
ನವದೆಹಲಿ: ಉದ್ಯಮಿ ಗೌತಮ್ ಅದಾನಿ ಸಮೂಹದ ಕುರಿತ ಅಮೆರಿಕ ಮೂಲದ ಹಿಂಡನ್‌ಬರ್ಗ್ ಸಂಸ್ಥೆಯ ಸಂಶೋಧನಾ ವರದಿ ಬಗ್ಗೆ ತನಿಖೆ ನಡೆಸಲು ನಿವೃತ್ತ ಸುಪ್ರೀಕೋರ್ಟ್ ನ್ಯಾಯಾಧೀಶರ ಸಮಿತಿ ರಚಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ (Supreme Court) ವಿಚಾರಣೆ ನಡೆಸಲಿದೆ. ಹಿಂಡನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ವ್ಯಾಪಾರ ಸಂಸ್ಥೆಗಳ ವಿರುದ್ಧ ಆರೋಪ ಮಾಡಲಾಗಿದ್ದು ವಕೀಲ ವಿಶಾಲ್ ತಿವಾರಿ ಅರ್ಜಿಯನ್ನು ತುರ್ತು ವಿಚಾರಣೆ ಮಾಡುವಂತೆ ಗುರುವಾರ ಮುಖ್ಯ ನ್ಯಾಯಮೂರ್ತಿ ನ್ಯಾ ಡಿ.ವೈ ಚಂದ್ರಚೂಡ್ (DY Chandrachud) ಅವರ ಪೀಠವನ್ನು ಕೋರಿದ್ದರು. ಆಗ ಪೀಠವು ಇಂದು ವಿಚಾರಣೆ ನಡೆಸಲು ಸಮ್ಮತಿಸಿತು.
ಹಿಮಾಚಲದ ಅದಾನಿ ಕಂಪನಿಗೆ ಅಬಕಾರಿ ಶಾಕ್
ಶಿಮ್ಲಾ: ಜಿಎಸ್‌ಟಿ ವಂಚನೆ ಅನುಮಾನದ ಮೇಲೆ ಹಿಮಾಚಲ (Himachal) ಪ್ರದೇಶದಲ್ಲಿರುವ ಅದಾನಿ ಸಮೂಹದ ಅದಾನಿ- ವಿಲ್ಮರ್ ಕಂಪನಿಯ ಗೋದಾಮಿನ ಮೇಲೆ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ ದಾಳಿ ನಡೆಸಿದೆ. ಇಲ್ಲಿನ ಪರ್ವಾನೋದಲ್ಲಿರುವ ಗೋದಾಮಿನಲ್ಲಿ ಅಧಿಕಾರಿಗಳು ಲೆಕ್ಕ ತಪಾಸಣೆ ನಡೆಸಿದ್ದಾರೆ. ಅದಾನಿ ಸಮೂಹ ಸಂಸ್ಥೆಗಳು ಷೇರು ಮಾರುಕಟ್ಟೆಯಲ್ಲಿ ಭಾರಿ ವಂಚನೆ ಎಸಗಿವೆ ಎಂದು ಅಮೆರಿಕದ ಹಿಂಡನ್‌ಬಗ್‌ರ್ ವರದಿ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಅದಾನಿ ಗ್ರೂಪ್ ಮೇಲೆ ತೆರಿಗೆ ದಾಳಿ ನಡೆದಿದೆ. ಈ ದಾಳಿಯ ಕುರಿತಾಗಿ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಇದೊಂದು ಮಾಮೂಲಿ ತಪಾಸಣೆ ಎಂದು ಹೇಳಿದ್ದಾರೆ. ಕಳೆದ 2 ವರ್ಷದಲ್ಲಿ ಈ ಕಂಪನಿ 350 ಕೋಟಿ ರು.ನಷ್ಟು ವ್ಯವಹಾರ ನಡೆಸಿದ್ದು, 20 ಕೋಟಿ ರು.ಗಳಷ್ಟು ಜಿಎಸ್‌ಟಿ (GST) ಹೊಣೆಗಾರಿಕೆಯನ್ನು ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದಾನಿ ವಿಲ್ಮಾರ್ ಕಂಪನಿ ಅಡಿಗೆ ಎಣ್ಣೆ, ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಕಡಲೆ ಹಿಟ್ಟು ಮುಂತಾದ ಆಹಾರ ಪದಾರ್ಥಗಳನ್ನು ಫಾರ್ಚೂನ್ ಬ್ರಾಂಡ್‌ನ (Fortune brand)ಅಡಿಯಲ್ಲಿ ಮಾರಾಟ ಮಾಡುತ್ತದೆ.
ಫೆರಾರಿ ವೇಗದಲ್ಲಿ ಆದಾಯ ಹೆಚ್ಚಿಸಿಕೊಂಡ ಅದಾನಿ, ಒಂದೇ ದಿನ 3500 ಕೋಟಿ ಸಂಪತ್ತು ಹೆಚ್ಚಳ!
ಅದಾನಿ ಹಗರಣ ತನಿಖೆಗೆ ಯುವ ಕಾಂಗ್ರೆಸ್ ಆಗ್ರಹ
ಇತ್ತ ಅದಾನಿ ಸಮೂಹ ಸಂಸ್ಥೆಗಳು ಅಕ್ರಮ ಎಸಗಿವೆ ಎಂದು ಅಮೆರಿಕ ಮೂಲದ ಹಿಂಡೆನ್‌ಬರ್ಗ್ (Hindenburg) ಸಂಶೋಧನಾ ವರದಿಯನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಭಾರತೀಯ ಯುವ ಕಾಂಗ್ರೆಸ್ ಗುರುವಾರ ಪ್ರತಿಭಟನೆ ನಡೆಸಿದೆ. ರೈಸಿನಾ ಹಿಲ್ ರಸ್ತೆಯಲ್ಲಿ (Raisina Hill Road) ಸೇರಿದ ಕಾಂಗ್ರೆಸ್‌ನ ಯುವ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರ ಮುಖವಾಡಗಳನ್ನು ಧರಿಸಿದ್ದರು. ಅದಾನಿ ಸಮೂಹ ಸಂಸ್ಥೆಗಳು ನಡೆಸಿದೆ ಎನ್ನಲಾದ ವಂಚನೆಗಳಿಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂಕೋರ್ಟ್ ಮೇಲ್ವಿಚಾರಣೆ ನಡೆಸುವ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಪಕ್ಷ ಆಗ್ರಹಿಸುತ್ತದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಸಾಲ ಮುಂಗಡ ಪಾವತಿ ಘೋಷಣೆ: ಶೇ. 25 ರವರೆಗೆ ಜಿಗಿದ ಅದಾನಿ ಎಂಟರ್‌ಪ್ರೈಸಸ್ ಷೇರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ