
ನವದೆಹಲಿ(ಜೂ.14): ಕೊರೋನಾ 2ನೇ ಅಲೆ ವೇಳೆ ದೇಶಾದ್ಯಂತ ಕಾಣಿಸಿಕೊಂಡ ವೈದ್ಯಕೀಯ ಆಕ್ಸಿಜನ್ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಭವಿಷ್ಯದಲ್ಲಿ ಈ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ‘ಪ್ರಾಜೆಕ್ಟ್ ಒ2’ ಎಂಬ ಯೋಜನೆ ಆರಂಭಿಸಿದೆ.
ಈ ಯೋಜನೆ ಮೂಲಕ ಹಾಲಿ ಎದುರಾಗಿರುವ ವೈದ್ಯಕೀಯ ಆಕ್ಸಿಜನ್ ಕೊರತೆ ನೀಗಿಸುವ ಮತ್ತು ಭವಿಷ್ಯದಲ್ಲಿ ಇಂಥ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರರ ನೇರ ಉಸ್ತುವಾರಿಯಲ್ಲಿ ಇಡೀ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಯೋಜನೆಲ್ಲೇನಿದೆ?:
ಈ ಯೋಜನೆಯಡಿ ಇಡೀ ದೇಶಕ್ಕೆ ಅಗತ್ಯವಾದ ಆಕ್ಸಿಜನ್ ಪೂರೈಕೆಗೆ ಅಗತ್ಯವಾದ ವ್ಯವಸ್ಥೆ ರೂಪಿಸುವುದು, ಆಕ್ಸಿಜನ್ ಉತ್ಪಾದನೆಗೆ ಪ್ರಮುಖವಾಗಿ ಬೇಕಾದ ಜಿಯೋಲೈಟ್ ಮುಂತಾದ ಕಚ್ಚಾವಸ್ತುಗಳ ದಾಸ್ತಾನು, ಸಣ್ಣ ಸಣ್ಣ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸುವುದು, ಘಟಕಗಳಿಗೆ ಬೇಕಾದ ಕಂಪ್ರೆಸ್ಸರ್ ಉತ್ಪಾದನೆ, ವೆಂಟಿಲೇಟರ್ ಮತ್ತು ಕಾನ್ಸೇಂಟ್ರರ್‌ಗಳ ಉತ್ಪಾದನೆಯ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ಈ ಯೋಜನೆಯಲ್ಲಿ ಬಿಇಎಲ್, ಟಾಟಾ ಕನ್ಸಲ್ಟೆಂಗ್ ಎಂಜಿನಿಯರ್ಸ್, ಸಿ-ಕ್ಯಾಂಪ್, ಐಐಟಿ ಕಾನ್ಪುರ, ಐಐಟಿ ದೆಹಲಿ, ಐಐಟಿ ಬಾಂಬೆ, ಐಐಟಿ-ಹೈದ್ರಾಬಾದ್, ಭೋಪಾಲ್‌ನ ಐಐಎಸ್‌ಇಆರ್ ಮತ್ತು ಇತರೆ 40ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಯೋಜನೆ ಜಾರಿಗೆ ಅಗತ್ಯವಾದ ಹಣವನ್ನು ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕಾ ನಿಧಿ ಮತ್ತು ದೇಶಿ ಮತ್ತು ವಿದೇಶಿ ನೆರವುಗಳ ಮೂಲಕ ಹೊಂದಿಸಲು ನಿರ್ಧರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ