
ನವದೆಹಲಿ: ನ್ಯಾಯದಾನದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಇದೇ ವೇಳೆ ಮೊದಲ 5ರ ಪೈಕಿ 4 ಸ್ಥಾನಗಳನ್ನು ದಕ್ಷಿಣ ರಾಜ್ಯಗಳೇ ಪಡೆದಿವೆ. ಭಾರತ ನ್ಯಾಯ ವರದಿ 2022 (ಐಜೆಆರ್) ಮಂಗಳವಾರ ಬಿಡುಗಡೆ ಆಗಿದ್ದು, ಅದರಲ್ಲಿ ಈ ಅಂಶವಿದೆ. ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಜೈಲುಗಳ ಸ್ಥಿತಿಗತಿ ಹಾಗೂ ಕಕ್ಷಿದಾರರಿಗೆ ಕಾನೂನು ಸವಲತ್ತು- ಈ ಮಾನದಂಡಗಳನ್ನು ಇರಿಸಿಕೊಂಡು ವರದಿ ಸಿದ್ಧಪಡಿಸಲಾಗಿದೆ. 2019ರಲ್ಲಿ ಪ್ರಾರಂಭವಾದ ಟಾಟಾ ಟ್ರಸ್ಟ್‌ಗಳ ಉಪಕ್ರಮವಾದ ಐಜೆಆರ್ ಈ ವರದಿಯ ಕರ್ತೃವಾಗಿದೆ.
ತಲಾ 1 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು(Tamil Nadu), ತೆಲಂಗಾಣ (Telangana), ಗುಜರಾತ್ (Gujarat) ಮತ್ತು ಆಂಧ್ರಪ್ರದೇಶವು (Andhra Pradesh) ನಂತರದ ಸ್ಥಾನದಲ್ಲಿವೆ. ತಲಾ ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಏಳು ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಸಿಕ್ಕಿಂ ನೇತೃತ್ವ ವಹಿಸಿದ್ದರೆ, ಅರುಣಾಚಲ ಪ್ರದೇಶ ಮತ್ತು ತ್ರಿಪುರಾ ನಂತರದ ಸ್ಥಾನದಲ್ಲಿವೆ.
ಕರ್ನಾಟಕ ಏಕೆ ನಂ.1?:
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಹುದ್ದೆಗಳ ಕೋಟಾ ಗುರಿಯನ್ನು ಕರ್ನಾಟಕ ಮುಟ್ಟಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳ ನೇಮಕದಲ್ಲಿ ಕೋಟಾ ಮಾನದಂಡ ಪೂರೈಸಿದೆ. ಆದರೆ ನ್ಯಾಯಾಂಗದಲ್ಲಿ ಯಾವ ಮೂರು ಕೋಟಾಗಳನ್ನೂ ಸಂಪೂರ್ಣವಾಗಿ ಯಾವ ರಾಜ್ಯವೂ ಭರ್ತಿ ಮಾಡಿಲ್ಲ.
ಶೇ.1ಕ್ಕಿಂತ ಹೆಚ್ಚು ಖರ್ಚು ಮಾಡದ ರಾಜ್ಯಗಳು:
ದೆಹಲಿ ಮತ್ತು ಚಂಡೀಗಢವನ್ನು ಹೊರತುಪಡಿಸಿ, ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತವು ತನ್ನ ಒಟ್ಟು ವಾರ್ಷಿಕ ವೆಚ್ಚದ ಶೇಕಡಾ 1ಕ್ಕಿಂತ ಹಣವನ್ನು ಹೆಚ್ಚು ನ್ಯಾಯಾಂಗಕ್ಕೆ ಖರ್ಚು ಮಾಡುವುದಿಲ್ಲ. ಇದೇ ವೇಳೆ, ಅಲ್ಲಿನ ಹೈಕೋರ್ಟ್‌ಗಳಲ್ಲಿ ಶೇ.30ರಷ್ಟು ಜಡ್ಜ್ ಹುದ್ದೆಗಳು ಖಾಲಿ ಇವೆ ಎಂದು ವರದಿ ಹೇಳಿದೆ. ಡಿಸೆಂಬರ್ 2022ರ ಹೊತ್ತಿಗೆ, ದೇಶವು ಪ್ರತಿ 10 ಲಕ್ಷ ಜನರಿಗೆ 19 ನ್ಯಾಯಾಧೀಶರನ್ನು ಹೊಂದಿದೆ ಮತ್ತು 4.8 ಕೋಟಿ ಪ್ರಕರಣಗಳ ಬಾಕಿ ಇದೆ ಎಂದು ಹೇಳಿದೆ. ಒಂದು ದಶಕದ ಅವಧಿಯಲ್ಲಿ ಪ್ರತಿ 10 ಲಕ್ಷ ಜನರಿಗೆ 50 ನ್ಯಾಯಾಧೀಶರು ಇರಬೇಕು ಎಂದು 1987 ರಲ್ಲೇ ಕಾನೂನು ಆಯೋಗ ಸೂಚಿಸಿತ್ತು. ಆದರೆ ಶಿಫಾರಸಿನ ಸಮೀಪ ಕೂಡ ಹೋಗಲು ಆಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ