ದೇಶದಲ್ಲಿ ಸುಪ್ರೀಂ ಕೋರ್ಟ್ ಆರಂಭವಾಗಿ 75 ವರ್ಷ ತುಂಬಿರುವ ಹಿನ್ನಲೆಯಲ್ಲಿ, ವಾರ್ಷಿಕೋತ್ಸವದ ನೆನಪಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ವೋಚ್ಛ ನ್ಯಾಯಾಲಯದ ಹೊಸ ಧ್ವಜ ಮತ್ತು ಲಾಂಛನವನ್ನು ಅನಾವರಣಗೊಳಿಸಿದರು.
ನವದೆಹಲಿ: ದೇಶದಲ್ಲಿ ಸುಪ್ರೀಂ ಕೋರ್ಟ್ ಆರಂಭವಾಗಿ 75 ವರ್ಷ ತುಂಬಿರುವ ಹಿನ್ನಲೆಯಲ್ಲಿ, ವಾರ್ಷಿಕೋತ್ಸವದ ನೆನಪಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ವೋಚ್ಛ ನ್ಯಾಯಾಲಯದ ಹೊಸ ಧ್ವಜ ಮತ್ತು ಲಾಂಛನವನ್ನು ಅನಾವರಣಗೊಳಿಸಿದರು.
ನ್ಯಾಯ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುವ ಹೊಸ ಧ್ವಜ ಮತ್ತು ಲಾಂಛನವನ್ನು ಬಿಡುಗಡೆ ಮಾಡಲಾಗಿದ್ದು, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ( ಎನ್‌ಐಎಫ್‌ಟಿ) ಈ ಹೊಸ ಲಾಂಛನವನ್ನು ಸಿದ್ಧಪಡಿಸಿದೆ. ಹೊಸ ಧ್ವಜವು ಅಶೋಕ ಚಕ್ರ, ಸುಪ್ರೀಂಕೋರ್ಟ್ ಕಟ್ಟಡ ಮತ್ತು ಸಂವಿಧಾನವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಸಂಸದ ಅರ್ಜುನ್ ಮೇಘವಾಲ್, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಉಪಸ್ಥಿತರಿದ್ದರು.
ಆಗಸ್ಟ್‌ನಲ್ಲಿ ಭರ್ಜರಿ 1.75 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹ
ನವದೆಹಲಿ: ಆಗಸ್ಟ್‌ನಲ್ಲಿ 1.75 ಲಕ್ಷ ಕೋಟಿ ರು. ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಆಗಿದೆ. ಇದು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ.10ರಷ್ಟು ಅಧಿಕ. ಕಳೆದ ವರ್ಷದ ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ರು. ಹಾಗೂ ಈ ವರ್ಷದ ಜುಲೈನಲ್ಲಿ 1.82 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹ ಆಗಿತ್ತು. ಈ ಆಗಸ್ಟಲ್ಲಿ 1.25 ಲಕ್ಷ ಕೋಟಿ ರು. ದೇಶಿ ಆದಾಯ ಹಾಗೂ ಆಮದು ಸರಕಿನಿಂದ 49,976 ಕೋಟಿ ರು. ಜಿಎಸ್ಟಿ ಸಂಗ್ರಹ ಆಗಿದೆ. 24,460 ಕೋಟಿ ರು. ರೀಫಂಡ್ ಮಾಡಲಾಗಿದೆ. 2024ರ ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹ ಆಗಿತ್ತು. ಇದು ಈವರೆಗಿನ ಅತ್ಯಧಿಕ ಸಂಗ್ರಹ.
ಕೊಲ್ಲೂರು ಅಭಯಾರಣ್ಯದಲ್ಲಿ ಜೇಡದ ಹೊಸ ಪ್ರಭೇದ ಪತ್ತೆ
ಕೋಲ್ಕತಾ: ಜೀವ ವೈವಿಧ್ಯತೆಯ ನೆಲೆಯಾಗಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎರಡು ಹೊಸ ಜೇಡದ ಪ್ರಭೇದವನ್ನು ಪತ್ತೆ ಹಚ್ಚಲಾಗಿದ್ದು, ಈ ಬಗ್ಗೆ ಝುವಾಲಜಿ ಸರ್ವೇ ಆಫ್ ಇಂಡಿಯಾ ( ಝಡ್‌ಎಸ್‌ಐ) ಮಾಹಿತಿ ನೀಡಿದೆ. ಕರ್ನಾಟಕ ಮತ್ತು ಕೇರಳದ ಅರಣ್ಯ ಪ್ರದೇಶ ಅವು ಪತ್ತೆಯಾಗಿವೆ. ಮಿಮೆಟಸ್ ಸ್ಪೈನಾಟಸ್, ಮಿಮೆಟಸ್ ಪರ್ವುಲಸ್ ಎಂಬ ಜೇಡದ ಎರಡು ಪ್ರಭೇದ ಪತ್ತೆ ಮಾಡಲಾಗಿದೆ. ಭಾರತದಲ್ಲಿ 118 ವರ್ಷಗಳ ಬಳಿಕ ಮಿಮೈಮಟಸ್ ಪ್ರಭೇದ ಪತ್ತೆಯಾಗಿದೆ. ಇದುವರೆಗೆ ದೇಶದಲ್ಲಿ ಮೂರು ಮಿಮೆಟಸ್ ಪ್ರಭೇದ ಪತ್ತೆಯಾಗಿದ್ದು, ಅವೆಲ್ಲವೂ ದಕ್ಷಿಣ ಭಾರತದಲ್ಲೇ ಕಂಡುಬಂದಿದೆ.
ಮುಸ್ಲಿಮರ ಮೇಲಿನ ದಾಳಿ ಬಗ್ಗೆ ಬಿಜೆಪಿ ಮೌನ: ರಾಗಾ
ನವದೆಹಲಿ: ಬಿಜೆಪಿ ಆಡಳಿತದ ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಗೋರಕ್ಷಕರಿಂದ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ‘ಮೂಕ ಪ್ರೇಕ್ಷಕನಂತೆ’ ನೋಡುತ್ತಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಜೊತೆಗೆ ಅರಾಜಕತೆವಾದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮ ಎಕ್ಸ್‌ನಲ್ಲಿ ‘ದ್ವೇಷಕಾರುವವರು ಅಧಿಕಾರದ ಏಣಿಯನ್ನು ಏರಿ, ದ್ವೇಷದ ಅಧಿಕಾರದ ಮೂಲಕ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಇಂಥಹವರು ಗೋರಕ್ಷಣೆ ಹೆಸರಿನಲ್ಲಿ ದಾಳಿ ನಡೆಸಲು ಅನುಮತಿ ಕೊಡುತ್ತಾರೆ. ಅದರಿಂದಲೇ ದಾಳಿಕೋರರು ಸ್ವತಂತ್ರವಾಗಿ ಆಕ್ರಮಣ ನಡೆಸುತ್ತಾರೆ’ ಎಂದು ಆರೋಪಿಸಿದರು.