ಲಗೇಜ್ ಸಾಗಿಸುವ ನಮ್ಮ ಕೈಗಾಡಿಯಲ್ಲಿ ಶವಗಳ ಸಾಗಿಸಿದೆವು : ರೈಲ್ವೆ ಕೂಲಿ ವಿವರಿಸಿದ ಕಾಲ್ತುಳಿತ ದುರಂತದ ಚಿತ್ರಣ

Published : Feb 17, 2025, 06:24 AM ISTUpdated : Feb 17, 2025, 06:57 AM IST
ಲಗೇಜ್ ಸಾಗಿಸುವ ನಮ್ಮ ಕೈಗಾಡಿಯಲ್ಲಿ ಶವಗಳ ಸಾಗಿಸಿದೆವು : ರೈಲ್ವೆ ಕೂಲಿ ವಿವರಿಸಿದ ಕಾಲ್ತುಳಿತ ದುರಂತದ ಚಿತ್ರಣ

ಸಾರಾಂಶ

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ 18 ಜನರನ್ನು ಬಲಿ ಪಡೆದ ಕಾಲ್ತುಳಿತದ ಹೃದಯ ವಿದ್ರಾವಕ ಕಥೆಗಳನ್ನು ಕೂಲಿಗಳು ಮತ್ತು ಪ್ರಯಾಣಿಕರು ಹಂಚಿಕೊಂಡಿದ್ದಾರೆ. ಕಳೆದುಹೋದ ಮಕ್ಕಳು, ಪ್ರೀತಿಪಾತ್ರರ ಸಾವು ಮತ್ತು ಬದುಕುಳಿದವರ ಹರಸಾಹಸದ ಕಥೆಗಳು ಮೈ ಜುಮ್ಮೆನಿಸುವಂತಿದೆ.

ನವದೆಹಲಿ: ಎಲ್ಲೆಲ್ಲೂ ಜನರ ದೌಡು, ಅತ್ತಿಂದಿತ್ತ ಸಾಗಲು ಹರಸಾಹಸ, ತಮ್ಮವರು ಕಾಣೆಯಾದ ಆತಂಕ, ಬಂಧು ಮಿತ್ರರ ಸಾವಿನ ಶೋಕ, ಇದರ ನಡುವೆಯೇ ನೊಂದವರ ನೋವಿಗೆ ಧ್ವನಿಯಾದ ಸ್ಥಳೀಯರು, ಕೂಲಿಯಾಳುಗಳು....  ಇದು 18 ಜನರನ್ನು ಬಲಿ ಪಡೆದ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಕಂಡುಬಂದ ದೃಶ್ಯಗಳು. 
ಶನಿವಾರ ರಾತ್ರಿ ಕಾಲ್ತುಳಿತದ ನಡೆದ ವೇಳೆ ಸ್ಥಳದಲ್ಲಿದ್ದ ರೈಲ್ವೆ ಕೂಲಿ ಯಾಳು ಮೊಹಮ್ಮದ್ ಹಾತಿಂ ಕರುಣಾಜನಕ ಕತೆ ಹೇಳಿದ್ದಾರೆ.

ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಿರುಚಾಟ ಕೇಳಿಸಿತು. ಎಲ್ಲಾ ಕೂಲಿಗಳು ಅತ್ತ ಧಾವಿಸಿದೆವು. ದಿಕ್ಕಾಪಾಲಾಗಿ ಓಡುತ್ತಿದ್ದ ಜನರ ನಡುವೆ ನೆಲದಲ್ಲಿ ಬಿದ್ದಿದ್ದ 8-10 ಮಕ್ಕಳನ್ನು ಅಲ್ಲಿಂದ ಹೊರ ಕರೆತಂದೆವು. ಒಬ್ಬ ಮಹಿಳೆ ತನ್ನ 4 ವರ್ಷದ ಮಗಳು ಅಸುನೀಗಿದಳೆಂದು ಅಳುತ್ತಿದ್ದಳು. ಅವರಿಬ್ಬರನ್ನೂ ಅಲ್ಲಿಂದಾಚೆ ಕರೆತಂದೆ. 2 ನಿಮಿಷಗಳ ನಂತರ ಮಗು ಉಸಿರಾಡ ತೊಡಗಿದಾಗ ತಾಯಿಯ ಖುಷಿಗೆ ಪಾರವೇ ಇರಲಿಲ್ಲ. ' ಎಂದರು.

ಮಗಳ ಶವದೊಂದಿಗೆ ಅಪ್ಪನ ಆಕ್ರಂದನ
ಇನ್ನೋರ್ವ ಹಮಾಲಿ ಜಿತೇಶ್‌ಮೀನಾ ತಮ್ಮ ಅನುಭವ ಹಂಚಿಕೊಳ್ಳುತ್ತಾ, 'ಕಾಲ್ತುಳಿತ ಉಂಟಾದಾಗ ಒಬ್ಬಾತ ತನ್ನ ಮಗಳ ಶವವನ್ನೆತ್ತಿಕೊಂಡು ಹೊರಬಂದು, ತುಂಬಿದ ಕಂಗಳೊಂದಿಗೆ, 'ನನ್ನ ಬಳಿ ಹಣವಿಲ್ಲ' ಎಂದರು. ಕೂಡಲೇ ಕೂಲಿಯಾಳುಗಳೆಲ್ಲಾ ಸೇರಿಕೊಂಡು ಒಂದಿಷ್ಟು ಹಣ ಸಂಗ್ರಹಿಸಿದೆವು. ಜೊತೆಗೆ, ಅವರಿಗಾಗಿ ಆಟೋ ವ್ಯವಸ್ಥೆಯನ್ನೂ ಮಾಡಿಕೊಟ್ಟೆವು. ಅಷ್ಟರಲ್ಲಾಗಲೇ ಅವರು ತಮ್ಮ ಚಪ್ಪಲಿ, ಮೊಬೈಲ್ ಕಳೆದುಕೊಂಡಿದ್ದರು. ಜೊತೆಗೆ, ಪತ್ನಿಯೂ ಕಾಣೆಯಾಗಿದ್ದರು' ಎಂದು ಹೇಳಿದ್ದಾರೆ. 

ಪತ್ನಿಗಾಗಿ ಪತಿಯ ಹುಡುಕಾಟ:
ಪ್ರಯಾಣಿಕರ ವಿಷಯಕ್ಕೆ ಬಂದರೆ, ಉತ್ತರಪ್ರದೇಶದವರಾದ ಗುಪ್ತೇಶ್ವರ್ ಕಂಡಕಂಡವರಿಗೆ ತಮ್ಮ ಮೊಬೈಲ್ ತೋರಿಸುತ್ತಾ ಹೆಂಡತಿಯ ಹುಡುಕಾಟದಲ್ಲಿ ತೊಡಗಿದ್ದುದು ಕಂಡು ಬಂದಿತು. ಸಹೋದರ ಹಾಗೂ ಮಡದಿಯೊಂದಿಗೆ ಕುಂಭಕ್ಕೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದ ಅವರು ಪ್ಲಾಟ್‌ಫಾರ್ಮ್ ಬದಲಿಸುವ ವೇಳೆ ಉಂಟಾದ ನೂಕಾಟದಿಂದಾಗಿ, ಹಿಡಿದಿದ್ದ ಹೆಂಡತಿಯ ಕೈ ಬಿಟ್ಟಿದ್ದಾರೆ. ಆಗಿಂದ ಆಕೆಗಾಗಿ ಹುಡುಕುತ್ತಿರುವ ಯಾದವ್, ಗಾಯಾಳು ದಾಖಲಿಸಲಾದ ಆಸ್ಪತ್ರೆಗಳಿಗೂ ತೆರಳಿ ಹೆಂಡತಿ ಅಲ್ಲಿಯಾದರೂ ಕಾಣಬಹುದೇ ಎಂದು ಹುಡುಕುತ್ತಿದ್ದಾರೆ.

ಲಗೇಜ್ ಸಾಗಿಸುವ ಕೈಗಾಡಿಯಲ್ಲಿ ಶವ ಸಾಗಣೆ
ನವದೆಹಲಿ: ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಇದ್ದಕ್ಕಿದ್ದಂತೆಸಂಭವಿಸಿದ ಕಾಲ್ತುಳಿತದ ಭೀಕರತೆಯನ್ನು ಬಿಚ್ಚಿಟ್ಟಿರುವ ಕೂಲಿಗಳು, 'ಪ್ರಯಾಣಿಕರ ಲಗೇಜ್ ಸಾಗಿಸಲು ಇರುವ ಕೈಗಾಡಿಯಲ್ಲಿ ಶವಗಳನ್ನು ಆ್ಯಂಬುಲೆನ್ಸ್ ತನಕ ಸಾಗಿಸಿದೆವು' ಎಂದಿದ್ದಾರೆ.  ಈ ಬಗ್ಗೆ ಮಾತನಾಡಿದ ಹಮಾಲಿ ಯೊಬ್ಬರು, 'ರೈಲು ನಿಲ್ದಾಣದ ಸೇತುವೆ (ಪ್ಲಾಟ್‌ಫಾರಂಗಳ ನಡುವೆ ಇರುವ)ಯ ಮೇಲೆ ಜನ ಗುಂಪು ಗೂಡಿದ್ದರು. ಪ್ರಯಾಗ್‌ರಾಜ್‌ನ ಕಡೆ ಸಾಗುವ ರೈಲು ಬರುತ್ತಿದ್ದಂತೆ ನೂಕು ನುಗ್ಗಲುಂಟಾಯಿತು. ಇದರಿಂದಾಗಿ ಉಸಿರುಗಟ್ಟಿ 10 ರಿಂದ 15 ಜನ ಅಲ್ಲೇ ಪ್ರಾಣ ಕಳೆದುಕೊಂಡರು' ಎಂದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ