2-4 ತಿಂಗಳಲ್ಲಿ ಕೊರೋನಾ 3ನೇ ಅಲೆ ಸಾಧ್ಯತೆ: ತಜ್ಞರು

By Suvarna NewsFirst Published Jun 19, 2021, 8:18 AM IST
Highlights

* 2-4 ತಿಂಗಳಲ್ಲಿ ಕೊರೋನಾ 3ನೇ ಅಲೆ ಸಾಧ್ಯತೆ: ತಜ್ಞರು

* 40 ತಜ್ಞರ ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯ

* 2ನೇ ಅಲೆಗಿಂತ ಉತ್ತಮ ರೀತಿಯಲ್ಲಿ ನಿರ್ವಹಣೆ

ನವದೆಹಲಿ(ಜೂ.19): ಭಾರತದಲ್ಲಿ ಇನ್ನು ಎರಡರಿಂದ ನಾಲ್ಕು ತಿಂಗಳ ಅವಧಿಯೊಳಗೆ ಕೊರೋನಾ 3ನೇ ಅಲೆ ಕಾಣಿಸಿಕೊಳ್ಳಬಹುದು ಆರೋಗ್ಯ ಕ್ಷೇತ್ರದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಮೊದಲ 2 ಅಲೆಗೆ ಹೋಲಿಸಿದರೆ ಭಾರತವು 3ನೇ ಅಲೆಯನ್ನು ಹೆಚ್ಚು ಉತ್ತಮ ರೀತಿಯಲ್ಲಿ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ರಾಯಿಟರ್ಸ್‌ ಸುದ್ದಿ ಸಂಸ್ಥೆ ಆನ್‌ಲೈನ್‌ ಮೂಲಕ 40 ಜನ ಆರೋಗ್ಯ ಕ್ಷೇತ್ರದ ತಜ್ಞರು, ವೈದ್ಯರು, ವಿಜ್ಞಾನಿಗಳು, ಸೂಕ್ಷಾ ್ಮಣುಜೀವಿ ಮತ್ತು ಸಾಂಕ್ರಾಮಿಕ ರೋಗ ತಜ್ಞರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಈ ವೇಳೆ 3 ತಜ್ಞರು ಆಗಸ್ಟ್‌ ವೇಳೆಗೆ ಎಂದು ಹೇಳಿದರೆ, 21 ತಜ್ಞರು ಅಕ್ಟೋಬರ್‌ ವೇಳೆಗೆ ಎಂದಿದ್ದಾರೆ. 12 ಜನರು ಸೆಪ್ಟೆಂಬರ್‌ ವೇಳೆಗೆ ಎಂದು ಹಾಗೂ 4 ಜನರು 2020ರ ನವೆಂಬರ್‌ನಿಂದ 2021ರ ಫೆಬ್ರುವರಿ ವೇಳೆಗೆ 3ನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಅಂದರೆ ಬಹುಮತದಷ್ಟುತಜ್ಞರು ಅಕ್ಟೋಬರ್‌ ವೇಳೆಗೆ 3ನೇ ಅಲೆ ಏಳಲಿದೆ ಎಂದಿದ್ದಾರಾದರೂ, ಒಟ್ಟಾರೆಯಾಗಿ 2ರಿಂದ 4 ತಿಂಗಳ ಅವಧಿಯಲ್ಲಿ 3ನೇ ಅಲೆ ನಿಶ್ಚಿತ ಎಂಬ ಅಭಿಪ್ರಾಯವು ಇವರ ಹೇಳಿಕೆಯಿಂದ ವ್ಯಕ್ತವಾಗಿದೆ.

ಈ ಸಲ ಉತ್ತಮ ನಿರ್ವಹಣೆ:

ಇನ್ನು ನಿರ್ವಹಣೆ ಕುರಿತ ವಿಷಯದಲ್ಲಿ 24 ತಜ್ಞರು, ‘ಭಾರತ 3ನೇ ಅಲೆಯನ್ನು ಮೊದಲ 2 ಅಲೆಗಿಂತ ಹೆಚ್ಚು ಉತ್ತಮವಾಗಿ ನಿರ್ವಹಿಸಲಿದೆ. ಮೊದಲ 2 ಅಲೆ ವೇಳೆ ಲಸಿಕೆ, ಆಕ್ಸಿಜನ್‌, ಔಷಧ, ಆಸ್ಪತ್ರೆ ಬೆಡ್‌ ಕೊರತೆಯಿಂದಾಗಿ ನಿರ್ವಹಣೆ ಸಮಸ್ಯೆ ಆಗಿತ್ತು. ಆದರೆ 3ನೇ ಅಲೆಯ ಹೊತ್ತಿಗೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಜೊತೆಗೆ ಜನರಲ್ಲಿ ಸಹಜವಾಗಿ ಬಂದಿರುವ ರೋಗ ನಿರೋಧಕ ಶಕ್ತಿ, ಲಸಿಕೆ ನೀಡಿಕೆ ಹೆಚ್ಚಾಗಿರುವುದು ಕೂಡಾ 3ನೇ ಅಲೆ ನಿರ್ವಹಣೆಗೆ ನೆರವಾಗಲಿದೆ’ ಎಂದು ಹೇಳಿದ್ದಾರೆ.

ಮಕ್ಕಳ ಬಗ್ಗೆ ಭಿನ್ನಾಭಿಪ್ರಾಯ:

ಆದರೆ ಮಕ್ಕಳ ಮೇಲೆ 3ನೇ ಅಲೆ ವಿಷಯದಲ್ಲಿ ತಜ್ಞರಲ್ಲೇ ಸ್ಪಷ್ಟವಾಗಿ ಭಿನ್ನಾಭಿಪ್ರಾಯ ಇರುವುದನ್ನು ಸಮೀಕ್ಷೆ ಒತ್ತಿ ಹೇಳಿದೆ. 40 ತಜ್ಞರ ಪೈಕಿ 26 ಜನರು 3ನೇ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಹೊಂದಿರಲಿದೆ ಎಂದಿದ್ದರೆ, ಉಳಿದ 14 ತಜ್ಞರು ಇದಕ್ಕೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ 30 ತಜ್ಞರು, ‘ಕೊರೋನಾ ಸಾಂಕ್ರಾಮಿಕವು ಇನ್ನೂ ಒಂದು ವರ್ಷ ಕಾಲ ದೇಶದಲ್ಲಿ ಸಾರ್ವಜನಿಕ ಆರೋಗ್ಯದ ಮೇಲೆ ಅಪಾಯ ಹೊಂದಿರಲಿದೆ’ ಎಂದು ಹೇಳಿದ್ದಾರೆ.

ತಜ್ಞರು ಹೇಳಿದ್ದೇನು?

- 3 ತಜ್ಞರು ಆಗಸ್ಟ್‌ಗೆ, 12 ತಜ್ಞರು ಸೆಪ್ಟೆಂಬರ್‌ಗೆ, 21 ತಜ್ಞರು ಅಕ್ಟೋಬರ್‌ಗೆ 3ನೇ ಅಲೆ ಬರುತ್ತದೆ ಎಂದಿದ್ದಾರೆ

- ಮೊದಲೆರಡು ಅಲೆಗಿಂತ ಈಗ ಭಾರತದಲ್ಲಿ ಮೂಲಸೌಕರ‍್ಯ ಹೆಚ್ಚಿದೆ, ಹೀಗಾಗಿ 3ನೇ ಅಲೆ ಹೆಚ್ಚು ಮಾರಕವಲ್ಲ

- 26 ತಜ್ಞರು 3ನೇ ಅಲೆ ಮಕ್ಕಳಿಗೆ ಮಾರಕ ಎಂದಿದ್ದರೆ, 14 ಜನರು ಮಕ್ಕಳಿಗೆ ಮಾರಕವಲ್ಲ ಎಂದಿದ್ದಾರೆ

- ದೇಶದಲ್ಲಿ ಇನ್ನೂ ಒಂದು ವರ್ಷ ಕೊರೋನಾ ಅಪಾಯ ಇರಲಿದೆ ಎಂದು 30 ತಜ್ಞರು ಎಚ್ಚರಿಕೆ ನೀಡಿದ್ದಾರೆ

click me!