
ಗುಜರಾತ್(ಏ.20): ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದು, ವಾರ್ಷಿಕ 8.5 ಲಕ್ಷ ಕೋಟಿ ರು. ಮೌಲ್ಯದ ಹಾಲು ಉತ್ಪಾದಿಸುತ್ತದೆ. ಇದು ಗೋಧಿ ಹಾಗೂ ಅಕ್ಕಿಯ ವಾರ್ಷಿಕ ವಹಿವಾಟಿಗಿಂತ ಹೆಚ್ಚು. ಕ್ಷೀರೋತ್ಪಾದನೆಯಿಂದ ಸಣ್ಣ ರೈತರು ಅತಿ ಹೆಚ್ಚು ಫಲ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದೇ ವೇಳೆ, ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳನ್ನೂ ತರಾಟೆಗೆ ತೆಗೆದುಕೊಂಡ ಅವರು, ‘ಹಿಂದಿನ ಸರ್ಕಾರಗಳಲ್ಲಿ ಫಲಾನುಭವಿಗಳಿಗೆ 1 ರುಪಾಯಿಯಲ್ಲಿ ಕೇವಲ 15 ಪೈಸೆ ಸಂದಾಯ ಆಗುತ್ತಿತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ಸಂಪೂರ್ಣ 100 ಪೈಸೆ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಂದಾಯ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ರೈತರ ಖಾತೆಗೆ ವಾರ್ಷಿಕ 6000 ರು. ನೀಡುತ್ತಿದ್ದೇವೆ’ ಎಂದು ತಿಳಿಸಿದರು.
ಮೋದಿಯನ್ನು ಅಂಬೇಡ್ಕರ್ ಗೆ ಹೋಲಿಸಿ ಸಂಕಷ್ಟಕ್ಕೆ ಸಿಲುಕಿದ ಇಳಯರಾಜ; ಪರ-ವಿರೋಧ ಚರ್ಚೆ
ಬನಾಸ್‌ಕಾಂಠಾದಲ್ಲಿ ನೂತನ ಡೇರಿ ಕಟ್ಟಡ ಹಾಗೂ ಆಲೂಗಡ್ಡೆ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಹೈನೋದ್ಯಮದಿಂದ ರೈತರು, ಗ್ರಾಮೀಣರು, ಮಹಿಳೆಯರಿಗೆ ಅನುಕೂಲವಾಗಿದೆ. ಭಾರತ ವಾರ್ಷಿಕ 8.5 ಲಕ್ಷ ಕೋಟಿ ರು. ಮೌಲ್ಯದ ಹಾಲು ಉತ್ಪಾದಿಸುತ್ತಿದ್ದು, ವಿಶ್ವದ ಅತಿದೊಡ್ಡ ಕ್ಷೀರೋತ್ಪಾದಕ ದೇಶವಾಗಿ ಹೊರಹೊಮ್ಮಿದೆ. ಗೋಧಿ ಹಾಗೂ ಅಕ್ಕಿಯ ವಾರ್ಷಿಕ ವಹಿವಾಟೇ 8.5 ಲಕ್ಷ ಕೋಟಿ ರು. ಇಲ್ಲ. ಹೀಗಾಗಿ ಹೈನೋದ್ಯಮ ಭಾರೀ ಅನುಕೂಲ ಸೃಷ್ಟಿಸಿದೆ’ ಎಂದರು.
ಇನ್ನು ಜಗತ್ತಿನಲ್ಲಿ ಸಾಂಪ್ರದಾಯಿಕ ಔಷಧ ಯುಗ ಶುರು: ಮೋದಿ
ಗುಜರಾತ್‌ನಲ್ಲಿ ಸ್ಥಾಪನೆ ಆಗಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರದಿಂದ (ಜಿಸಿಟಿಎಂ), ಜಾಗತಿಕ ಮಟ್ಟದಲ್ಲಿ ಸಾಂಪ್ರದಾಯಿಕ ಔಷಧದ ಯುಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತೇಘ್ ಬಹಾದ್ದೂರ್ 400ನೇ ಜನ್ಮದಿನ, ಏ.21ಕ್ಕೆ ಮೋದಿ ಕೆಂಪುಕೋಟೆ ಮೇಲೆ ಭಾಷಣ!
ರಾಜ್ಯದ ಜಾಮ್‌ನಗರದಲ್ಲಿ ಮಂಗಳವಾರ ಡಬ್ಲ್ಯುಎಚ್‌ಒ ಮುಖ್ಯಸ್ಥ ಡಾ ಟೆಡ್ರೋಸ್ ಘೆಬ್ರೇಯೇಸಸ್ ಹಾಗೂ ಮಾರಿಷಸ್ ಪ್ರಧಾನಿ ಪ್ರವಿಂದ ಜುಗನಾಥ್ ಅವರ ಜತೆಗೂಡಿ ಮೋದಿ ಅವರು ಜಾಗತಿಕ ಸಾಂಪ್ರದಾಯಕ ಔಷಧ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಪ್ರಧಾನಿ, ‘ಈ ಕೇಂದ್ರದಿಂದ ವಿಶ್ವದಲ್ಲಿ ಮುಂದಿನ 25 ವರ್ಷದ ಅವಧಿಯಲ್ಲಿ ಸಾಂಪ್ರದಾಯಿಕ ಔಷಧದ ಯುಗವೇ ಆರಂಭವಾಗಲಿದೆ. ಇದರಿಂದ ಆಯುರ್ವೇದ, ಯುನಾನಿಯಂಥ ಸಾಂಪ್ರದಾಯಿಕ ಔಷಧಗಳಿಗೆ ಜಾಗತಿಕ ಬೇಡಿಕೆ ಲಭಿಸುತ್ತದೆ ಹಾಗೂ ಇಂಥ ಔಷಧೀಯ ಪದ್ಧತಿಗೆ ಭಾರೀ ನೆರವು ನೀಡುತ್ತದೆ’ ಎಂದರು. ಇದೇ ವೇಳೆ, 2023ನೇ ಇಸವಿಯನ್ನು ‘ವಿಶ್ವ ಸಿರಿಧಾನ್ಯ ವರ್ಷ’ ಎಂದು ಘೋಷಿಸಿದ ವಿಶ್ವಸಂಸ್ಥೆಗೆ ಅವರು ಕೃತಜ್ಞತೆ ಸಲ್ಲಿಸಿದರು.
ನಿರುದ್ಯೋಗಕ್ಕೆ ಆತ್ಮನಿರ್ಭರತೆಯೇ ಮದ್ದು: ಮೋದಿ
ಈ ಹಂತದಲ್ಲಿ ಭಾರತವು ಜಡವಾಗಿರಲು ಸಾಧ್ಯವಿಲ್ಲ ಮತ್ತು ಅದು ಸ್ವಾವಲಂಬಿಯಾಗಬೇಕು, ಆತ್ಮನಿರ್ಭರವಾಗಬೇಕು. ಹಾಗಾಗಿ ಜನರು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಹನುಮ ಜಯಂತಿ ಹಿನ್ನೆಲೆಯಲ್ಲಿ ಗುಜರಾತ್‌ನ ಸೌರಾಷ್ಟ್ರದಲ್ಲಿ ನಿರ್ಮಾಣವಾದ 108 ಅಡಿ ಎತ್ತರದ ಹನುಮ ಮೂರ್ತಿಯನ್ನು ಆನ್‌ಲೈನ್ ಮೂಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಜನರು ಮುಂದಿನ 25 ವರ್ಷಗಳ ಕಾಲ ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿದರೆ ದೇಶವನ್ನು ನಿರುದ್ಯೋಗ ಸಮಸ್ಯೆ ಕಾಡುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ