ಚೀನಾದಿಂದ ವಾಪಸ್ಸಾದವರಿಗೆ 14 ದಿನ ಆಸ್ಪತ್ರೆ ವಾಸ ಕಡ್ಡಾಯ!

By Kannadaprabha NewsFirst Published Feb 1, 2020, 10:53 AM IST
Highlights

ಚೀನಾದಿಂದ ಬಂದವರು 14 ದಿನಗಳ ಬಳಿಕ ಮನೆಗೆ| ವೈರಾಣು ತಗುಲಿರುವ ಭೀತಿಯಿಂದ ಈ ಕ್ರಮ| ದೆಹಲಿಯಲ್ಲಿ 14 ದಿನಗಳ ಕಾಲ ಸತತ ನಿಗಾ| ಸೇನೆ ಹಾಗೂ ಏರ್‌ಪೋರ್ಟ್‌ ಸಿಬ್ಬಂದಿಗಳಿಂದ ಜಂಟಿ ಕಾರ್ಯಾಚರಣೆ| ಇದಕ್ಕಾಗಿ ದೆಹಲಿಯ ಮನೇಸಾರ್‌ನಲ್ಲಿ ವಿಶೇಷ ವ್ಯವಸ್ಥೆ

ನವದೆಹಲಿ[ಫೆ.01]: ಕೊರೋನಾ ವೈರಸ್‌ ಸೋಂಕು ಬಾಧಿತ ಚೀನಾದ ವುಹಾನ್‌ನಿಂದ ತೆರವುಗೊಳಿಸಿ ಭಾರತಕ್ಕೆ ಆಗಮಿಸುವ ನಾಗರಿಕರನ್ನು ದೆಹಲಿಯಲ್ಲಿಯೇ ಇರಿಸಿ, 14 ದಿನ ಅವರ ಮೇಲೆ ನಿಗಾ ಇರಿಸಲಾಗುವುದು. ಬಳಿಕವಷ್ಟೇ ಅವರನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.

ಚೀನಾದಿಂದ ಬಂದವರನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ದೆಹಲಿಯ ಮನೇಸಾರ್‌ನಲ್ಲಿ ಸ್ಥಾಪಿಸಲಾಗದ ವಿಶೇಷ ವ್ಯವಸ್ಥೆಯಲ್ಲಿ ಇರಿಸಲಾಗುತ್ತದೆ. ಇವರನ್ನು ವೈದ್ಯರ ತಂಡ ಪರಿಶೀಲನೆ ನಡೆಸಲಿದ್ದು, ಎರಡು ವಾರಗಳ ಬಳಿಕ ಸೋಂಕಿನ ಲಕ್ಷಣ ಕಾಣಿಸಿಕೊಳ್ಳದಿದ್ದರೆ ಮನೆಗೆ ಕಳುಹಿಸಿ ಕೊಡಲಾಗುತ್ತದೆ. ಒಟ್ಟು 300 ಮಂದಿಗೆ ಬೇಕಾ ವ್ಯವಸ್ಥೆ ಇಲ್ಲಿರಲಿದೆ ಎಂದು ಸೇನೆ ಹೇಳಿದೆ.

ಏರ್‌ಪೋರ್ಟ್‌ಗೆ ಬಂದಿಳಿದ ತಕ್ಷಣವೇ, ಏರ್‌ಪೋರ್ಟ್‌ ಆರೋಗ್ಯ ಪ್ರಾಧಿಕಾರ ಹಾಗೂ ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಸೇವೆ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅವರನ್ನು ಮೂರು ವಿಭಾಗಗಳನ್ನಾಗಿ ಮಾಡಲಿದೆ. ಸೋಂಕಿನ ಲಕ್ಷಣಗಳು ಇರುವ, ಸೋಂಕು ಕಾಣಿಸಿಕೊಂಡ ಅವಧಿಯಲ್ಲಿ ಪ್ರಾಣಿ ಮಾರುಕಟ್ಟೆಗೆ ತೆರಳಿದ ಹಾಗೂ ಸೋಂಕು ಇಲ್ಲದವರು ಹೀಗೆ ಮೂರು ವಿಭಾಗಗಳನ್ನು ಮಾಡಲಾಗುತ್ತದೆ. ಸೋಂಕಿನ ಲಕ್ಷಣ ಇರುವ ಮಂದಿಯನ್ನು ದೆಹಲಿಯ ಕಂಟೋನ್ಮೆಂಟ್‌ನ ಬೇಸ್‌ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು. ಉಳಿದವರನ್ನು 14 ದಿನಗಳ ಕಾಲ ಪ್ರತಿ ದಿನ ಆರೋಗ್ಯ ತಪಾಸಣೆ ಮಾಡಲಾಗುವುದು. 14 ದಿನಗಳ ಬಳಿಕ ಸೋಂಕಿನ ಲಕ್ಷಣ ಕಂಡು ಬರದಿದ್ದರೆ ಮನೆಗೆ ಕಳುಹಿಸಲಾಗುತ್ತದೆ ಎಂದು ಸೇನೆ ತಿಳಿಸಿದೆ.

click me!