
ಟೆಹ್ರಾನ್ (ಮೇ.29) : ಭಾರತದಿಂದ ಇರಾನ್‌ಗೆ ತೆರಳಿಯದ ಮೂವರು ನಾಪತ್ತೆಯಾಗಿರುವ ಘಟನೆ ಆತಂಕ ಹೆಚ್ಚಿಸಿದೆ. ಇರಾನ್‌ಗ ತರಳಿದ ಬೆನ್ನಲ್ಲೇ ಯುವಕರು ನಾಪತ್ತೆಯಾಗಿದ್ದಾರೆ. ಕುಟುಂಬದ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ ವ್ಯಾಟ್ಸಾಪ್ ಮೂಲಕ ಕೆಲ ಫೋಟೋಗಳನ್ನು, ವಿಡಿಯೋಗಳನ್ನು ಕಟುಂಬಸ್ಥರಿಗೆ ಕಳುಹಿಸಲಾಗಿದೆ. ಇದು ಆತಂಕ ಮತ್ತಷ್ಟು ಹೆಚ್ಟಿಸಿದೆ. ಇತ್ತ ಇರಾನ್‌ಗೆ ಪ್ರಯಾಣಿಸಿದ ಮೂವರು ಭಾರತೀಯರು ಕಾಣೆಯಾಗಿದ್ದಾರೆ ಎಂದು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಅವರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಪಂಜಾಬ್‌ನ ಸಂಗ್ರೂರ್, ನವಾನ್‌ಶಹರ್ ಮತ್ತು ಹೋಶಿಯಾರ್‌ಪುರ ಜಿಲ್ಲೆಗಳ ಮೂವರು ಯುವಕರನ್ನು ಅಪಹರಿಸಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಂಗ್ರೂರ್‌ನ ಹುಶನ್‌ಪ್ರೀತ್ ಸಿಂಗ್, ಎಸ್‌ಬಿಎಸ್ ನಗರದ ಜಸ್ಪಾಲ್ ಸಿಂಗ್ ಮತ್ತು ಹೋಶಿಯಾರ್‌ಪುರದ ಅಮೃತ್‌ಪಾಲ್ ಸಿಂಗ್ ಕಾಣೆಯಾದವರು. ಮೇ 1 ರಂದು ಟೆಹ್ರಾನ್‌ಗೆ ಬಂದಿಳಿದ ನಂತರ ಅವರು ಕಾಣೆಯಾಗಿದ್ದಾರೆ. ದೆಹಲಿಯಿಂದ ದುಬೈ-ಇರಾನ್ ಮಾರ್ಗವಾಗಿ ಆಸ್ಟ್ರೇಲಿಯಾಕ್ಕೆ ಕೆಲಸಕ್ಕೆ ಹೋಗಬೇಕಿತ್ತು. ಪಂಜಾಬ್‌ನ ಒಬ್ಬ ಏಜೆಂಟ್ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದ. ಇರಾನ್‌ನಲ್ಲಿ ಅವರಿಗೆ ತಾತ್ಕಾಲಿಕ ವಸತಿಯನ್ನೂ ಭರವಸೆ ನೀಡಲಾಗಿತ್ತು. ಆದರೆ ಇರಾನ್‌ಗೆ ಬಂದಿಳಿದ ನಂತರ ಅವರು ಕಾಣೆಯಾಗಿದ್ದಾರೆ.
ಯುವಕರನ್ನು ಅಪಹರಿಸಲಾಗಿದೆ.ಇದೀಗ ಬಿಡುಗಡೆಗೆ ಒಂದು ಕೋಟಿ ರೂಪಾಯಿ ಕೇಳುತ್ತಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಹಳದಿ ಹಗ್ಗದಿಂದ ಕಟ್ಟಿಹಾಕಿರುವ ವೀಡಿಯೊ ಮತ್ತು ಚಿತ್ರಗಳನ್ನು ಕಳುಹಿಸಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಯುವಕರ ಕೈಯಿಂದ ರಕ್ತ ಸೋರುತ್ತಿರುವುದು ಕಾಣುತ್ತಿದೆ ಎಂದು ಕುಟುಂಬಸ್ಥರನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಅವರ ದೇಹದ ಮೇಲೆ ಗಾಯಗಳಿವೆ. ಹಣ ನೀಡದಿದ್ದರೆ ಯುವಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಕುಟುಂಬಸ್ಥರು ಹೇಳುತ್ತಾರೆ. ಯುವಕರು ತಮ್ಮ ಕುಟುಂಬಸ್ಥರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು. ಆದರೆ ಮೇ 11 ರಿಂದ ಯುವಕರು ಕುಟುಂಬದೊಂದಿಗೆ ಸಂಪರ್ಕದಲ್ಲಿಲ್ಲ.
ಹೋಶಿಯಾರ್‌ಪುರದಿಂದ ವಿದೇಶಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದ ಏಜೆಂಟ್ ಕೂಡ ನಾಪತ್ತೆಯಾಗಿದ್ದಾನೆ. ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಮೂವರು ಯುವಕರು ಕಾಣೆಯಾಗಿದ್ದಾರೆ ಎಂಬ ಮಾಹಿತಿಯನ್ನು ಅವರ ಕುಟುಂಬಸ್ಥರು ಭಾರತೀಯ ರಾಯಭಾರ ಕಚೇರಿಗೆ ತಿಳಿಸಿದ್ದಾರೆ ಮತ್ತು ಇರಾನ್ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಕಾಣೆಯಾದ ಭಾರತೀಯರನ್ನು ತಕ್ಷಣವೇ ಪತ್ತೆಹಚ್ಚಲಾಗುವುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ