ಪ್ರಚೋದನಕಾರಿ ಖಾತೆ ರದ್ದು ಮಾಡದ ಟ್ವೀಟರ್‌ಗೆ ಎಚ್ಚರಿಕೆ!

By Suvarna NewsFirst Published Feb 4, 2021, 11:43 AM IST
Highlights

ಪ್ರಚೋದನಕಾರಿ ಖಾತೆ ರದ್ದು ಮಾಡದ ಟ್ವೀಟರ್‌ಗೆ ಎಚ್ಚರಿಕೆ| ಆದೇಶ ಪಾಲಿಸದೇ ಇದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ

ನವದೆಹಲಿ(ಫೆ.04): ರೈತರ ಹತ್ಯಾಕಾಂಡದ ಹ್ಯಾಷ್‌ಟ್ಯಾಗ್‌ನಲ್ಲಿ ಆರಂಭಿಸಿರುವ ಖಾತೆಯೂ ಸೇರಿದಂತೆ ಹಲವು ಪ್ರಚೋದನಾಕಾರಿ ಖಾತೆಗಳನ್ನು ತನ್ನ ಸೂಚನೆಯ ಹೊರತಾಗಿಯೂ ರದ್ದುಪಡಿಸದ ಟ್ವೀಟರ್‌ಗೆ ಸರ್ಕಾರ ನೇರ ಎಚ್ಚರಿಕೆ ನೀಡಿದೆ. ಆದೇಶ ಪಾಲಿಸದೇ ಹೋದಲ್ಲಿ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಕೇಂದ್ರ ಸರ್ಕಾರ ಟ್ವೀಟರ್‌ಗೆ ಸೂಚಿಸಿದೆ.

ಇತ್ತೀಚಿನ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟರ್‌ನಲ್ಲಿ ಹಲವು ಹೊಸ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ ಕೆಲ ಖಾತೆಗಳಲ್ಲಿ ಮೋದಿ ಸರ್ಕಾರ ರೈತರ ಹತ್ಯಾಕಾಂಡಕ್ಕೆ ಸಂಚುರೂಪಿಸಿದೆ ಎಂಬೆಲ್ಲಾ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಇನ್ನು ಕೆಲವು ಖಾತೆಗಳಲ್ಲಿ ಪ್ರತಿಭಟನೆ ಕುರಿತು ಮತ್ತು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂಥ 250ಕ್ಕೂ ಹೆಚ್ಚು ಖಾತೆಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಇತ್ತೀಚೆಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಆದೇಶವನ್ನು ಟ್ವೀಟರ್‌ ಸಂಸ್ಥೆ ಪಾಲಿಸಿತ್ತಾದರೂ, ಕೆಲವೇ ಗಂಟೆಗಳ ಬಳಿಕ ಮತ್ತೆ ಖಾತೆಗಳನ್ನು ಚಾಲ್ತಿಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ನೋಟಿಸ್‌ ರವಾನಿಸಿರುವ ಸರ್ಕಾರ, ‘ಟ್ವೀಟರ್‌ ಮಧ್ಯವರ್ತಿಯ ರೀತಿಯಲ್ಲಿ ಕೆಲಸ ಮಾಡುವ ಸಂಸ್ಥೆ. ಸರ್ಕಾರ ಆದೇಶಗಳನ್ನು ಪಾಲಿಸುವುದು ಅದರ ಕರ್ತವ್ಯ. ಒಂದು ವೇಳೆ ಈ ಆದೇಶವನ್ನು ಪಾಲಿಸದೇ ಹೋದಲ್ಲಿ ಕಾನೂನು ಕ್ರಮ ಎದುರಿಸಬೇಕಾದೀತು’ ಎಂದು ಎಚ್ಚರಿಸಿದೆ. ಅಲ್ಲದೆ ತನ್ನ ವಾದಕ್ಕೆ ಸಮರ್ಥನೆಯಾಗಿ ಸುಪ್ರೀಂಕೋರ್ಟ್‌ನ ಕೆಲ ತೀರ್ಪನ್ನು ಸರ್ಕಾರ ಉದಾಹರಿಸಿದೆ.

click me!