ಮತ್ತೊಂದು ಪಂಚ್: ಚೀನಾದಿಂದ ಟೀವಿ ಆಮದಿಗೂ ಬ್ರೇಕ್..!

By Kannadaprabha NewsFirst Published Aug 1, 2020, 7:48 AM IST
Highlights

ಗಡಿ ತಂಟೆ ಮಾಡಿದ ಚೀನಾಗೆ ಭಾರತ ಮತ್ತೊಂದು ಪಂಚ್ ನೀಡಿದೆ. ಆರ್ಥಿಕವಾಗಿ ಮಣಿಸಲು ಭಾರತ ಮತ್ತೊಂದು ರಣತಂತ್ರ ಹೆಣೆದಿದೆ. ಇದು ಚೀನಿಯರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಬಹುದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಆ.01): ಚೀನಾದಿಂದ ಆಮದು ಮಾಡಿಕೊಳ್ಳುವ ಒಂದೊಂದೇ ಉತ್ಪನ್ನವನ್ನು ನಿಷೇಧಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಆ ದೇಶದಿಂದ ಟೀವಿ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ನಿರ್ಬಂಧ ವಿಧಿಸಿದೆ. ಈ ಕುರಿತು ವಿದೇಶ ವ್ಯಾಪಾರಗಳ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಗುರುವಾರ ಆದೇಶ ಹೊರಡಿಸಿದ್ದು, ಟೀವಿ ಸೆಟ್‌ಗಳ ಆಮದನ್ನು ‘ಮುಕ್ತ’ ವಿಭಾಗದಿಂದ ‘ನಿರ್ಬಂಧಿತ’ ವಿಭಾಗಕ್ಕೆ ಸೇರ್ಪಡೆ ಮಾಡಿದೆ. ಅಂದರೆ, ಇನ್ನು ಮುಂದೆ ಯಾವುದೇ ದೇಶದಿಂದ ಟೀವಿ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವುದಿದ್ದರೆ ಡೀಲರ್‌ಗಳು ಡಿಜಿಎಫ್‌ಟಿಯಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಇದು ಮೇಕ್‌ ಇನ್‌ ಇಂಡಿಯಾಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ ಎಂದು ಹೇಳಲಾಗಿದೆ.

ಡಿಜಿಎಫ್‌ಟಿ ಆದೇಶದ ಪ್ರಕಾರ 36 ಸೆಂ.ಮೀ. ಒಳಗಿನ ಸ್ಕ್ರೀನ್‌ ಅಳತೆಯ ಟೀವಿಯಿಂದ ಆರಂಭಿಸಿ 105 ಸೆಂ.ಮೀ.ಗಿಂತ ದೊಡ್ಡ ಅಳತೆಯ ಟೀವಿ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಂದರೆ, ಯಾವ ಅಳತೆಯ ಕಲರ್‌ ಟೀವಿ ಸೆಟ್‌ಗಳನ್ನೂ ಮುಕ್ತವಾಗಿ ಆಮದು ಮಾಡಿಕೊಳ್ಳುವಂತಿಲ್ಲ. ಜೊತೆಗೆ 63 ಸೆಂ.ಮೀ. ವರೆಗಿನ ಎಲ್‌ಸಿಡಿ ಟೀವಿ ಸೆಟ್‌ಗಳನ್ನು ಮುಕ್ತವಾಗಿ ಆಮದು ಮಾಡಿಕೊಳ್ಳುವಂತಿಲ್ಲ.

ರಫೇಲ್‌ನಿಂದ ಈಗ ಚೀನಾಕ್ಕೂ ತಲ್ಲಣ..!

ಭಾರತವು ಕಳೆದ ವರ್ಷ 6630 ಕೋಟಿ ರು.ನಷ್ಟು ಮೌಲ್ಯದ ಟೀವಿ ಸೆಟ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದೆ. ಅದರ ಪೈಕಿ ವಿಯೆಟ್ನಾಂನಿಂದ 3600 ಕೋಟಿ ರು. ಹಾಗೂ ಚೀನಾದಿಂದ 2500 ಕೋಟಿ ರು.ನಷ್ಟು ಮೌಲ್ಯದ ಟೀವಿ ಸೆಟ್‌ಗಳನ್ನು ಆಮದು ಮಾಡಿಕೊಂಡಿದೆ. ಹೀಗಾಗಿ, ಈಗ ಕೇಂದ್ರ ಸರ್ಕಾರ ವಿಧಿಸಿರುವ ನಿರ್ಬಂಧದಿಂದಾಗಿ ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾಕ್ಕೆ ಭಾರತದ ಟೀವಿ ಮಾರುಕಟ್ಟೆಯಿಂದಲೇ ವಾರ್ಷಿಕ 2500 ಕೋಟಿ ರು.ನಷ್ಟು ನಷ್ಟವಾಗುವ ಸಾಧ್ಯತೆಯಿದೆ.

ಚೀನಾದಿಂದ ಟೀವಿ ಆಮದಿಗೆ ನಿರ್ಬಂಧ ವಿಧಿಸಿರುವುದರಿಂದ ಭಾರತದ ಮಾರುಕಟ್ಟೆಯಲ್ಲಿ ಟೀವಿಗಳ ಬೆಲೆಯೇನೂ ಹೆಚ್ಚಾಗುವುದಿಲ್ಲ. ನಮ್ಮಲ್ಲಿ ಸ್ಥಳೀಯವಾಗಿಯೇ ಸಾಕಷ್ಟು ಟೀವಿ ಉತ್ಪಾದನೆ ಆಗುತ್ತದೆ. ಹೀಗಾಗಿ ಈ ನಿರ್ಧಾರದಿಂದ ಮೇಕ್‌ ಇನ್‌ ಇಂಡಿಯಾಕ್ಕೆ ಇನ್ನಷ್ಟು ಪ್ರೋತ್ಸಾಹ ದೊರೆಯಲಿದೆ ಎಂದು ಭಾರತೀಯ ಟೀವಿ ಉತ್ಪಾದಕರು ಹೇಳಿದ್ದಾರೆ.
 

click me!