ಹಿರಿ ಜೀವಕ್ಕೆ ತೋರಿದ ಕಾಳಜಿ, ಒಂದು ಮೆಸೇಜ್‌ಗೆ ವಹಿಸಿದ ಮುತುವರ್ಜಿ, ಭಾರತೀಯ ರೈಲ್ವೇಸ್‌ಗೆ ನಮೋ ನಮಃ

Published : Feb 18, 2023, 12:59 PM ISTUpdated : Feb 18, 2023, 01:23 PM IST
ಹಿರಿ ಜೀವಕ್ಕೆ ತೋರಿದ ಕಾಳಜಿ, ಒಂದು ಮೆಸೇಜ್‌ಗೆ ವಹಿಸಿದ ಮುತುವರ್ಜಿ, ಭಾರತೀಯ ರೈಲ್ವೇಸ್‌ಗೆ ನಮೋ ನಮಃ

ಸಾರಾಂಶ

ಒಂದು ಟ್ವೀಟಿಗೆ ಭಾರತೀಯ ರೈಲ್ವೆ ಇಲಾಖೆ ಸ್ಪಂದಿಸಿ ಕ್ರಮ ತೆಗೆದುಕೊಂಡಿತು, ಇನ್ಯಾರೋ ಮನವಿಗೆ ಕೂಡಲೇ ರೇಲ್ವೆ ಸಚಿವರು ಸ್ಪಂದಿಸಿದರು.. ಇಂಥ ಸುದ್ದಿ ಮಾಡಿದ್ದ ನಮಗೆ ಖುದ್ದು ಅಂಥ ಅನುಭವವಾಗಿದ್ದು ಹೀಗೆ. 

ಅಹ್ಮದಾಬಾದ್‌ನಲ್ಲಿ ಅಕ್ಕನ ಮಗಳ ಮದ್ವೆ. ಕೆಲವರು ರೈಲಿನಲ್ಲಿ, ಮತ್ತೆ ಕೆಲವರು ಕಾರು, ಫ್ಲೈಟ್‌ನಲ್ಲಿ ಹೋಗಿ ನಮ್ಮ ಗೂಡಿಗೆ ಮರಳಿಯಾಗಿತ್ತು. ಒಂದೆರಡು ವಾರ ಇದ್ದು ಹೊರಟಿದ್ದು 80 ವರ್ಷ ದಾಟಿದ್ದ ಅಪ್ಪ, 70ರ ಆಸುಪಾಸಿನ ಅತ್ತೆ, ಮಾವ. ಇವರನ್ನು ಸೇಫ್ ಆಗಿ ಊರಿಗೆ ಸೇರಿಸೋ ಟೆನ್ಷನ್ ಎಲ್ಲರಿಗೂ ಇತ್ತು. ಆ ದಿನ ಬಂತು. ಅಹ್ಮದಾಬಾದ್‌ನಿಂದ ಉಡುಪಿಗೆ ತಲುಪಲು ರೈಲು ಹತ್ತಿದ್ದರು. ಟ್ರೈನ್ ಡೀವಿಯೇಟ್ ಆಗೋ ಮೆಸೇಜ್ ಬಂದಿತ್ತು. ಅಕಸ್ಮಾತ್ ಹಾಗಾದರೆ ಬೆಂಗಳೂರಿನ ಕೆ.ಆರ್.ಪುರಂ ಸ್ಟೇಷನ್‌ನಲ್ಲಿ ಇಳಿಸಿಕೊಳ್ಳಲೂ ವ್ಯವಸ್ಥೆಯೂ ಆಗಿತ್ತು. ಆದರೆ, ಟ್ರ್ಯಾಕರ್‌ನಲ್ಲಿ ಉಡುಪಿಯೇ ತೋರಿಸುತ್ತಿತ್ತು. ಭಂಡ ಧೈರ್ಯದಲ್ಲಿ ಇದ್ವಿ. ಯಾವಾಗ ವಾಸಿಯಲ್ಲಿ ಟ್ರೈನ್ ಡೀವಿಯೇಟ್ ಆಯಿತೋ, ನಮಗೆ ಟ್ರ್ಯಾಕ್ ಮೇಲಿನ ಹಿಡಿತ ತಪ್ಪಿ ಹೋಯಿತು. ಆಗ ಶುರುವಾಗಿದ್ದು ಟೆನ್ಷನ್. ಟಿಟಿಯೂ ಬಂದಿರಲಿಲ್ಲ ಇವರ ಟಿಕೆಟ್ ಚೆಕ್ ಮಾಡಲು. 

ಇನ್ನೇನು ಮಾಡೋದು? 

ನಾವೂ ಟ್ವೀಟ್ ಮಾಡಿಯಾಯಿತು. ತಕ್ಷಣವೇ ರೆಸ್ಪಾನ್ಸ್ ಸಹ ಬಂತು. ಪರ್ಸನಲ್ ಮೆಸೇಜ್ ಕಳುಹಿಸಿಯೂ ಆಯಿತು. ಆದರೆ, ಮೆಕಾನಿಕಲ್ ರೆಸ್ಪಾನ್ಸ್. ಮಾಡಿದ ಕಂಪ್ಲೇಂಟ್ ಮತ್ತು ಟ್ವೀಟ್ ನನಮಗೆ ಮುಂದೇನು ಮಾಡಬೇಕು ಅಂತ ದಾರಿ ತೋರಿಸಲಿಲ್ಲ. ಕಸ್ಟಮರ್ ಕೇರ್‌ಗೆ ಪೋನ್ ಮಾಡಿದಾಗ ಡೀವಿಯೇಟ್ ಆದ ಟ್ರೈನ್ ಕ್ರಾಸಿಂಗ್ ಸೇರಿ ಬೇರೆ ಕಾರಣಗಳಿಂದ ಸ್ಟಾಪ್ ಆಗುತ್ತೆ. ಇಲ್ಲದಿದ್ದರೆ ನಿಲ್ಲೋಲ್ಲ ಅಂದು ಬಿಡೋದಾ? ಹಿರಿಯರಿಗೆ ಈ ವಿಷಯ ಹೇಳುವುದಾದರೂ ಹೇಗೆ? ಆತಂಕದಲ್ಲಿ ಇನ್ನೇನೋ ಆಗಿಬಿಟ್ಟರೆ? ಕೊಯಮತ್ತೂರಿಗೆ ಹೋಗಿಯೇ ಇಳಿಸಿಕೊಳ್ಳಲು ನಿರ್ಧರಿಸಿದೆವು. ಬೆಳಗಿನ ಜಾವ ಕಾರಿನಲ್ಲಿ ಪ್ರಯಾಣಿಸಲು ಸಿದ್ಧರಾಗಿದ್ದೆವು. ಆಗಲೇ ನಿರೀಕ್ಷೆಗಿಂತ ಹೆಚ್ಚಿಗೆ ಪ್ರಯಾಣಿಸಿದ್ದ ಇವರು ಮತ್ತೆ 15 ಗಂಟೆಗಳ ಕಾಲ ಪ್ರಯಾಣಿಸೋದು ನೆನಪಿಸಿಕೊಂಡೇ ಮತ್ತೊಂದು ಆತಂಕ ಶುರುವಾಗಿತ್ತು. ಎಲ್ಲರಿಗೂ ಅವರ ಆರೋಗ್ಯದ್ದೇ ಚಿಂತೆ. ಅವರ ಹತ್ತಿರ ಊಟ ಮತ್ತೊಂದು ಹೊತ್ತಿಗೆ ಸಾಕಾಗುವಷ್ಟಿತ್ತು. ಏನು ಬೇಕು ಅದನ್ನು ತಿಂದು ಜೀರ್ಣಿಸಿಕೊಳ್ಳುವ ವಯಸ್ಸು ಅವರದ್ದಲ್ಲ.  
 

ಇಷ್ಟೆಲ್ಲಾ ಆಗುವ ಹೊತ್ತಿಗೆ ರಾತ್ರಿ 10 ಆಗಿತ್ತು. ಮಾರನೇ ದಿನ ಟ್ರೈನ್ ರೀಚ್ ಆಗುತ್ತೆ. ಎಷ್ಟು ಹೊತ್ತಿಗೆ ಅಂತ ಗೊತ್ತಿಲ್ಲ. ಅಷ್ಟೊತ್ತಿಗೆ ಸಿಕ್ಕಿದ್ದು ಭಾರತೀಯ ರೈಲಿನ PRO ಅನಿಶ್ ನಂಬರ್. ತಕ್ಷಣವೇ ಮಾಡಿದ ಮೆಸೇಜ್‌ಗೆ ರೆಸ್ಪಾನ್ಸ್ ಬಂತು. ಆದರೆ, ಆಗಲೇ ಬಹಳ ಲೇಟ್ ಆಗಿದ್ದರಿಂದ ಯಾವ ಅಧಿಕಾರಿಯಿಂದಲೂ ಅವರಿಗೂ ಸೂಕ್ತ ಉತ್ತರ ಸಿಕ್ಕಿರಲಿಲ್ಲ. ನಂಗೆ South Western Railwayಯ ಸೀನಿಯರ್ ಡಿಸಿಎಂ ಡಾ. ಎ.ಎನ್. ಕೃಷ್ಣ ರೆಡ್ಡಿ ಅವರ ಸಂಪರ್ಕ ಸಂಖ್ಯೆ ಕೊಟ್ಟು ಕಾಲ್ ಮಾಡಲು ಹೇಳಿದರು. ಆ ರಾತ್ರಿ 11ಕ್ಕೆ ಒಬ್ಬ ರೈಲ್ವೆಯ ಉನ್ನತ ಅಧಿಕಾರಿಯೊಬ್ಬರು ನನ್ನ ಫೋನ್ ಎತ್ತಬಹುದು ಎಂಬ ನಿರೀಕ್ಷೆಯೇ ಇರಲಿಲ್ಲ ಬಿಡಿ. ಆದರೂ ಕಾಲ್ ಮಾಡಿದೆ. ಫೋನ್ ಎತ್ತಲಿಲ್ಲ. ಯಾವುದಕ್ಕೂ ಇರಲಿ ಅಂತ ಎಲ್ಲ ಮಾಹಿತಿ ಕೊಟ್ಟು, ಏನಾದರೂ ಹೆಲ್ಪ್ ಮಾಡಬಹುದಾ ಕೇಳಿದ್ದೆ. 10 ನಿಮಿಷವಾದರೂ ಮೆಸೇಜ್ ನೋಡಲಿಲ್ಲ. ಆಮೇಲೆ ನೋಡಿದರೂ ಏನೂ ರೆಸ್ಪಾನ್ಸ್ ಬರಲಿಲ್ಲ. ಎಲ್ಲ ಆಸೆ ಬಿಟ್ಟಾಗಿತ್ತು. ಕೊಯಮತ್ತೂರಿಗೆ ಹೋಗುವುದೆಂದು ನಿರ್ಧರಿಸಿಯಾಗಿತ್ತಲ್ಲ ಹೇಗೂ. 

ಫೋನ್ ರಿಂಗ್ ಆಯಿತು. ಹೌದು, ಅದು ಡಾ. ರೆಡ್ಡಿಯವರದ್ದು. ಆತಂಕದಲ್ಲಿಯೇ ಇದ್ದೆ. ಎಲ್ಲವನ್ನೂ ಹೇಳಿಬಿಟ್ಟೆ. ಆದರೆ, ಅವರು ಕೂಲ್ ಆಗಿಯೇ ಇದ್ದರು. ನನಗೆ ಫೋನ್ ಮಾಡೋ ಮುಂಚೆಯೇ ರೈಲು ಎಲ್ಲಿದೆ ಎನ್ನೋದನ್ನು ಟ್ರ್ಯಾಕ್ ಮಾಡಿದ್ದರು. ಕಂಟ್ರೋಲ್ ರೂಮಿಗೆ ರೈಲು ನಿಲ್ಲಿಸುವಂತೆ ಹೇಳಿಯಾಗಿತ್ತು. ಅಷ್ಟೇ ಅಲ್ಲ ಆಂಧ್ರ ಪ್ರದೇಶದ ಧರ್ಮಾವರಂ ಸ್ಟೇಷನ್‌ನಲ್ಲಿ ನಮ್ಮ ಟಿಟಿ ಚಾರ್ಚ್ ತೆಗೆದುಕೊಳ್ಳುತ್ತಾರೆ. ಆಗ ಟೈಮ್ ಅಪ್‌ಡೇಟ್ ಮಾಡುತ್ತೇವೆ ಅಂದ್ರು. ಹೇಳಿದಂತೆ ಮಾಡಿದರು. 

ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲೇ ಆಹಾರ ಆರ್ಡರ್‌ ಮಾಡಿ: ಐಆರ್‌ಸಿಟಿಸಿ ಹೊಸ ಸೇವೆ

5.45ಕ್ಕೆ ಟ್ರೈನ್ ಬರುವ ಸಾಧ್ಯತೆ ಇತ್ತು. 6.15 ಆದರೂ ಬರಲಿಲ್ಲ. ಯಲಹಂಕ ಸ್ಟೇಷನ್ ದಾಟಿತ್ತು. ಕೆ.ಆರ್.‌ಪುರಂಗೆ ಬರ್ತಾ ಇಲ್ಲ. ಈ ಮಧ್ಯೆ ಅಲ್ಲಿಯ ಸ್ಟೇಷನ್ ಮಾಸ್ಟರ್‌ಗೆ ಇರೋ ಮಾಹಿತಿ ಪ್ರಕಾರ ಟ್ರೈನ್ ನಿಲ್ಲೋಲ್ಲ ಎನ್ನುತ್ತಿದ್ದಾರೆ. ಅಯ್ಯೇ ದೇವರೇ. ನಿಜವಾಗಲೂ ಅದೊಂದು ರೀತಿಯ ಪ್ರಸವ ವೇದನೆಯ ಅನುಭವ. ಹೃದಯ ಬಡಿತ ಹೆಚ್ಚಾಗಿತ್ತು. ಅಷ್ಟು ದೊಡ್ಡ ಅಧಿಕಾರಿಯಿಂದ ರೈಲು ನಿಲ್ಲಿಸುವ ಭರವಸೆ ಸಿಕ್ಕರೂ, ಮತ್ತೇನೋ ಆತಂಕ. ಅಬ್ಬಾ, ಸದ್ಯ ಟ್ರೈನ್ ಬಂತು. ನಿಲ್ತು ಕೂಡ. ಹಿರಿಯರನ್ನು ಇಳಿಸಿಕೊಂಡೆವು. 

ನಮ್ಮ ಒಂದು ಮೆಸೇಜ್‌ಗೆ ಇಷ್ಟು ಚೆಂದದ ಪ್ರತಿಕ್ರಿಯೆ ತೋರಿದ ರೈಲ್ವೆ ಅಧಿಕಾರಿಗಳಿಗೆ ನಾವೆಲ್ಲರೂ ಚಿರಋಣಿಗಳು. ಇಂಥದ್ದೊಂದು ರೈಲ್ವೆ ವ್ಯವಸ್ಥೆ ನಮ್ಮದು ಎನ್ನುವ ಹೆಮ್ಮೆ ನಮಗೆ. 

ಪುಸ್ತಕ ತಲುಪಿಸಿದ್ದ ರೈಲ್ವೆ ಇಲಾಖೆ: 
ಇತ್ತೀಚೆಗೆ ನಮ್ಮ ಕೊಲೀಗ್ ಒಬ್ಬರು ರೈಲು ಇಳಿಯುವಾಗ ಸೀಟಲ್ಲಿಯೇ ಒಂದು ಬೃಹದಾಕಾರದ ಪುಸ್ತಕವೊಂದನ್ನು ಬಿಟ್ಟು ಬಂದಿದ್ದರು. ಅದು ಇವರಿಗೆ ತಲುಪೋ ತನಕ ಸಂಬಂಧಿಸಿದ ರೈಲಾಧಿಕಾರಿ ಫಾಲೋ ಅಪ್ ಮಾಡಿದ್ದಾರೆ. ಆಗಲೇ ಗೊತ್ತಾಗಿದ್ದು ನಮ್ಮ ಭಾರತೀಯ ರೈಲ್ವೆ ಎಷ್ಟು ಸೆನ್ಸಿಟಿವಿಟಿ ಬೆಳೆಯಿಸಿಕೊಂಡಿದೆ ಎಂದು. ಒಟ್ಟಿನಲ್ಲಿ ಭಾರತೀಯ ರೈಲು ದೇಶದ ಜೀವನಾಡಿ ಮಾತ್ರವಲ್ಲ, ಜನರ ಜೀವನಾಡಿಯೂ ಹೌದು ಎನ್ನುವುದು ಪ್ರೂವ್ ಆಗಿದೆ.

ರೈಲಿನಲ್ಲಿ ಹೋಗುವಾಗ ಸುಖಾಸುಮ್ಮನೆ ತಪ್ಪು ಮಾಡಿ, ದಂಡ ತುಂಬ್ಬೇಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌