ಸ್ವಚ್ಛ ನಗರ ಎಂಬ ಖ್ಯಾತಿ ಗಳಿಸಿದ್ದ ಇಂದೋರ್‌ಗೆ ಈಗ ಮತ್ತೊಂದು ಹೆಗ್ಗಳಿಕೆ!

By Suvarna NewsFirst Published Aug 13, 2021, 3:07 PM IST
Highlights

* ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಘೋಷಣೆ

* ಸ್ವಚ್ಛ ನಗರ ಇಂದೋರ್‌ ಈಗ ವಾಟರ್‌ ಪ್ಲಸ್‌ ನಗರ

ಭೋಪಾಲ್‌(ಆ.13): ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂದೋರ್‌ ಅನ್ನು ಸ್ವಚ್ಛ ಸರ್ವೆಕ್ಷಣ ಅಭಿಯಾನದ ಅಡಿಯಲ್ಲಿ ‘ವಾಟರ್‌ ಪ್ಲಸ್‌’ ನಗರ ಎಂದು ಘೋಷಿಸಲಾಗಿದೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ರೂಪಿಸಿರುವ ಮಾನದಂಡದ ಪ್ರಕಾರ, ಮನೆ ಅಥವಾ ವಾಣಿಜ್ಯ ಮಳಿಗೆಗಳಿಂದ ಬಿಡುಗಡೆ ಆಗುವ ಕೊಳಚೆ ನೀರು ಪರಿಸರಕ್ಕೆ ಸೇರುವುದಕ್ಕೂ ಮುನ್ನ ಅದರಲ್ಲಿನ ಕಲುಷಿತ ಪ್ರಮಾಣ ಸಮಾಧಾನಕರವಾಗಿದ್ದರೆ ಅಂತಹ ನಗರಗಳನ್ನು ‘ವಾಟರ್‌ ಪ್ಲಸ್‌’ ನಗರ ಎಂಬುದಾಗಿ ಘೋಷಿಸಲಾಗುತ್ತದೆ.

ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ- 2021ರ ಪ್ರಕಾರ, ಇಂದೋರ್‌ನಲ್ಲಿ ಮುನ್ಸಿಪಲ್‌ ಕಾರ್ಪೊರೇಷನ್‌, 1,746 ಸಾರ್ವಜನಿಕ ಚರಂಡಿಗಳು ಮತ್ತು 5,624 ಒಳ ಚರಂಡಿಗಳು, 25 ಸಣ್ಣ ಮತ್ತು ದೊಡ್ಡ ನಾಲೆಗಳನ್ನು ನಿರ್ಮಿಸಿದೆ. ಇವುಗಳ ನೀರನ್ನು ನೇರವಾಗಿ ಪರಿಸರಕ್ಕೆ ಬಿಡುಗಡೆ ಮಾಡದೇ ಶುದ್ಧೀಕರಿಸಿ ಬಿಡಲಾಗುತ್ತಿದೆ. ನಗರದಲ್ಲಿ ಏಳು ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲಾಗಿದೆ. ಇವುಗಳ ಮೂಲಕ ಪ್ರತಿನಿತ್ಯ 11 ಕೋಟಿ ಲೀಟರ್‌ ನೀರನ್ನು ಶುದ್ಧೀಕರಿಸಿ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ನಗರದ ಮೂಲಕ ಹರಿಯುವ ಸರಸ್ವತಿ ಮತ್ತು ಕನ್ಹಾ ನದಿಗಳನ್ನು ಚರಂಡಿಗಳ ಸಂಪರ್ಕದಿಂದ ಮುಕ್ತಗೊಳಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಇಂದೋರ್‌ ಅನ್ನು ವಾಟರ್‌ ಪ್ಲಸ್‌ ನಗರ ಎಂದು ಘೋಷಣೆ ಮಾಡಲಾಗಿದೆ.

ಸ್ವಚ್ಛ ಭಾರತ್‌ ಅಭಿಯಾನದ ಭಾಗವಾಗಿ ಪ್ರತಿವರ್ಷ ನಗರಗಳ ಸ್ವಚ್ಛತೆ, ನೈರ್ಮಲ್ಯ, ನೀರಿನ ಶುದ್ಧತೆಯ ಮೌಲ್ಯಮಾಪನಕ್ಕೆ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

click me!