ಅರುಣಾಚಲ ಭಾರತದ ಅವಿಭಾಜ್ಯ ಅಂಗ: ಚೀನಾಕ್ಕೆ ತಿರುಗೇಟು!

By Suvarna NewsFirst Published Oct 14, 2021, 8:44 AM IST
Highlights

* ವೆಂಕಯ್ಯ ಅರುಣಾಚಲ ಭೇಟಿಗೆ ಚೀನಾ ಆಕ್ಷೇಪ

* ಅಕ್ರಮವಾಗಿ ರಚಿಸಲಾದ ಅರುಣಾಚಲಕ್ಕೆ ಮಾನ್ಯತೆಯಿಲ್ಲ: ಚೀನಾ

* ಅರುಣಾಚಲ ಭಾರತದ ಅವಿಭಾಜ್ಯ ಅಂಗ: ಚೀನಾಕ್ಕೆ ತಿರುಗೇಟು

ಬೀಜಿಂಗ್‌(ಅ.14): ಭಾರತದ(India) ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶಕ್ಕೆ(Arunachal Pradesh) ಇತ್ತೀಚಿನ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಭೇಟಿಯನ್ನು ಚೀನಾ(China) ವಿರೋಧಿಸಿದೆ. ಅಲ್ಲದೆ ಅರುಣಾಚಲ ಪ್ರದೇಶವನ್ನು(Arunachal Pradesh) ಎಂದಿಗೂ ಭಾರತದ ಭಾಗ ಎಂದು ತಾನು ಗುರುತಿಸಿಲ್ಲ ಎಂದು ಕಿಡಿಕಾರಿದೆ. ಪೂರ್ವ ಲಡಾಖ್‌(Ladakh) ಗಡಿ ವಿಚಾರಕ್ಕೆ ಸಂಬಂಧಿಸಿ ಭಾರತ-ಚೀನಾ ದೇಶಗಳ ಸೇನಾಧಿಕಾರಿಗಳ ಜತೆಗಿನ ಮಾತುಕತೆ ಮುರಿದುಬಿದ್ದಿರುವ ಬೆನ್ನಲ್ಲೇ, ಚೀನಾದ ಈ ಹೇಳಿಕೆ ಹೊರಬಿದ್ದಿದೆ.

ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝುವಾ ಲಿಜಿಯಾನ್‌ ಅವರು, ‘ಭಾರತವು ಏಕಪಕ್ಷೀಯ ಮತ್ತು ಅಕ್ರಮವಾಗಿ ರಚನೆ ಮಾಡಿದ ಅರುಣಾಚಲಪ್ರದೇಶ ರಾಜ್ಯವನ್ನು ನಾವು ಎಂದಿಗೂ ಒಪ್ಪಿಲ್ಲ. ಹೀಗಾಗಿ ಈ ಭಾಗಕ್ಕೆ ಭಾರತ ನಾಯಕರ ಭೇಟಿಯನ್ನು ಆಕ್ಷೇಪಿಸುತ್ತೇವೆ’ ಎಂದಿದ್ದಾರೆ. ಆದರೆ ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ದೇಶದ ಇತರೆ ಪ್ರದೇಶಗಳಿಗೆ ಭೇಟಿ ನೀಡುವಂತೆ ಭಾರತದ ನಾಯಕರು ಈ ಭಾಗಕ್ಕೂ ಭೇಟಿ ನೀಡುತ್ತಾರೆ ಎಂದು ಭಾರತ ತಿರುಗೇಟು ನೀಡಿದೆ.

ಅ.9ರಂದು ಅರುಣಾಚಲಕ್ಕೆ ಭೇಟಿ ನೀಡಿದ್ದ ವೆಂಕಯ್ಯನಾಯ್ಡು ಅವರು, ವಿಶೇಷ ಅಧಿವೇಶನವನ್ನುದ್ದೇಶಿಸಿ ಹಲವು ದಶಕಗಳಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಈಶಾನ್ಯ ರಾಜ್ಯಗಳಲ್ಲಿ ತ್ವರಿತ ಅಭಿವೃದ್ಧಿಯಾಗುತ್ತಿರುವುದು ಕಂಡುಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

ಬಿಕ್ಕಟ್ಟಿನಲ್ಲೂ ಭಾರತ ಚೀನಾ ನಡುವೆ 7.5 ಲಕ್ಷ ಕೋಟಿ ವ್ಯಾಪಾರ

ಭಾರತ-ಚೀನಾ ದೇಶಗಳ ಮಧ್ಯೆ ಗಡಿ ವಿಚಾರಕ್ಕೆ ಸಂಬಂಧಿಸಿ ವೈಷಮ್ಯ ಮುಂದುವರಿದಿರುವ ನಡುವೆಯೇ, ಉಭಯ ದೇಶಗಳ ವ್ಯಾಪಾರ, ವಾಣಿಜ್ಯೋದ್ಯಮವು 7.5 ಲಕ್ಷ ಕೋಟಿ(100 ಬಿಲಿಯನ್‌ ಡಾಲರ್‌) ರು. ದಾಟುವುದರೊಂದಿಗೆ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ. ಕಳೆದ 9 ತಿಂಗಳ ಅವಧಿಯಲ್ಲಿ ಈಗಾಗಲೇ ಉಭಯ ದೇಶಗಳ ವ್ಯಾಪಾರವು 90 ಬಿಲಿಯನ್‌ ಡಾಲರ್‌ ತಲುಪಿದೆ. 2021ರ ಮೊದಲ 3 ತಿಂಗಳ ಅವಧಿಯಲ್ಲಿ ಚೀನಾದ ಆಮದು ಮತ್ತು ರಫ್ತು ಪ್ರಮಾಣವು ಶೇ.22.7ರಷ್ಟುಹಿಗ್ಗಿಸಿಕೊಳ್ಳುವುದರೊಂದಿಗೆ 4.38 ಟ್ರಿಲಿಯನ್‌ ಡಾಲರ್‌ ದಾಟಿದೆ. ಈ ಪೈಕಿ ಚೀನಾ ಶೇ.51.7ರಷ್ಟು ಪ್ರಮಾಣದ 68.46 ಬಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡಿದೆ.

click me!