
ನವದೆಹಲಿ(ಡಿ.29): ಕೋಲ್ಕತಾದ ಪ್ರತಿಷ್ಠಿತ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಗಣಿತ ಪ್ರಾಧ್ಯಾಪಕಿ ನೀನಾ ಗುಪ್ತ ಅವರಿಗೆ 2021ನೇ ಸಾಲಿನ ಪ್ರತಿಷ್ಠಿತ ರಾಮಾನುಜನ್ ಪ್ರಶಸ್ತಿ ಒಲಿದು ಬಂದಿದೆ. ರಾಮಾನುಜನ್ ಪ್ರಶಸ್ತಿಯನ್ನು ಅಭಿವೃದ್ಧಿಶೀಲ ದೇಶಗಳ ಯುವ (45 ವರ್ಷ ಒಳಗಿನ) ಗಣಿತಶಾಸ್ತ್ರಜ್ಞರಿಗೆ ಪ್ರತಿ ವರ್ಷ ನೀಡಲಾಗುತ್ತದೆ.
2ನೇ ಭಾರತೀಯ ಮಹಿಳೆ:
ಗಣಿತದ ಜಾರಿಕ್ಸಿ ಕ್ಯಾನ್ಸಲೇಶನ್ ಸಮಸ್ಯೆಗೆ ಪರಿಹಾರ ಸೂತ್ರ ಕಂಡುಹಿಡಿದ ಸಾಧನೆಗಾಗಿ ನೀನಾರಿಗೆ ರಾಮಾನುಜನ್ ಪ್ರಶಸ್ತಿ ಲಭಿಸಿದೆ. ನೀನಾ ಕಂಡುಹಿಡಿದ ಪರಿಹಾರ ಸೂತ್ರವು ರೇಖಾಗಣಿತ ಇತಿಹಾಸದಲ್ಲಿಯೇ ಕಂಡುಹಿಡಿದ ಅತ್ಯುತ್ತಮ ಸೂತ್ರಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ. 2006ರಲ್ಲಿ ಭಾರತದ ರಾಮ್‌ದೊರೈ ಸುಜಾತಾ ಅವರು ಪ್ರಶಸ್ತಿಗೆ ಭಾಜನರಾದ ಮೊದಲ ಮತ್ತು ವಿಶ್ವದ ಏಕೈಕ ಮಹಿಳೆ ಎಂಬ ಕೀರ್ತಿ ಪಡೆದಿದ್ದರು. ನಂತರ ಭಾರತೀಯರಾದ ಅಮಲೆಂದು ಕೃಷ್ಣ ಅವರಿಗೆ 2015ರಲ್ಲಿ ಮತ್ತು , 2018ರಲ್ಲಿ ರಿತಾಬ್ರತಾ ಮುಂಶು ಅವರಿಗೆ ರಾಮಾನುಜನ್ ಪ್ರಶಸ್ತಿ ಒಲಿದು ಬಂದಿತ್ತು. ಇದೀಗ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ವ್ಯಕ್ತಿ ಮತ್ತು ವಿಶ್ವದ ಮೂರನೇ ಮಹಿಳೆ ಎಂಬ ಹಿರಿಮೆಗೆ ನೀನಾ ಪಾತ್ರರಾಗಿದ್ದಾರೆ.
ಯಾರೂ ನೀನಾ ಗುಪ್ತ?
1984ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಿಸಿದ ಗುಪ್ತ ಕೋಲ್ಕತಾದ ಬೆತ್ಯೂನ್ ಕಾಲೇಜಿನಿಂದ 2006ರಲ್ಲಿ ಪದವಿ ಪಡೆದಿದ್ದಾರೆ. 2008ರಲ್ಲಿ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನೀನಾ ಗುಪ್ತ ಕೋಲ್ಕತಾದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಸಂಖ್ಯಾಶಾಸ್ತ್ರ ಮತ್ತು ಗಣಿತ ಘಟಕದ ಪ್ರಾಧ್ಯಾಪಕಿಯಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಬೀಜಗಣಿತ ಮತ್ತು ರೇಖಾಗಣಿತ ಅವರ ಪ್ರಾಥಮಿಕ ಆಸಕ್ತಿಯ ವಿಷಯಗಳು. ಗುಪ್ತ ಅವರಿಗೆ 2019ರಲ್ಲಿ ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ ಲಭಿಸಿದೆ. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೊಡಲ್ಪಡುವ ಅತ್ಯುನ್ನತ ಪ್ರಶಸ್ತಿ ಇದಾಗಿದೆ. 2014ರಲ್ಲಿ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಯುವ ವಿಜ್ಞಾನಿ ಪ್ರಶಸ್ತಿ ಸೇರಿ ಇನ್ನೂ ಅನೇಕ ಪ್ರಶಸ್ತಿ ಪಡೆದಿದ್ದಾರೆ.
ಏನಿದು ರಾಮಾನುಜನ್ ಪ್ರಶಸ್ತಿ?
ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಅವರ ಸ್ಮರಣಾರ್ಥ 2005ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಇಟಲಿಯ ಸೈದ್ಧಾಂತಿಕ ಭೌತಶಾಸ್ತ್ರದ ಅಂತಾರಾಷ್ಟ್ರೀಯ ಕೇಂದ್ರ ಈ ಪ್ರಶಸ್ತಿ ನೀಡುತ್ತದೆ. ಬ್ರೆಜಿಲಿಯನ್ ಗಣಿತಜ್ಞ ಮಾರ್ಸೆಲ್ಲೋ ವಿಯಾನಾ ಅವರು ಮೊಟ್ಟಮೊದಲ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಶಸ್ತಿಯು 15,000 ಡಾಲರ್ ನಗದನ್ನು ಒಳಗೊಂಡಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ