ಮೇರಠ್‌ನಲ್ಲಿ ದೇಶದ ಮೊದಲ ಪ್ರಾಣಿಗಳ ಯುದ್ಧ ಸ್ಮಾರಕ!

By Suvarna NewsFirst Published Jan 24, 2020, 4:08 PM IST
Highlights

ಮೇರಠ್‌ನಲ್ಲಿ ದೇಶದ ಮೊದಲ ಪ್ರಾಣಿಗಳ ಯುದ್ಧ ಸ್ಮಾರಕ| ವಿವಿಧ ಕಾರ್ಯಾಚರಣೆಗಳಲ್ಲಿ ಮಡಿದ ಶ್ವಾನ, ಕುದುರೆಗಳ ನೆನಪು| ಉತ್ತರ ಪ್ರದೇಶದ ಮೇರಠ್‌ನಲ್ಲಿ ಸ್ಮಾರಕ ನಿರ್ಮಾಣಕ್ಕೆ ಯೋಜನೆ

ನವದೆಹಲಿ[ಜ.24]: ಯುದ್ಧ ಮತ್ತು ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಸಾವಿಗೀಡಾದ ಶ್ವಾನ ಮತ್ತು ಕದುರೆಗಳಿಗೆ ಮೀಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕವೊಂದು ಉತ್ತರ ಪ್ರದೇಶದ ಮೇರಠ್‌ನಲ್ಲಿ ನಿರ್ಮಾಣ ಆಗಲಿದೆ.

ಯೋಧರಷ್ಟೇ ಅಲ್ಲದೇ ಯುದ್ಧ ಭೂಮಿಯಲ್ಲಿ ಸಾಹಸ ಮೆರೆದ ಮತ್ತು ಸೇನೆಗೆ ಅತ್ಯಮೂಲ್ಯ ಕೊಡುಗೆ ನೀಡಿದ ಪ್ರಾಣಿಗಳನ್ನು ಗುರುತಿಸಲು ಈ ಸ್ಮಾರಕವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ದೇಶದ ಮೊದಲ ಪ್ರಾಣಿ ಯುದ್ಧ ಸ್ಮಾರಕ ಎನಿಸಿಕೊಳ್ಳಲಿದೆ.

ಮೇರಠ್‌ನ ರಿಮೌಂಟ್‌ ವೆಟರ್ನಿಟಿ ಕೋರ್‌ ಸೆಂಟರ್‌ ಆ್ಯಂಡ್‌ ಕಾಲೇಜ್‌ನಲ್ಲಿ ಈ ಸ್ಮಾರಕ ನಿರ್ಮಾಣ ಆಗಲಿದೆ. ಸ್ಮಾರಕ ನಿರ್ಮಾಣಕ್ಕೆ ರಕ್ಷಣಾ ಸಚಿವಾಲಯದಿಂದ ಶೀಘ್ರದಲ್ಲೇ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ದೆಹಲಿಯಲ್ಲಿರುವ ಯುದ್ಧ ಸ್ಮಾರಕದ ರೀತಿಯಲ್ಲೆ ವೀರ ಮರಣ ಅಪ್ಪಿದ 300 ಶ್ವಾನಗಳು, 350 ಶ್ವಾನ ನಿರ್ವಾಹಕರು ಮತ್ತು ಕೆಲವು ಕುದುರೆ ಮತ್ತು ಹೇಸರಗತ್ತೆಗಳ ಹೆಸರನ್ನು ಗ್ರ್ಯಾನೆಟ್‌ಗಳ ಮೇಲೆ ಬರೆಯಲಾಗುತ್ತದೆ. ಜಮ್ಮು- ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಉಗ್ರರ ಒಳನುಸುಳುವಿಕೆ ತಡೆ ಕಾರ್ಯಾಚರಣೆಯ ವೇಳೆ ಮೃತಪಟ್ಟ25 ಶ್ವಾನ ಹೆಸರನ್ನೂ ಯುದ್ಧ ಸ್ಮಾರಕ ಒಳಗೊಂಡಿರಲಿದೆ. ಇದುವರೆಗೆ ಸೇನೆ ವಿವಿಧ ಕಾರ್ಯಾಚರಣೆಯಲ್ಲಿ 1000ಕ್ಕೂ ಹೆಚ್ಚು ಶ್ವಾನಗಳು, 1500 ಕುದುರೆಗಳು ಮತ್ತು 5,000 ಹೇಸರಗತ್ತೆಗಳನ್ನು ಕಳೆದುಕೊಂಡಿದೆ.

ಮಡಿದ ಶ್ವಾನಗಳಿಗೆ ಗೌರವ:

ಭಾರತೀಯ ಸೇನೆ 1950ರ ದಶಕದಲ್ಲಿ ಯುದ್ಧ ಶ್ವಾನಗಳ ತರಬೇತಿ ಕೇಂದ್ರವನ್ನು ಆರಂಭಿಸಿತ್ತು. ಆ ನಂತರದಿಂದ ಸೇನೆಯಲ್ಲಿ ಅತ್ಯುತ್ನತ ಸೇವೆ ಸಲ್ಲಿಸಿದ ಶ್ವಾನಗಳಿಗೆ ಪದಕ ನೀಡಿ ಸನ್ಮಾನಿಸಲಾಗುತ್ತಿದೆ. 2016ರಲ್ಲಿ ಕಾಶ್ಮೀರದಲ್ಲಿ ಉಗ್ರ ಒಳನುಸುಳುವಿಕೆ ಕಾರ್ಯಾಚರಣೆಯಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಮಾನ್ಸಿ ಎಂಬ ಹೆಸರಿನ ಲಾಬ್ರಡಾರ್‌ ಶ್ವಾನಕ್ಕೆ ಮರಣೋತ್ತರವಾಗಿ ಪದಕ ನೀಡಿ ಸನ್ಮಾನಿಸಲಾಗಿತ್ತು. ಸೇನೆಯಲ್ಲಿ ಸದಾ ನೆನಪಿನಲ್ಲಿ ಇರುವ ಶ್ವಾನಗಳ ಪೈಕಿ ಮಾನ್ಸಿ ಅಗ್ರ ಸ್ಥಾನದಲ್ಲಿದೆ. ಬಾಂಬ್‌ವೊಂದನ್ನು ನಿಷ್ಕಿ್ರಯಗೊಳಿಸುವ ವೇಳೆ ಸಾವನ್ನಪ್ಪಿದ್ದ 9 ವರ್ಷದ ‘ಡಚ್‌’ ಶ್ವಾನಕ್ಕೆ ಭಾರತೀಯ ಸೇನೆ ಯೋಧನ ರೀತಿಯ ಗೌರವ ಸಲ್ಲಿಸಿತ್ತು.

click me!