
ನವದೆಹಲಿ: ಸೌದಿ ಅರೇಬಿಯಾ ಮೂಲದ ಪ್ರಭಾವಿ ಇಸ್ಲಾಮಿಕ್ ಸ್ವಯಂಸೇವಾ ಸಂಸ್ಥೆಯಾದ ಮುಸ್ಲಿಂ ವರ್ಲ್ಡ್ ಲೀಗ್ (MWL) ಮಹಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಕರೀಂ ಅಲ್-ಇಸ್ಸಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು, ಎಲ್ಲರನ್ನೂ ಒಳಗೊಂಡ ‘ಸಮಗ್ರ ಅಭಿವೃದ್ಧಿ’ಗಾಗಿ ಹಾಡಿ ಹೊಗಳಿದ್ದಾರೆ. ಭಾರತದಲ್ಲಿ ಮೋದಿ ಸರ್ಕಾರ ಮುಸ್ಲಿಮರ ಹಕ್ಕು ಕಸಿಯುತ್ತಿದೆ ಎಂದು ಪಾಕ್ ಹಾಗೂ ಕೆಲವು ದೇಶಗಳಲ್ಲಿ ಪ್ರಚಾರ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಮೋದಿ ಬಗ್ಗೆ ಪ್ರಮುಖ ಇಸ್ಲಾಮಿಕ್ ನಾಯಕರೊಬ್ಬರು ಪ್ರಶಂಸೆ ವ್ಯಕ್ತಪಡಿಸಿದ್ದು ಗಮನಾರ್ಹವಾಗಿದೆ.
ಭಾರತ ಪ್ರವಾಸದಲ್ಲಿರುವ ಅಲ್ ಇಸ್ಸಾ ಅವರು ಮೋದಿ ಅವರನ್ನು ಮಂಗಳವಾರ ಭೇಟಿ ಆಗಿದ್ದರು. ಈ ವೇಳೆ ಭಯೋತ್ಪಾದನೆ ನಿಗ್ರಹ, ಜಾಗತಿಕ ಶಾಂತಿ, ಅಂತರ್ ಧರ್ಮೀಯ ವಿಷಯಗಳು ಹಾಗೂ ಸೌದಿ ಅರೇಬಿಯಾ-ಭಾರತದ ಬಾಂಧವ್ಯ ಸುಧಾರಣೆ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಅಲ್ ಇಸ್ಸಾ, ‘ಮೋದಿ ಅವರು ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಯತ್ತ ಹೊಂದಿರುವ ದೃಷ್ಟಿಕೋನವನ್ನು ನಾನು ಪ್ರಶಂಸಿಸುತ್ತೇನೆ. ವಿವಿಧ ಸಂಸ್ಕೃತಿ ಹಾಗೂ ನಂಬಿಕೆಗಳನ್ನು ಹೊಂದಿರುವ ಬಹುಧರ್ಮಗಳ ನಡುವೆ ಸೌಹಾರ್ದತೆ ಮೂಡಿಸುವ ಬಗ್ಗೆ ನಮ್ಮ ನಡುವೆ ಚರ್ಚೆ ನಡೆಯಿತು. ಅಲ್ಲದೆ, ಉಗ್ರವಾದ ಹಾಗೂ ದ್ವೇಷ ಕಾರುವಿಕೆಗಳನ್ನು ಹತ್ತಿಕ್ಕುವ ಸಂಕಲ್ಪ ಮಾಡಲಾಯಿತು. ಉಗ್ರವಾದಕ್ಕೆ ಕುಮ್ಮಕ್ಕು ಯಾರೇ ನೀಡಲಿ ಅದರ ನಿಗ್ರಹಕ್ಕೆ ಬದ್ಧತೆ ವ್ಯಕ್ತಪಡಿಸಲಾಯಿತು’ ಎಂದಿದ್ದಾರೆ.
ಇದಕ್ಕೆ ಟ್ವೀಟರ್‌ನಲ್ಲೇ ಉತ್ತರಿಸಿರುವ ಮೋದಿ, ‘ಅಲ್ ಇಸ್ಸಾ ಅವರ ಜತೆಗಿನ ಭೇಟಿ ತೃಪ್ತಿ ತಂದಿದೆ. ನಾವು ಅಂತರ್ ಧರ್ಮೀಯ ಸೌಹಾರ್ದತೆ ಕುರಿತು ಸಾಕಷ್ಟುಉತ್ತಮ ಚರ್ಚೆ ನಡೆಸಿದೆವು’ ಎಂದಿದ್ದಾರೆ.
ದ್ವೇಷ-ಭಾಷಣ, ಭಯೋತ್ಪಾದನೆಗೆ ಕಾರಣವಾಗುವ ಸಿದ್ಧಾಂತಗಳನ್ನು ಧಾರ್ಮಿಕ ಮುಖಂಡರು ಎದುರಿಸಬೇಕು: ಡಾ. ಅಲ್-ಇಸ್ಸಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ