ದಾಖಲೆಯ 1.45 ಲಕ್ಷ ಮಂದಿಗೆ ಸೋಂಕು!

By Suvarna NewsFirst Published Apr 11, 2021, 11:03 AM IST
Highlights

ದಾಖಲೆಯ 1.45 ಲಕ್ಷ ಮಂದಿಗೆ ಸೋಂಕು| ಸಾರ್ವಕಾಲಿಕ ಗರಿಷ್ಠ ಸೋಂಕು| ಸಕ್ರಿಯ ಸೋಂಕಿತರ ಸಂಖ್ಯೆ 10.46 ಲಕ್ಷ| 794 ಮಂದಿಗೆ ಕೋವಿಡ್‌ಗೆ ಬಲಿ| ಅಕ್ಟೋಬರ್‌ ಬಳಿಕದ ಗರಿಷ್ಠ ಸಾವು

ನವದೆಹಲಿ(ಏ.11): ದೇಶದಲ್ಲಿ ಸತತ 5ನೇ ದಿನವೂ 1 ಲಕ್ಷಕ್ಕಿಂತ ಹೆಚ್ಚಿನ ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಶನಿವಾರ ಬೆಳಗ್ಗೆ 8ಕ್ಕೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1.45 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. ಜೊತೆಗೆ 794 ಜನರು ವೈರಸ್‌ಗೆ ಬಲಿಯಾಗಿದ್ದಾರೆ. ಒಂದೇ ದಿನದಲ್ಲಿ ಇಷ್ಟೊಂದು ಜನರಿಗೆ ಸೋಂಕು ತಗುಲಿದ ದಾಖಲೆ ಇದಾಗಿದ್ದರೆ, ಸಾವಿನ ಪ್ರಮಾಣವು ಕಳೆದ ವರ್ಷದ ಅಕ್ಟೋಬರ್‌ 18ರ ಬಳಿಕದ ಗರಿಷ್ಠವಾಗಿದೆ.

ಈ ಅಂಕಿ ಸಂಖ್ಯೆಗಳೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.32 ಕೋಟಿಗೆ ತಲುಪಿದ್ದು, ಸಾವಿನ ಪ್ರಮಾಣ 1.68 ಲಕ್ಷಕ್ಕೆ ಮುಟ್ಟಿದೆ. ಇನ್ನು ಸಕ್ರಿಯ ಸೋಂಕಿತರ ಪ್ರಮಾಣವು ಆರೂವರೆ ತಿಂಗಳ ಬಳಿಕ 10.46 ಲಕ್ಷಕ್ಕೆ ಏರಿದೆ. ಕಳೆದ ಫೆ.12ರಂದು ದೇಶದಲ್ಲಿ ಕನಿಷ್ಠ ಅಂದರೆ 1.35 ಲಕ್ಷ ಮಾತ್ರವೇ ಸಕ್ರಿಯ ಸೋಂಕಿತರಿದ್ದರು. ಅದು ಒಟ್ಟು ಕೇಸಿನಲ್ಲಿ ಶೇ.1.25ರಷ್ಟಾಗಿತ್ತು. ಆದರೆ ಇದೀಗ ಆ ಪ್ರಮಾಣವು ಆತಂಕಕಾರಿ ಶೇ.7.93ಕ್ಕೆ ತಲುಪಿದೆ. ಜೊತೆಗೆ ಗುಣಮುಖರಾಗುವವರ ಸಂಖ್ಯೆಯೂ ಶೇ.90.80ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ.

5 ರಾಜ್ಯಗಳಲ್ಲಿ ಶೇ.72 ಸಕ್ರಿಯ ಸೋಂಕಿತರು:

ದೇಶದಲ್ಲಿರುವ ಒಟ್ಟಾರೆ ಕೊರೋನಾ ಸಕ್ರಿಯ ಸೋಂಕಿತರ ಪೈಕಿ ಶೇ.72.23ರಷ್ಟುಮಂದಿ ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ ಉತ್ತರ ಪ್ರದೇಶ ಮತ್ತು ಕೇರಳದಲ್ಲೇ ಇದ್ದಾರೆ. ಅದರಲ್ಲೂ ಪುಣೆ, ಮುಂಬೈ, ಥಾಣೆ, ನಾಗ್ಪುರ, ಬೆಂಗಳೂರು ನಗರ, ನಾಸಿಕ್‌, ದೆಹಲಿ, ರಾಯ್ಪುರ, ದುರ್ಗ ಮತ್ತು ಔರಂಗಾಬಾದ್‌ ಜಿಲ್ಲೆಗಳಲ್ಲೇ ಶೇ.45.65ರಷ್ಟುಸಕ್ರಿಯ ಸೋಂಕಿತರಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

click me!