಬಂದಿದ್ದಳು. ಮಾರ್ಚ್‌ವರೆಗೆ ಅವಳಿಗೆ ಹೆರಿಗೆ ಆಗುವುದಿಲ್ಲ" ಎಂದು ರಮಾ ತಿಳಿಸಿದ್ದಾರೆ. ಈ ದಟ್ಟಣೆಗೆ ಕಾರಣವೆಂದರೆ ಭಾರತೀಯರು ಅಮೆರಿಕದಲ್ಲಿ ಜನಿಸಿದ ತಮ್ಮ ಮಕ್ಕಳ ಮೇಲೆಯೂ ತಮ್ಮ ಪೌರತ್ವವನ್ನು ಪಣತೊಡುತ್ತಾರೆ. 21 ವರ್ಷ ತುಂಬಿದ ನಂತರ, ಈ ಅಮೆರಿಕನ್-ಇಂಡಿಯನ್ನರು ತಮ್ಮ ಪೋಷಕರಿಗೆ ಅಮೆರಿಕ ನಿವಾಸಕ್ಕೆ ಅರ್ಜಿ ಹಾಕಬಹುದು.

ಟೆಕ್ಸಾಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಎಸ್ ಜಿ ಮುಕ್ಕಳ, ಅವಧಿಪೂರ್ವ ಜನನದ ಅಪಾಯಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದರು. "ಹೆರಿಗೆ ಸಾಧ್ಯವಾದರೂ ಸಹ, ಅವಧಿಪೂರ್ವ ಜನನವು ತಾಯಿ ಮತ್ತು ಮಗುವಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಎಂದು ನಾನು ದಂಪತಿಗಳಿಗೆ ಹೇಳಲು ಪ್ರಯತ್ನಿಸುತ್ತಿದ್ದೇನೆ. ತೊಡಕುಗಳಲ್ಲಿ ಅಭಿವೃದ್ಧಿಯಾಗದ ಶ್ವಾಸಕೋಶಗಳು, ಆಹಾರ ನೀಡುವ ಸಮಸ್ಯೆಗಳು, ಕಡಿಮೆ ಜನನ ತೂಕ, ನರವೈಜ್ಞಾನಿಕ ತೊಡಕುಗಳು ಮತ್ತು ಇನ್ನೂ ಹೆಚ್ಚಿನವು ಸೇರಿವೆ" ಎಂದು ಅವರು ಹೇಳಿದ್ದಾರೆ.

ಜನ್ಮಸಿದ್ಧ ಪೌರತ್ವ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡೆಗೆ ಭಾರತೀಯರ ವಿರೋಧ

"ಅಮೇರಿಕನ್ ಕನಸು ಒಂದು ಹಗರಣ. ಇದೀಗ ಅವರು ಭಾರತಕ್ಕೆ 2012 ರ eb2/3 ಅನ್ನು ಪ್ರಕ್ರಿಯೆಗೊಳಿಸುತ್ತಿದ್ದಾರೆ. ಇದರರ್ಥ ಸಾಮಾನ್ಯವಾಗಿ 2007 ರಲ್ಲಿ ಅಮೆರಿಕಕ್ಕೆ ಪ್ರವೇಶಿಸಿದ ಜನರಿಗೆ. ಅಂದರೆ, ಕಾಲೇಜಿನಿಂದ ಹೊರಬಂದ 22 ವರ್ಷದ ಯುವಕ 2007 ರಲ್ಲಿ ಅಮೆರಿಕಕ್ಕೆ ಪ್ರವೇಶಿಸಿದರೆ, ಅವರಿಗೆ ಈ ಸಮಯದಲ್ಲಿ ಗ್ರೀನ್ ಕಾರ್ಡ್ ಸಿಗುತ್ತದೆ. ಪೌರತ್ವಕ್ಕೆ ಇನ್ನೂ 5 ವರ್ಷಗಳು ಬೇಕಾಗುತ್ತದೆ. ಇಲ್ಲಿಯ ನಾಗರಿಕನಾಗಲು 45 ವರ್ಷಗಳಾಗುತ್ತದೆ. ನೀವು ಯಾವುದಕ್ಕಾಗಿ ಸೈನ್ ಅಪ್ ಮಾಡುತ್ತಿದ್ದೀರಿ ಎಂದು ತಿಳಿಯಿರಿ" ಎಂದು ರೆಡಿಟ್‌ನಲ್ಲಿ ವ್ಯಕ್ತಿಯೊಬ್ಬರು ಬರೆದಿದ್ದಾರೆ. ಗ್ರೀನ್ ಕಾರ್ಡ್‌ಗಳಿಗೆ ಬಾಕಿ ಉಳಿದಿರುವ ಪ್ರಕ್ರಿಯೆ ಒಂದು ಶತಮಾನದಿಂದ ಮುಂದುವರೆದಿದ್ದು, ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವವು ಅನೇಕರಿಗೆ ನಿರಾಳವೆನಿಸಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ 2.0 ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತ ಜತೆ!

"ನಮ್ಮ ಮಗು ಇಲ್ಲಿ ಜನಿಸುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೆವು. ಆರು ವರ್ಷಗಳಿಂದ ನಮ್ಮ ಗ್ರೀನ್ ಕಾರ್ಡ್‌ಗಳಿಗಾಗಿ ನಾವು ಕಾಯುತ್ತಿದ್ದೇವೆ. ನಮ್ಮ ಕುಟುಂಬಕ್ಕೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಇದೊಂದೇ ಮಾರ್ಗವಾಗಿತ್ತು. ಅನಿಶ್ಚಿತತೆಯಿಂದ ನಾವು ಭಯಭೀತರಾಗಿದ್ದೇವೆ" ಎಂದು ಮಾರ್ಚ್‌ನಲ್ಲಿ ಹೆರಿಗೆಯಾಗುವ ನಿರೀಕ್ಷೆಯಿರುವ ಪ್ರಿಯಾ ಎನ್ನುವ ಮಹಿಳೆ ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್