ಆರೋಗ್ಯ ಕ್ಷೇತ್ರದಲ್ಲಿ ಭಾರತದ ಮುಂದಿನ ನಡೆ ಏನು?| ಕೊರೋನಾ ಎದುರಿಸಿದ ಭಾರತದ ಕ್ಷಮತೆ ಬಗ್ಗೆ ಇತರ ರಾಷ್ಟ್ರಗಳಿಗೆ ಮತ್ತಷ್ಟು ಭರವಸೆ| ಭವಿಷ್ಯದಲ್ಲಿ ಎಲ್ಲ ಬಗೆಯ ಆರೋಗ್ಯ ಸಮಸ್ಯೆ ಎದುರಿಸಲು ಮೋದಿ ಪ್ಲಾನ್
ನವದೆಹಲಿ(ಫೆ.23): ಪಿಎಂ ಮೋದಿ ಮಂಗಳವಾರದಂದು ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸುವ ಕುರಿತಾಗಿ ಆಯೋಜಿಸಲಾಗಿದ್ದ ವೆಬಿನಾರ್ ಒಂದರಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಈ ವರ್ಷದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅನುದಾನ ಅಭೂತಪೂರ್ಣವಾಗಿದೆ. ಇದು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಇದು ಉತ್ತಮ ಆರೋಗ್ಯ ಸೇವೆ ಒದಗಿಸುವ ನಮ್ಮ ಬದ್ಧತೆಯ ಸಂಕೇತವಾಗಿದೆ ಎಂದು ಪಿಎಂ ಮೋದಿ ತಿಳಿಸಿದ್ದಾರೆ.
ಭಾರತವನ್ನು ಆರೋಗ್ಯವಾಗಿಡಲು 4 ಕ್ಷೇತ್ರಗಳಲ್ಲಿ ಕೆಲಸ
ಈ ಸಂವಾದವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಭಾರತವನ್ನು ಆರೋಗ್ಯಯುತವಾಗಿಡಲು ನಾಲ್ಕು ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ಕೆಲಸ ಮಾಡುವುದಾಗಿ ಈ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
*ರೋಗಗಳನ್ನು ತಡೆಗಟ್ಟುವಿಕೆ, ಅಂದರೆ ರೋಗದಿಂದ ರಕ್ಷಿಸಿಕೊಳ್ಳುವುದು.
*ಕಡು ಬಡವರಿಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವುದು. ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪ್ರಧಾನ್ ಮಂತ್ರಿ ಜನೌಷಧಿಯಂತಹ ಯೋಜನೆಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
*ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಕಾರ್ಯಕರ್ತರ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಿಸುವುದು.
*ಸಮಸ್ಯೆಗಳನ್ನು ನಿವಾರಿಸಲು ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವುದು. ಈ ನಿಟ್ಟಿನಲ್ಲಿ ಮಿಷನ್ ಇಂದ್ರಧಸುಷ್‌ನ್ನು ದೇಶದ ಬುಡಕಟ್ಟು ಮತ್ತು ದೂರದ ಪ್ರದೇಶಗಳಿಗೆ ವಿಸ್ತರಿಸುವುದು.
ಕೊರೋನಾ ಕಲಿಸಿದ ಪಾಠದ ಬಗ್ಗೆ ಮೋದಿ ಉಲ್ಲೇಖ
ಇದೇ ಸಂದರ್ಭದಲ್ಲಿ ಕೊರೋನಾ ಕಲಿಸಿದ ಪಾಠದ ಬಗ್ಗೆಯೂ ಉಲ್ಲೇಖಿಸಿದ ಪಿಎಂ ಮೋದಿ 'ನಾವು ಕೇವಲ ಇಂದು ಮಾತ್ರ ಈ ಮಹಾಮಾರಿ ವಿರುದ್ಧ ಹೋರಾಡುವುದಲ್ಲ, ಬದಲಾಗಿ ಭವಿಷ್ಯದಲ್ಲಿ ಇದೇ ರೀತಿ ದಾಳಿ ಇಡುವ ವೈರಸ್‌ಗಳ ವಿರುದ್ಧ ಹೋರಾಡಲು ದೇಶ ಸಜ್ಜಾಗಿರಬೇಕೆಂಬ ಪಾಠ ಕಲಿಸಿದೆ. ಹೀಗಾಗಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳನ್ನು ಮತ್ತಷ್ಟು ಬಲಶಾಲಿಯಾಗಿಸಬೇಕು' ಎಂದಿದ್ದಾರೆ.
ಕೊರೋನಾ ಕಾಲದಲ್ಲಿ ಭಾರತ ಆರೋಗ್ಯ ಕ್ಷೇತ್ರದಲ್ಲಿ ತೋರಿದ ಬಲ ಮತ್ತು ದೇಶ ತೋರಿಸಿದ ಅನುಭವ ಹಾಗೂ ಶಕ್ತಿ ಪ್ರದರ್ಶನವನ್ನು ಇತರ ದೇಶಗಳು ಬಹಳ ಸೂಕ್ಷ್ಮವಾಗಿ ಗಮನಿಸಿವೆ. ಇಂದು ಇಡೀ ವಿಶ್ವವೇ ಭಾರತದ ಆರೋಗ್ಯ ಕ್ಷೇತ್ರದ ಘನತೆ ಹಾಗೂ ಭಾರತದ ಆರೋಗ್ಯ ಕ್ಷೇತ್ರದ ಮೇಲಿರುವ ವಿಶ್ವಾಸ ಮತ್ತೊಂದು ಹಂತ ತಲುಪಿದೆ ಎಂದೂ ಮೋದಿ ಹೇಳಿದ್ದಾರೆ.