ದೆಹಲಿ ಸಿಎಂ ಕೇಜ್ರಿವಾಲ್‌ ಸೆರೆಗೆ ಆಕ್ಷೇಪಿಸಿದ ಅಮೆರಿಕಕ್ಕೆ ಭಾರತ ತರಾಟೆ

By Kannadaprabha NewsFirst Published Mar 28, 2024, 9:27 AM IST
Highlights

ಭಾರತದಲ್ಲಿನ ಕೆಲ ಕಾನೂನು ಪ್ರಕ್ರಿಯೆಗಳ ಬಗ್ಗೆ ಅಮೆರಿಕದ ವಿದೇಶಾಂಗ ಸಚಿವಾಲಯದ ಹೇಳಿಕೆ ಬಗ್ಗೆ ನಾವು ಬಲವಾದ ಆಕ್ಷೇಪಣೆ ವ್ಯಕ್ತಪಡಿಸುತ್ತೇವೆ: ವಿದೇಶಾಂಗ ಸಚಿವಾಲಯ 

ನವದೆಹಲಿ(ಮಾ.28):  ಮದ್ಯ ಲೈಸೆನ್ಸ್‌ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನದ ಕುರಿತು ಕ್ಯಾತೆ ತೆಗೆದಿದ್ದ ಅಮೆರಿಕಕ್ಕೆ, ನಮ್ಮ ಸಾರ್ವಭೌಮತೆ ಗೌರವಿಸಿ ಎಂದು ಭಾರತ ತಾಕೀತು ಮಾಡಿದೆ. ಅಲ್ಲದೆ ಎರಡು ಪ್ರಜಾಪ್ರಭುತ್ವ ದೇಶಗಳು ಒಂದನ್ನೊಂದು ಗೌರವಿಸದೇ ಹೋದಲ್ಲಿ ಅದು ಆರೋಗ್ಯಪೂರ್ಣವಲ್ಲದ ಹೊಸ ಸಂಪ್ರದಾಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಪರೋಕ್ಷ ಎಚ್ಚರಿಕೆಯನ್ನೂ ನೀಡಿದೆ.

ಕೇಜ್ರಿವಾಲ್ ಬಂಧನದ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರರು, ‘ಬೆಳವಣಿಗೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ನ್ಯಾಯಸಮ್ಮತ, ಪಾರದರ್ಶಕ ಮತ್ತು ಕಾಲಮಿತಿಯಲ್ಲಿನ ಕಾನೂನು ಪ್ರಕ್ರಿಯೆಯನ್ನು ನಾವು ಪ್ರೋತ್ಸಾಹಿಸುತ್ತೇವೆ’ ಎಂದು ಹೇಳಿದ್ದರು.

ಅರವಿಂದ್‌ ಕೇಜ್ರಿವಾಲ್‌ಗೆ ರಿಲೀಫ್‌ ನೀಡದ ದೆಹಲಿ ಹೈಕೋರ್ಟ್‌

ಈ ಹಿನ್ನೆಲೆಯಲ್ಲಿ ಬುಧವಾರ ನವದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡಿದ್ದ ವಿದೇಶಾಂಗ ಸಚಿವಾಲಯ, 40 ನಿಮಿಷ ಸಭೆ ನಡೆಸಿ ಇಂಥ ಹೇಳಿಕೆ ಬಗ್ಗೆ ತನ್ನ ತೀವ್ರ ಆಕ್ಷೇಪಣೆಯನ್ನು ಸಲ್ಲಿಸಿದೆ.
ಬಳಿಕ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ವಿದೇಶಾಂಗ ಸಚಿವಾಲಯ, ‘ಭಾರತದಲ್ಲಿನ ಕೆಲ ಕಾನೂನು ಪ್ರಕ್ರಿಯೆಗಳ ಬಗ್ಗೆ ಅಮೆರಿಕದ ವಿದೇಶಾಂಗ ಸಚಿವಾಲಯದ ಹೇಳಿಕೆ ಬಗ್ಗೆ ನಾವು ಬಲವಾದ ಆಕ್ಷೇಪಣೆ ವ್ಯಕ್ತಪಡಿಸುತ್ತೇವೆ. ರಾಜತಾಂತ್ರಿಕತೆಯಲ್ಲಿ, ದೇಶಗಳು ಇತರೆ ದೇಶಗಳ ಸಾರ್ವಭೌಮತೆ ಮತ್ತು ಆಂತರಿಕ ವಿಷಯಗಳನ್ನು ಗೌರವಿಸಬೇಕು. ಈ ಹೊಣೆಗಾರಿಕೆ ಪ್ರಜಾಪ್ರಭುತ್ವದ ಸಹ ದೇಶಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿರಬೇಕು. ಇಲ್ಲದೆ ಹೋದಲ್ಲಿ ಅದು ಆರೋಗ್ಯಪೂರ್ಣವಲ್ಲದ ಹೊಸ ಸಂಪ್ರದಾಯಕ್ಕೆ ನಾಂದಿಹಾಡಬಹುದು. ಭಾರತದ ನ್ಯಾಯ ವ್ಯವಸ್ಥೆಯು ಸ್ವತಂತ್ರ ನ್ಯಾಯಾಂಗದ ಪರಿಕಲ್ಪನೆಯಲ್ಲಿ ರೂಪಿತವಾಗಿದೆ. ಅದು ತನ್ನ ಗುರಿಯನ್ನು ಸಾಧಿಸುವ ಮತ್ತು ಕಾಲಮಿತಿಯಲ್ಲಿ ನ್ಯಾಯದಾನಕ್ಕೆ ಬದ್ಧವಾಗಿದೆ. ಹೀಗಾಗಿ ಇಂಥ ವಿಷಯದಲ್ಲಿ ಅನುಮಾನ ಬೇಕಿಲ್ಲದ ಸಂಗತಿ’ ಎಂದು ಅಮೆರಿಕಕ್ಕೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇದಕ್ಕೂ ಮುನ್ನ ಇದೇ ವಿಷಯದಲ್ಲಿ ಕ್ಯಾತೆ ಎತ್ತಿದ ಜರ್ಮನಿಗೂ ಭಾರತ ಇದೇ ರೀತಿಯ ಎಚ್ಚರಿಕೆ ನೀಡಿತ್ತು.

click me!