
ನವದೆಹಲಿ(ಮಾ.16): ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ತೀವ್ರತೆ ಹೆಚ್ಚುತ್ತಿದ್ದು, ಸೋಮವಾರ ಒಟ್ಟು 26,291 ಜನರಿಗೆ ವೈರಸ್ ಹರಡಿದೆ. ಇದು ಕಳೆದ 85 ದಿನಗಳಲ್ಲೇ ಏಕದಿನದ ಅತ್ಯಧಿಕ ಸೋಂಕಿನ ಪ್ರಮಾಣವಾಗಿದೆ. ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಹಾಗೂ ತಮಿಳುನಾಡು ಈ ಐದು ರಾಜ್ಯಗಳಲ್ಲಿ ದೇಶದ ಒಟ್ಟು ಹೊಸ ಕೊರೋನಾ ಪ್ರಕರಣಗಳ ಪೈಕಿ ಶೇ.78ರಷ್ಟುಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸೋಮವಾರ 118 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ. ಸತತ ಐದು ದಿನಗಳಿಂದ ದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿದ್ದು, ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 2.19 ಲಕ್ಷಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಗುಣಮುಖರಾಗುವ ದರ ಶೇ.96.68ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷದ ಡಿ.20ರಂದು ಕೊನೆಯ ಬಾರಿ ಇಷ್ಟುಪ್ರಮಾಣದಲ್ಲಿ ಕೊರೋನಾ ಸೋಂಕು ದಾಖಲಾಗಿತ್ತು.
ದೇಶದಲ್ಲಿ ಈ ವರೆಗೆ ಒಟ್ಟು 1.13 ಕೋಟಿ ಜನರಿಗೆ ಕೊರೋನಾ ತಗಲಿದೆ. ಅದರಿಂದ 1.1 ಕೋಟಿ ಜನರು ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇ.1.39ರಷ್ಟಿದೆ.
ಈ ಮಧ್ಯೆ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಸೋಂಕು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಸೋಮವಾರ ಪತ್ತೆಯಾದ ಒಟ್ಟು 26 ಸಾವಿರ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲೇ 16,620 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸದ್ಯ ಇರುವ ಸಕ್ರಿಯ ಕೊರೋನಾ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲೇ ಶೇ.58ರಷ್ಟುಪ್ರಕರಣಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ