ಕಠಿಣ ಕಾನೂನಿದ್ದರೂ ನಿಲ್ಲದ ಸ್ತ್ರೀ ದೌರ್ಜನ್ಯ; ಭಾರತ ಎಡವುತ್ತಿರುವುದು ಎಲ್ಲಿ?

By Kannadaprabha News  |  First Published Dec 9, 2019, 2:41 PM IST

ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂಥ ಅಪಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಡೆಯುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆಯುತ್ತಿರುವ ಭೀಕರ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು.


ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತ ಮಹಿಳಾ ಸುರಕ್ಷತೆ ವಿಷಯದಲ್ಲಿ ಮಾತ್ರ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ.

ಹೈದರಾಬಾದ್‌ ಮತ್ತು ಉನ್ನಾವೋನಲ್ಲಿ ನಡೆದ ಹೇಯ ಘಟನೆಗಳು ಸಮಸ್ತ ನಾಗರಿಕರನ್ನು ಆತಂಕಕ್ಕೆ ತಳ್ಳಿವೆ. ಭಾರತ ವಿಶ್ವಗುರುವಾಗುವುದಕ್ಕೂ ಮೊದಲು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕೆಂಬ ಒಕ್ಕೊರಲಿನ ಅಭಿಪ್ರಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಮಹಿಳಾ ದೌರ್ಜನ್ಯ, ಈವರೆಗೆ ಸರ್ಕಾರ ಕೈಗೊಂಡ ಕ್ರಮಗಳ ಮೇಲೆ ಬೆಳಕು ಚೆಲ್ಲಲಾಗಿದೆ.

Tap to resize

Latest Videos

ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಮಾಣದಲ್ಲಿ 1200% ಏರಿಕೆ!

2012ರ ದೆಹಲಿ ಗ್ಯಾಂಗ್‌ ರೇಪ್‌, 2019ರ ಹೈದರಾಬಾದ್‌ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ದೊಡ್ಡ ಮಟ್ಟದಲ್ಲಿದಲ್ಲಿ ಸುದ್ದಿಯಾಗುತ್ತಿವೆ. ಆದರೆ ಭಾರತದಲ್ಲಿ ನಿತ್ಯ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಹೆಚ್ಚಿನ ಬಾರಿ ಅವು ಸುದ್ದಿಯಾಗುವುದೇ ಇಲ್ಲ. 2011ರಲ್ಲಿ ಲೈಂಗಿಕ ದೌರ್ಜನ್ಯ, ಪತಿ ಅಥವಾ ಆತನ ಸಂಬಂಧಿಗಳ ಕಿರುಕುಳ, ಅಪಹರಣ, ಮಾರಾಟ ಸೇರಿದಂತೆ ಮಹಿಳೆಯರ ಮೇಲೆ ನಡೆದ ಅಪರಾಧ ಪ್ರಕರಣಗಳ ಸಂಖ್ಯೆ 2,61,0000 ಹೆಚ್ಚಿವೆ.

undefined

ದೇಶದ ಮಕ್ಕಳಲ್ಲಿ ಅಸುರಕ್ಷಿತ ಭಾವನೆ: ಆಘಾತದ ವರದಿ ಮಂಡನೆ!

ಇದಾದ 5 ವರ್ಷದ ನಂತರ ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಬಿಡುಗಡೆ ಮಾಡಿರುವ ಮಾಹಿತಿಯೂ ಬೆಚ್ಚಿಬೀಳಿಸುವಂತಿವೆ. 2017ರಲ್ಲಿ 33,600ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಅಂದರೆ ಪ್ರತಿ 15 ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಭಾರತದಲ್ಲಿ ಅತ್ಯಾಚಾರ ನಡೆಯುತ್ತಿದೆ. 1971ರಿಂದೀಚೆಗೆ ಭಾರತದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು 1200% ಏರಿಕೆಯಾಗಿವೆ.

2017 ರಲ್ಲಿ ದೇಶಾದ್ಯಂತ ವರದಿಯಾದ ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣ 3.59 ಲಕ್ಷ. 2019ರ ಜನವರಿ-ಜೂನ್‌ ಅವಧಿಯಲ್ಲಿ ದಾಖಲಾದ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 24,212. ದೇಶಾದ್ಯಂತ ತಿಂಗಳಿಗೆ ಸರಾಸರಿ 4000, ದಿನಕ್ಕೆ 130, ಪ್ರತಿ 5 ನಿಮಿಷಕ್ಕೊಮ್ಮೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸಂಭವಿಸುತ್ತಿವೆ. ಇನ್ನೊಂದು ಆತಂಕಕಾರಿ ಸಂಗತಿ ಎಂದರೆ 2017ರಲ್ಲಿ 33,000 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 30% ಸಂತ್ರಸ್ತರು ಅಪ್ರಾಪ್ತರು ಅಥವಾ 18 ವರ್ಷ ಒಳಗಿನವರು.

1 ಲಕ್ಷಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳ ವಿಚಾರಣೆ ಬಾಕಿ

ಮೊದಲೇ ಹೇಳಿದಂತೆ ಭಾರತದಲ್ಲಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಪ್ರಕರಣಗಳಿಗಿಂತ ಹಾಗೆಯೇ ಮುಚ್ಚಿ ಹೋಗುವ ಪ್ರಕರಣಗಳು ಹೆಚ್ಚು. ಅತ್ಯಾಚಾರ ಪ್ರಕರಣಗಳಲ್ಲಿ ದೋಷಾರೋಪ ಸಲ್ಲಿಸುವ ಸಂಖ್ಯೆಯಲ್ಲಿಯೂ ಭಾರೀ ಇಳಿಕೆಯಾಗಿದೆ.

2013 ರಲ್ಲಿ ಆರೋಪ ಕೇಳಿಬಂದ ಪ್ರಕರಣಗಳ ಪೈಕಿ ಶೇ.95.4ರಷ್ಟುಪ್ರರಕಣಗಳಲ್ಲಿ ದೋಷಾರೋಪ ಸಲ್ಲಿಕೆಯಾಗುತ್ತಿದ್ದರೆ, 2017ರಲ್ಲಿ ಆ ಪ್ರಮಾಣ ಶೇ.86.6ಕ್ಕೆ ಕುಸಿದಿದೆ. ಆದರೆ ಹೀಗೆ ಎಲ್ಲ ಅಡೆತಡೆಗಳನ್ನು ಮೀರಿ ದಾಖಲಾದ ಘೋರ ಅಪರಾಧಗಳ ತನಿಖೆಯೂ ಮಾತ್ರ ಆಮೆ ಗತಿಯಲ್ಲಿಯೇ ಸಾಗುತ್ತದೆ. ಉದಾಹರಣೆಗೆ 2017ರ ಅಂತ್ಯದ ವರಗೆ ಭಾರತದಲ್ಲಿ 1,28,000 ಅತ್ಯಾಚಾರ ಪ್ರಕರಣಗಳ ವಿಚಾರಣೆ ಬಾಕಿ ಇದೆ.

ಅತ್ಯಾಚಾರ ಆರೋಪಿಗಳಲ್ಲಿ ರಾಜಕಾರಣಿಗಳೇ ಹೆಚ್ಚು!

ಎನ್‌ಸಿಆರ್‌ಬಿ ವರದಿ ಪ್ರಕಾರ ಅತ್ಯಾಚಾರ ಪ್ರಕಣಗಳಲ್ಲಿ ಆರೋಪಿಗಳಾಗಿರುವವರಲ್ಲಿ ರಾಜಕಾರಣಿಗಳು, ಕಾನೂನು ರೂಪಕರು, ಸ್ವಘೋಷಿತ ದೇವಮಾನವರು, ಭದ್ರತಾ ಸಿಬ್ಬಂದಿಗಳೇ ಹೆಚ್ಚಿದ್ದಾರೆ ಎನ್ನುವುದು ಮತ್ತೊಂದು ಆತಂಕದ ವಿಚಾರ. ದೇಶದ ಸುಮಾರು 48 ಸಂಸದರು ಮತ್ತು ಶಾಸಕರ ಮೇಲೆ ಮಹಿಳಾ ದೌರ್ಜನ್ಯದ ಆರೋಪ ದಾಖಲಾಗಿದೆ.

32% ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ!

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಅತ್ಯಾಚಾರ ಸಂಬಂಧ ದಾಖಲಾದ ಪ್ರಕರಣಗಳ ಪೈಕಿ ಶೇ.32ರಷ್ಟುಪ್ರಕರಣಗಳಲ್ಲಿ ಮಾತ್ರವೇ ಶಿಕ್ಷೆ ಪ್ರಕಟವಾಗುತ್ತಿರುವುದು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಪ್ರಕಾರ, 2017ರಲ್ಲಿ ದೇಶಾದ್ಯಂತ ಒಟ್ಟಾರೆ 1,46,201 ಅತ್ಯಾಚಾರ ಕೇಸು ವಿಚಾರಣೆ ಹಂತದಲ್ಲಿದ್ದವು. ಈ ಪೈಕಿ ಕೇವಲ 5,822 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ.

ಅಂದರೆ ಶಿಕ್ಷೆಯ ಪ್ರಮಾಣ ಕೇವಲ ಶೇ.32ರಷ್ಟು. 2017ರಲ್ಲಿ ದೇಶಾದ್ಯಂತ ಕೋರ್ಟ್‌ಗಳಲ್ಲಿ ಒಟ್ಟಾರೆ 1,46,201 ಕೇಸುಗಳ ವಿಚಾರಣೆ ನಡೆಯುತ್ತಿತ್ತು. ಈ ಪೈಕಿ 18,333ಪ್ರಕರಣಗಳನ್ನು ಕೋರ್ಟ್‌ಗಳು ಇತ್ಯರ್ಥಪಡಿಸಿದ್ದವು. 2017ರಲ್ಲಿ ವಿಚಾರಣೆ ಮುಕ್ತಾಯಗೊಂಡ 18,099 ಕೇಸುಗಳ ಪೈಕಿ 5,822 ಕೇಸಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ. 1,14,453 ಕೇಸುಗಳಲ್ಲಿ ಆರೋಪಿಗಳು ನಿರ್ದೋಷಿಯಾಗಿ ಹೊರಹೊಮ್ಮಿದ್ದಾರೆ. 824 ಕೇಸುಗಳನ್ನು ಇತ್ಯರ್ಥಗೊಳಿಸಲಾಗಿದೆ.

ಭಾರತ ಮಹಿಳೆಯರಿಗೆ ಡೇಂಜರಸ್‌!

ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂಥ ಅಪಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಡೆಯುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆಯುತ್ತಿರುವ ಭೀಕರ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು. ಕಳೆದ ವರ್ಷ ಥಾಮ್ಸನ್‌ ರಾಯಿಟರ್ಸ್‌ ಫೌಂಡೇಷನ್‌ ಸಮೀಕ್ಷೆ ಆಷ್ಘಾನಿಸ್ತಾನ ಮತ್ತು ಸಿರಿಯಾಗಿಂತ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ತಿಳಿಸಿತ್ತು.

ಹಾಗೆಯೇ ಇನ್ನೊಂದು ವರದಿಯು ಒಬ್ಬೊಂಟಿ ಹೆಣ್ಣು ಮಕ್ಕಳ ಪ್ರವಾಸಕ್ಕೆ ಭಾರತ ವಿಶ್ವದಲ್ಲಿ 9ನೇ ಅಪಾಯಕಾರಿ ದೇಶ ಎಂದಿದೆ. ಇತ್ತೀಚೆಗೆ ಹೈದರಾಬಾದ ಮತ್ತು ಉನ್ನಾವೋ ಅತ್ಯಚಾರ ಪ್ರಕಗಣಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಬಳಿಕ, ಬ್ರಿಟನ್‌ ಮತ್ತು ಅಮೆರಿಕ ದೇಶಗಳು ಭಾರತಕ್ಕೆ ಬರುವ ತಮ್ಮ ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಅತಂಕ ವ್ಯಕ್ತಪಡಿಸಿವೆ.

ನಿರ್ಭಯಾ ಪ್ರಕರಣ ಬಳಿಕ ದೇಶದ ಕಾನೂನಿನಲ್ಲಿ ಅಲ್ಪ ಬದಲಾವಣೆ

2012ರಲ್ಲಿ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ದಿಲ್ಲಿಯ ‘ನಿರ್ಭಯಾ’ ಪ್ರಕರಣದ ಬಳಿಕ ತುರ್ತು ಸಹಾಯವಾಣಿ, ಸಿಸಿಟಿವಿ ಅಳವಡಿಕೆಯಂತಹ ಸುರಕ್ಷತಾ ಕ್ರಮಗಳಿಗೆ ಸರ್ಕಾರಗಳು ಮುಂದಾಗಿವೆ. ಜೊತೆಗೆ ಅತ್ಯಾಚಾರಿಗಳ ವಿರುದ್ಧದ ಕಠಿಣ ಕ್ರಮಕ್ಕೆ ಕೂನೂನು ತಿದ್ದುಪಡಿ ತರಲೂ ಈ ಪ್ರಕರಣ ಕಾರಣವಾಯಿತು. ಕ್ರಿಮಿನಲ್‌ ಲಾ ಆ್ಯಕ್ಟ್ -2018 ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯನ್ನು 7 ವರ್ಷದಿಂದ ಜೀವಾವಧಿ ಶಿಕ್ಷೆಗೆ ಏರಿಕೆ ಮಾಡಿದೆ.

12 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸಲೂ ಅವಕಾಶವಿದೆ. ಆದರೆ, ಬಹುತೇಕ ಪಾತಕಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ನಿರ್ಭಯ ನಿಧಿ ಅಡಿ ರಾಜ್ಯಗಳಿಗೆ ಮಹಿಳಾ ಸುರಕ್ಷತೆಗೆ ಕ್ರಮಗಳಿಗಾಗಿ ಕೇಂದ್ರ ನೆರವು ನೀಡಿದ್ದು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಗಾಗಿ ಪೋಸ್ಕೊ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ಕೋರ್ಟ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. 112 ಎಂಬ ಪ್ಯಾನ್‌ ಇಂಡಿಯಾ ಸಹಾಯವಾಣಿ ಆರಂಭಿಸಲಾಗಿದೆ. ಆದರೆ ಹಲವು ರಾಜ್ಯಗಳಲ್ಲಿ ಇದು ಕಾರ‍್ಯ ನಿರ್ವಹಿಸುತ್ತಿಲ್ಲ.

ಶೀಘ್ರ ವಿಚಾರಣೆಗೆ ವಿಶೇಷ ನ್ಯಾಯಾಲಯ

2012ರ ನಿರ್ಭಯಾ ಪ್ರಕರಣದ ನಂತರ, ಅತ್ಯಾಚಾರ ಪ್ರಕರಣಗಳನ್ನು ನಿರ್ವಹಿಸಲು ಮತ್ತು ನ್ಯಾಯ ವಿತರಣೆಯನ್ನು ವೇಗಗೊಳಿಸಲು ಶೀಘ್ರ ವಿಚಾರಣಾ ನ್ಯಾಯಲಯ (ಎಫ್‌ಟಿಸಿ)ಗಳ ಸ್ಥಾಪನೆಗೆ ಅನುಮೋದನೆ ದೊರೆಯಿತು. 2015-2020ರ ಒಳಗಾಗಿ ಕನಿಷ್ಠ 1,800 ಶೀಘ್ರ ವಿಚಾರಣಾ ನ್ಯಾಯಾಲಯಗಳ ನಿರ್ಮಾಣಕ್ಕೆ 2013ರಲ್ಲಿ ಸರ್ಕಾರವು ಪ್ರಸ್ತಾಪಿಸಿತ್ತು. ಈ ಪ್ರಕರಣ ನಡೆದ ಸುಮಾರು ಏಳು ವರ್ಷಗಳ ನಂತರ, ಈ ವರ್ಷದ ಜುಲೈನಲ್ಲಿ ನಿರ್ಭಯಾ ನಿಧಿಯೊಂದಿಗೆ 1,023 ಎಫ್‌ಟಿಸಿಗಳನ್ನು ಸ್ಥಾಪಿಸುವ ಹೊಸ ಯೋಜನೆಯನ್ನು ಕೇಂದ್ರ ಘೋಷಿಸಿತು. ಇವುಗಳು ಇನ್ನಷ್ಟೇ ಆರಂಭವಾಗಬೇಕಿದೆ.

ಬಳಕೆಯೇ ಆಗದ ನಿರ್ಭಯಾ ನಿಧಿ

ನಿರ್ಭಯಾ ಪ್ರಕರಣದ ಬಳಿಕ 2013ರಲ್ಲಿ ಕೇಂದ್ರ ಸರ್ಕಾರ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂದಪಟ್ಟಯೋಜನೆಗಳ ಅನುಷ್ಠಾನಕ್ಕೆ ನಿರ್ಭಯಾ ನಿಧಿ ಸ್ಥಾಪಿಸಿ 1813 ಕೋಟಿ ರು. ಮೀಸಲಿಟ್ಟಿತ್ತು. ಆದರೆ ಈ ಹಣದಲ್ಲಿ 91%ಗೂ ಹೆಚ್ಚು ಹಣ ಬಳಕೆಯೇ ಆಗಿಲ್ಲ. 2016-17ರಲ್ಲಿ, ವಿವಿಧ ಅಪರಾಧಗಳಿಗೆ ಬಲಿಯಾದವರಿಗೆ ವಿಶೇಷವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಅಥವಾ ಅವರ ಕುಟುಂಬಕ್ಕೆ ನೆರವಾಗಲೆಂದು ಈ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ 21 ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೂ ಕೂಡ ಒಬ್ಬ ಸಂತ್ರಸ್ತೆಗೂ ಪರಿಹಾರ ಧನ ನೀಡಿಲ್ಲ. ಅಧಿಕೃತ ಮಾಹಿತಿ ಪ್ರಕಾರ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿ 11 ರಾಜ್ಯಗಳು ನಿರ್ಭಯಾ ನಿಧಿಗೆ ಮೀಸಲಿಟ್ಟಹಣದಲ್ಲಿ ಒಂದು ರು.ವನ್ನೂ ಬಳಕೆ ಮಾಡಿಕೊಂಡಿಲ್ಲ.

ಸದ್ದು ಮಾಡಿದ ಪ್ರಮುಖ ಅತ್ಯಾಚಾರ ಪ್ರಕರಣಗಳು

*ನ. 1973: 26 ವರ್ಷದ ನರ್ಸ್‌ ಅರುಣ್‌ ಶಾನ್‌ಬಾಗ್‌ ಮೇಲೆ ಮುಂಬೈ ಆಸ್ಪತ್ರೆಯ ವಾರ್ಡ್‌ ಅಟೆಂಡೆಂಟ್‌ ಸೊಹಾನ್‌ಲಾಲ್‌ ವಾಲ್ಮೀಕಿ ಅತ್ಯಾಚಾರ ಎಸಗಿದ್ದ ಪ್ರಕರಣ ಇದು. ಈತ ಅತ್ಯಾಚಾರ ನಡೆಸಿ ಸರಪಳಿಯಿಂದ ಕುತ್ತು ಹಿಸುಕಿದ್ದ ಪರಿಣಾಮ ಮೆದುಳಿಗೆ ಆಮ್ಲಜನರಕದ ಸರಬರಾಜು ನಿಂತು ಹೋಗಿ ಅರುಣ್‌ ಶಾನ್‌ಬಾಗ್‌ ಕೋಮಾದಲ್ಲಿದ್ದರು. 40 ವರ್ಷ ನರಕ ಯಾತನೆ ಅನುಭವಿಸಿ 2015ರಲ್ಲಿ ಮೃತಪಟ್ಟರು. ಅಪರಾಧಿ 7 ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆ ಪಡೆದಿದ್ದಾನೆ.

*1990-ಹೆಟಲ್‌ ಪರೇಖ್‌ ಎಂಬ 14 ವರ್ಷದ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಅಪರಾಧಿ ಧನಂಜಯ್‌ಗೆ 2004ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯ್ತು. ಪ್ರಕರಣ ನಡೆದ 13 ವರ್ಷಕ್ಕೇ ಗಲ್ಲುಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಅದು.

*2012-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 23 ವರ್ಷ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಚಲಿಸುವ ಬಸ್ಸಿನಲ್ಲಿ ಸಾಮಾಹಿಕ ಅತ್ಯಾಚಾರ ಎಸಗಿ ಅಮಾನವೀಯವಾಗಿ ಹಿಂಸಿಸಲಾಗಿತ್ತು. ಪ್ರಕರಣ ಸಂಬಂಧ ಅಪ್ರಾಪ್ತ ಆರೋಪಿಯೂ ಸೇರಿ 6 ಜನರನ್ನು ಬಂಧಿಸಲಾಗಿತ್ತು. ಇದರಲ್ಲಿ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಲು ಸುಪ್ರೀಂಕೋರ್ಟ್‌ ಆದೇಶಿಸಿದೆ. ಒಬ್ಬ ಜೈಲಿನಲ್ಲಿಯೇ ಆತ್ಮಹತೆಗೆ ಶರಣಾಗಿದ್ದಾನೆ. ಅಪ್ರಾಪ್ತ ಅಪರಾಧಿಯನ್ನು 3 ವರ್ಷಗಳ ರಿಮ್ಯಾಂಡ್‌ ಹೋಮ್‌ನಲ್ಲಿಟ್ಟಿದ್ದು ಸದ್ಯ ಬಿಡುಗಡೆ ಮಾಡಲಾಗಿದೆ.

*2018-ಕಠುವಾದಲ್ಲಿ 8 ವರ್ಷದ ಮಗುವನ್ನು ದೇವಸ್ಥಾನದಲ್ಲಿರಿಸಿ ನಿರಂತರ ಅತ್ಯಾಚಾರ ನಡೆಸಿ ಕೊನೆಗೆ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಪೂಜಾರಿ ಮತ್ತು ಮೂವರು ಪೊಲೀಸರೂ ಸೇರಿದಂತೆ 6 ಜನರು ಈ ಹೇಯ ಕೃತ್ಯದಲ್ಲಿ ತೊಡಗಿದ್ದು, ಅದರಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

*2019- ಉತ್ತರ ಪ್ರದೇಶದ ಬಿಜೆಪಿಯ ಶಾಸಕ ಕುಲದೀಪ್‌ ಸಿಂಗ್‌ ಸೇಂಗಾರ್‌ 2017ರಲ್ಲಿ ಅತ್ಯಾಚಾರ ಮಾಡಿದ್ದಾರೆಂದು ಹುಡುಗಿಯೊಬ್ಬಳು ಆರೋಪಿಸಿದ್ದಳು. ಆಕೆ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಟ್ರಕ್‌ ಹರಿಸಿ ಕೊಲ್ಲುವ ಪ್ರಯತ್ನ ಕೂಡ ನಡೆದಿದ್ದು ಅದರಲ್ಲಿ ಸಂತ್ರಸ್ತೆ ಬದುಕುಳಿದಳು. ಆದರೆ ಕಾರಿನಲ್ಲಿದ್ದ ಸಂಬಂಧಿಕರಿಬ್ಬರು ಕೊಲೆಯಾದರು. ಆದರೆ ಸೇಂಗಾರ್‌ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

 

click me!