ಒಡಿಶಾ(ಜೂ.28): ಭಾರತ ಕಳೆದೆರಡು ವರ್ಷದಿಂದ ಹೊಸ ಹೊಸ ಯುದ್ಧೋಪಕರಣ, ಶಸ್ತ್ರಾಸ್ತ್ರಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ( DRDO) ಅತ್ಯಾಧುನಿಕ ಮಿಸೈಲ್ ಅಭಿವೃದ್ಧಿ ಪಡಿಸಿ ಸೇನೆಗೆ ನೀಡಿದೆ. ಇದೀಗ DRDO ಅಭಿವೃದ್ಧಿ ಪಡಿಸಿದ ಬರೋಬ್ಬರಿ 2,000 ಕಿ.ಮೀ ಗುರಿ ಸಾಮರ್ಥ್ಯ ಅಗ್ನಿ ಪ್ರೈಮ್ ಅನ್ನೋ ಕ್ಷಿಪಣಿ ಪ್ರಯೋಗ ಯಶಸ್ವಿಯಾಗಿದೆ. ಈ ಮೂಲಕ ಭಾರತದ ಶಕ್ತಿ ಮತ್ತಷ್ಟು ವೃದ್ಧಿಸಿದೆ.
ಶತ್ರು ರಾಷ್ಟ್ರದಲ್ಲಿ ನಡುಕ: 2 ತಿಂಗಳಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ಕ್ಷಿಪಣಿ ಲಿಸ್ಟ್!
ಪರಮಾಣು ಸಾಮರ್ಥ್ಯ, ಹೊಸ ತಲೆಮಾರು, ಅತ್ಯಾಧುನಿಕ ಆಗ್ನಿ ಪ್ರೈಮ್ ಮಿಸೈಲ್ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ ಕರಾವಳಿ ಪ್ರದೇಶದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ಕಳೆದೊಂದು ವರ್ಷದಲ್ಲಿ DRDO ಬರೋಬ್ಬರಿ 13ಕ್ಕೂ ಹೆಚ್ಚು ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ಅಗ್ನಿ ಪ್ರೈಮ್ ಮಿಸೈಲ್ ಪರೀಕ್ಷೆಗಾಗಿ ಪೂರ್ವ ಕರಾವಳಿಯುದ್ದಕ್ಕೂ ಇರುವ ವಿವಿಧ ಟೆಲಿಮೆಟ್ರಿ ಮತ್ತು ರಾಡಾರ್ ಕೇಂದ್ರಗಳು ಕ್ಷಿಪಣಿಯನ್ನು ಪತ್ತೆ ಹಚ್ಚಿ ಮೇಲ್ವಿಚಾರಣೆ ಮಾಡಲಾಗಿತ್ತು. ಈ ಮಿಸೈಲ್ ಸುಧಾರಿತ ಕ್ಷಿಪಣಿಯಾಗಿದ್ದು, 1,000 ದಿಂದ 2,000 ಕಿ.ಮೀ ವ್ಯಾಪ್ತಿಯನ್ನು ನಿಖರವಾಗಿ ಹೊಡೆದುರಳಿಸುವ ಸಾಮರ್ಥ್ಯ ಹೊಂದಿದೆ ಎಂದು DRDO ಅಧಿಕಾರಿಗಳು ಹೇಳಿದ್ದಾರೆ.
ಸ್ವದೇಶಿ ನಿರ್ಮಿತ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಪರೀಕ್ಷೆ ಯಶಸ್ವಿ!.
ಒಡಿಶಾದ ಬಾಲಾಸೋರ್‌ನಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಈ ಮಿಸೈಲ್ ಪರೀಕ್ಷೆ ನಡೆಸಲಾಗಿದೆ. ಇತರ ಕ್ಷಿಪಣಿಗಳಿಗೆ ಹೋಲಿಸಿದರೆ, ತೂಕದಲ್ಲಿ ಹಗುರವಾಗಿದೆ. ಜೊತೆಗೆ ಹೊಸ ತಂತ್ರಜ್ಞಾನದ ಈ ಕ್ಷಿಪಣಿ ಇದೀಗ ಭಾರತೀಯ ಸೇನೆಯ ಬಲ ಮತ್ತಷ್ಟು ಹೆಚ್ಚಿಸಿದೆ.