ಭಾರತಕ್ಕೂ 4ನೇ ಅಲೆ ಆತಂಕ: ಕೇಂದ್ರ ಎಚ್ಚರಿಕೆ

Published : Jul 27, 2022, 06:54 AM IST
ಭಾರತಕ್ಕೂ 4ನೇ ಅಲೆ ಆತಂಕ: ಕೇಂದ್ರ ಎಚ್ಚರಿಕೆ

ಸಾರಾಂಶ

ಸೋಂಕು ಹೆಚ್ಚಳದ ವಾರದ ಪ್ರಕರಣ ಗಮನಿಸಿದರೆ ಕರ್ನಾಟಕ ಐದನೇ ಸ್ಥಾನದಲ್ಲಿದೆ. ಆದರೆ ಅತಿ ವೇಗವಾಗಿ ಸೋಂಕು ಹರಡುತ್ತಿರುವ ರಾಜ್ಯಗಳಲ್ಲಿ ರಾಜ್ಯದ ಕೊಡುಗೆ ಹೆಚ್ಚಿದೆ

ಬೆಂಗಳೂರು(ಜು.27):  ‘ಜಗತ್ತಿನ ಹಲವು ಭಾಗಗಳಲ್ಲಿ ಮತ್ತೆ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿವೆ. ದೇಶದಲ್ಲಿಯೂ ಕೂಡ ನಾಲ್ಕನೇ ಅಲೆಯ ಅತಂಕ ಇದ್ದೇ ಇದೆ. ಆದ್ದರಿಂದ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯಲ್ಲಿ ಯಾವುದೇ ವಿನಾಯಿತಿ ಬೇಡ. ಮುನ್ನೆಚ್ಚರಿಕೆ ಡೋಸ್‌ ಅನ್ನು ಅರ್ಹರೆಲ್ಲರೂ ತಪ್ಪದೆ ಪಡೆದುಕೊಳ್ಳಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಾರ್ತಾ ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್‌ ಮೋಹನ್‌ ಅವರೊಂದಿಗೆ ಸೇರಿ ಹೈಬ್ರಿಡ್‌ ಮಾದರಿಯ ಮಾಧ್ಯಮ ಸಂವಾದದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

‘ದೇಶದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಜನರಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ನಡೆಯ ಪಾಲನೆಯಲ್ಲಿ ದಣಿವು ಕಾಣುತ್ತಿದೆ. ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಪಾಲನೆ ಮತ್ತು ಲಸಿಕೆ ಪಡೆದುಕೊಳ್ಳುವಿಕೆಯ ಬಗ್ಗೆ ಉದಾಸೀನ ಪ್ರವೃತ್ತಿ ಕಂಡುಬರುತ್ತಿದೆ. ಇದು ನಾಲ್ಕನೆಯ ಅಲೆಗೆ ಕಾರಣವಾಗಬಹುದು. ಈಗಾಗಲೇ ಯೂರೋಪ್‌, ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲ ದೇಶಗಳಲ್ಲಿ ಹತ್ತು ದಶಲಕ್ಷ ಜನರಲ್ಲಿ 13 ಸಾವಿರ ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಳ್ಳುತ್ತಿದ್ದರೆ, ಸದ್ಯ ಭಾರತದಲ್ಲಿ ಹತ್ತು ಲಕ್ಷ ಮಂದಿಯಲ್ಲಿ 13 ಮಂದಿಯಲ್ಲಿ ಸೋಂಕು ದೃಢಪಡುತ್ತಿದೆ. ಪ್ರಸ್ತುತ ದೇಶದಲ್ಲಿ 1.47 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಕಳೆದ ಒಂದು ವಾರದಲ್ಲಿ ಪ್ರತಿದಿನ ಸರಾಸರಿ 19,627 ಹೊಸ ಪ್ರಕರಣಗಳು ಬರುತ್ತಿವೆ. ಪಾಸಿಟಿವಿಟಿ ದರ ಶೇ. 4.53ಕ್ಕೆ ಏರಿಕೆ ಕಂಡಿದೆ’ ಎಂದು ಹೇಳಿದರು.

CORONA CRISIS: 8 ದಿನ ಬಳಿಕ ಕೋವಿಡ್‌ 1000ಕ್ಕಿಂತ ಕೆಳಗೆ ಇಳಿಕೆ: 1 ಸಾವು

ಜನರಲ್ಲಿ ಕೋವಿಡ್‌ ಹರಡುವುದನ್ನು ನಿಯಂತ್ರಿಸುವುದಕ್ಕೆ ಪಂಚತಂತ್ರಗಳಾದ ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, ಲಸಿಕೆ, ಕೋವಿಡ್‌ ಹರಡುವುದನ್ನು ತಡೆಯುವ ನಡವಳಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಅದೇ ರೀತಿ ಹೆಚ್ಚು ಸೋಂಕು ಕಂಡು ಬರುತ್ತಿರುವ ಪ್ರದೇಶಗಳತ್ತ ಹೆಚ್ಚಿನ ನಿಗಾ ಇಡಬೇಕು ಎಂದು ಲವ್‌ ಸಿಂಗ್‌ ಹೇಳಿದ್ದಾರೆ.

ರಾಜ್ಯದಲ್ಲಿ ಸೋಂಕು ಹೆಚ್ಚಳ

ಸೋಂಕು ಹೆಚ್ಚಳದ ವಾರದ ಪ್ರಕರಣ ಗಮನಿಸಿದರೆ ಕರ್ನಾಟಕ ಐದನೇ ಸ್ಥಾನದಲ್ಲಿದೆ. ಆದರೆ ಅತಿ ವೇಗವಾಗಿ ಸೋಂಕು ಹರಡುತ್ತಿರುವ ರಾಜ್ಯಗಳಲ್ಲಿ ರಾಜ್ಯದ ಕೊಡುಗೆ ಹೆಚ್ಚಿದೆ. ಜು.13 ರಿಂದ ಜು. 19ರ ಅವಧಿಯಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಸೋಂಕು ಪತ್ತೆಯಾಗಿದ್ದ ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಜು.20ರಿಂದ ಜು. 26ರ ಅವಧಿಯಲ್ಲಿ ಹೊಸ ಪ್ರಕರಣಗಳಲ್ಲಿ ಇಳಿಮುಖವಾಗಿದೆ. ಆದರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಕರ್ನಾಟಕ ಸೇರಿದಂತೆ ವೇಗವಾಗಿ ಸೋಂಕು ಹರಡುತ್ತಿರುವ ರಾಜ್ಯಗಳತ್ತ ಗಮನ ಕೇಂದೀಕರಿಸುವ ಅಗತ್ಯವಿದೆ ಎಂದು ಲವ್‌ ಅಗರ್‌ವಾಲ್‌ ಹೇಳಿದ್ದಾರೆ. ಕರ್ನಾಟಕದಲ್ಲಿ ಜುಲೈ 13 ರಿಂದ ಜು.19ರ ಅವಧಿಯಲ್ಲಿ ಪ್ರತಿದಿನ ಸರಾಸರಿ 1,105 ಪ್ರಕರಣ ವರದಿ ಆಗಿದ್ದರೆ ಜು. 20 ರಿಂದ ಜು. 26ರವರೆಗೆ 1,327 ಪ್ರಕರಣ ವರದಿಯಾಗಿದೆ. ದೇಶದ ದೈನಂದಿನ ಸೋಂಕು ಪ್ರಕರಣಗಳಲ್ಲಿ ರಾಜ್ಯದ ಕೊಡುಗೆ ಶೇ. 6.76ರಷ್ಟಿದೆ. ಆದರೆ ದೇಶದ 286 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿದೆ. ಇದರಲ್ಲಿ ರಾಜ್ಯದ ಯಾವುದೇ ಜಿಲ್ಲೆ ಸ್ಥಾನ ಪಡೆದಿಲ್ಲ.

ಕೋವಿಡ್‌ ನಿಯಂತ್ರಣದಲ್ಲಿ ದೇಶ ಯಶಸ್ವಿ

ಕೋವಿಡ್‌ ಹಾನಿಯನ್ನು ತಡೆಯುವಲ್ಲಿ ಭಾರತ ಸಾಕಷ್ಟುಯಶಸ್ಸು ಕಂಡಿದೆ. ಜಾಗತಿಕವಾಗಿ ಒಂದು ದಶಲಕ್ಷ ಜನಸಂಖ್ಯೆಗೆ 72,091 ಪ್ರಕರಣ ಪತ್ತೆಯಾಗಿದ್ದರೆ ದೇಶದಲ್ಲಿ ದಶಲಕ್ಷಕ್ಕೆ 31,193 ಪ್ರಕರಣ ವರದಿಯಾಗಿದೆ. ವಿಶ್ವದಲ್ಲಿ ಒಂದು ದಶಲಕ್ಷ ಜನಸಂಖ್ಯೆಗೆ 807 ಮಂದಿ ಮೃತಪಟ್ಟಿದ್ದರೆ ದೇಶದಲ್ಲಿ ಪ್ರತಿ ದಶಲಕ್ಷಕ್ಕೆ 374 ಮಂದಿ ಮೃತರಾಗಿದ್ದಾರೆ. ಈವರೆಗೆ 202.51 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !