
ಮುಂಬೈ : ದೇಶದ ವಿಮಾನಯಾನ ವ್ಯವಸ್ಥೆಯಲ್ಲೇ ಅಲ್ಲೋಲಕಲ್ಲೋಲ ಉಂಟುಮಾಡಿದ್ದ ಇಂಡಿಗೋ ವಿಮಾನಗಳ ಸಂಚಾರ ರದ್ದತಿ ಭಾನುವಾರ ಕೊಂಚ ನಿಯಂತ್ರಣಕ್ಕೆ ಬಂದಿದೆ. ದೇಶೀಯವಾಗಿ ಸಂಚರಿಸುತ್ತಿದ್ದ 2,300 ವಿಮಾನಗಳ ಪೈಕಿ 1,650 ವಿಮಾನಗಳು ಹಾರಾಟ ನಡೆಸಿವೆ. ಉಳಿದ 650 ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್ ಭಾನುವಾರ ಮಾಹಿತಿ ನೀಡಿದೆ.
ಶನಿವಾರ 2,300 ವಿಮಾನಗಳ ಪೈಕಿ 1,500 ಹಾರಾಟ ನಡೆಸಿದರೆ, 800 ವಿಮಾನಗಳನ್ನು ರದ್ದುಪಡಿಸಲಾಗಿತ್ತು. ಅದರ ಹಿಂದಿನ ದಿನ ಡಿ.5ರಂದು ಅತಿ ಹೆಚ್ಚು 1,600 ವಿಮಾನಗಳು ರದ್ದಾಗಿದ್ದವು. ಇದು ಭಾನುವಾರ ಬಹುತೇಕ ಸರಿದಾರಿಗೆ ಬಂದಿದೆ. ಡಿ.10ಕ್ಕೆ ವ್ಯವಸ್ಥೆಯನ್ನು ಸಂಪೂರ್ಣ ಸರಿದಾರಿಗೆ ತರಲಾಗುವುದು ಎಂದು ಇಂಡಿಗೋ ವಿಶ್ವಾಸ ವ್ಯಕ್ತಪಡಿಸಿದೆ.
ವಿಮಾನಗಳ ರದ್ದತಿ ಕುರಿತಾಗಿ 24 ಗಂಟೆಯೊಳಗೆ ಉತ್ತರಿಸುವಂತೆ ವಿಮಾನಯಾನ ಸಚಿವಾಲಯ ನೊಟೀಸ್ ನೀಡಿದ ಬೆನ್ನಲ್ಲೇ, ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್, ‘ಹಂತ ಹಂತವಾಗಿ ನಾವು ಸಮಸ್ಯೆಯನ್ನು ಸರಿಪಡಿಸುತ್ತಿದ್ದೇವೆ’ ಎಂದು ತಮ್ಮ ಸಿಬ್ಬಂದಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ.
‘ವಿಮಾನಗಳು ರದ್ದಾದರೆ ಗ್ರಾಹಕರು ವಿಮಾನ ನಿಲ್ದಾಣಕ್ಕೆ ಬರುವುದನ್ನು ತಡೆಯಲು ಆರಂಭಿಕ ಹಂತದಲ್ಲಿಯೇ ರದ್ದತಿಗಳನ್ನು ಖಚಿತಪಡಿಸುತ್ತಿದ್ದೇವೆ. ಭಾನುವಾರ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ಮಾಡಿದ್ದೇವೆ. ಹಂತ ಹಂತವಾಗಿ ಸಹಜ ಸ್ಥಿತಿಗೆ ಹಿಂತಿರುಗುತ್ತಿದ್ದೇವೆ’ ಎಂದಿದ್ದಾರೆ.
ಕಳೆದ ಕೆಲ ದಿನಗಳಿಂದ ರದ್ದಾದ ತನ್ನ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆ ಒಟ್ಟು 610 ಕೋಟಿ ರು. ಹಣವನ್ನು ಮರಳಿಸಿದೆ. ಪೂರ್ಣ ಪ್ರಮಾಣದಲ್ಲಿ ಹಣ ಮರಳಿಸಲು ಕೇಂದ್ರ ಸರ್ಕಾರ ಸಂಸ್ಥೆಗೆ ಭಾನುವಾರ ರಾತ್ರಿ 8 ಗಂಟೆಯ ಗಡುವು ನೀಡಿತ್ತು. ಅದರೊಳಗೆ 610 ಕೋಟಿ ರು. ಹಣ ಮರುಪಾವತಿ ಮಾಡಿದ್ದಾಗಿ ಕಂಪನಿ ಹೇಳಿದೆ. ಅಲ್ಲದೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಾಕಿ ಉಳಿದಿದ್ದ 3000 ಲಗೇಜ್ ಅನ್ನು ಪ್ರಯಾಣಿಕರಿಗೆ ತಲುಪಿಸಲಾಗಿದೆ. ಇಂಥ ಲಗೇಜ್ ತಲುಪಿಸುವುದಕ್ಕೂ ಕೇಂದ್ರ ಸರ್ಕಾರ 48 ಗಂಟೆಗಳ ಗಡುವು ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ