
ನವದೆಹಲಿ (ಮೇ.9): ರಷ್ಯಾದ S-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಮತ್ತು SCALP ಕ್ಷಿಪಣಿಗಳನ್ನು ಹೊಂದಿರುವ ರಫೇಲ್ ಜೆಟ್‌ಗಳು . ಈ ಅವಳಿ ಶಸ್ತ್ರಾಸ್ತ್ರಗಳು ಆಪರೇಷನ್ ಸಿಂದೂರ್ ಮತ್ತು ಪಾಕಿಸ್ತಾನದೊಂದಿಗಿನ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತದ ಬ್ರಹ್ಮಾಸ್ತ್ರಗಳಾಗಿವೆ. ನರೇಂದ್ರ ಮೋದಿ ಸರ್ಕಾರವು ಕೆಲವು ವರ್ಷಗಳ ಹಿಂದೆ ದೇಶದ ಆಂತರಿಕ ಹಾಗೂ ವಿದೇಶದ ಒತ್ತಡವನ್ನು ಮೀರಿ ಹೋರಾಟ ಮಾಡುವ ಮೂಲಕ ಭಾರತದ ಶಸ್ತ್ರಾಗಾರಕ್ಕೆ ಇದನ್ನು ಸೇರಿಸಿದ್ದರು.
ಮೇ 8 ಮತ್ತು 9 ರ ಮಧ್ಯರಾತ್ರಿ ಡ್ರೋನ್‌ಗಳು ಮತ್ತು ಇತರ ಮ್ಯುನಿಷನ್‌ಗಳನ್ನು ಬಳಸಿಕೊಂಡು ಪಾಕಿಸ್ತಾನ ಸಶಸ್ತ್ರ ಪಡೆಗಳು ನಡೆಸಿದ ಬೃಹತ್ ದಾಳಿಯನ್ನು ಭಾರತ ಯಶಸ್ವಿಯಾಗಿ ವಿಫಲಗೊಳಿಸಿದಾಗ, S-400 ವಾಯು ರಕ್ಷಣಾ ವ್ಯವಸ್ಥೆಯ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ. S-400 ರಕ್ಷಣಾ ವ್ಯವಸ್ಥೆ ಮತ್ತು ಆಕಾಶ್ ರಕ್ಷಣಾ ವ್ಯವಸ್ಥೆಯು ಪ್ರತಿಯೊಂದು ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿದ ಕಾರಣ ಪಾಕಿಸ್ತಾನ ಹಾರಿಸಿದ ಒಂದೇ ಒಂದು ಪ್ರಾಜೆಕ್ಟಲ್ ಅಥವಾ ಕ್ಷಿಪಣಿ ಗುರಿಯತ್ತ ಬೀಳಲು ಸಾಧ್ಯವಾಗಲಿಲ್ಲ. ಶ್ರೀನಗರ, ಜಮ್ಮು ನಗರದಿಂದ ಜೈಸಲ್ಮೇರ್‌ವರೆಗೆ ಅನೇಕ ಸ್ಥಳಗಳಲ್ಲಿ ಮ್ಯುನಿಷನ್‌ಗಳನ್ನು ಹಾರಿಸಲಾಗಿತ್ತು.
ಆದರೆ, 2018 ರಿಂದ ಭಾರತವು ರಷ್ಯಾದೊಂದಿಗೆ 5 ಬಿಲಿಯನ್ ಡಾಲರ್ ಒಪ್ಪಂದದ ಮೂಲಕ S-400 ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ನಿರ್ಧರಿಸಿದಾಗ ಮೋದಿ ಸರ್ಕಾರವು ಅಮೆರಿಕ ಹೇರಿದ ಒತ್ತಡವನ್ನು ಎದುರಿಸಬೇಕಾಗಿತ್ತು. ಮೂರು ವರ್ಷಗಳ ಹಿಂದೆ, ರಷ್ಯಾದಿಂದ S-400 ಅನ್ನು ಸ್ವಾಧೀನಪಡಿಸಿಕೊಳ್ಳುವ ಭಾರತದ ನಿರ್ಧಾರ ನಮಗೆ ನಿರುತ್ಸಾಹ ತಂದಿದೆ ಎಂದು ಅಮೆರಿಕ ಸಾರ್ವಜನಿಕವಾಗಿ ಹೇಳಿತ್ತು. ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತು ಜೋ ಬೈಡನ್ ಆಡಳಿತ ಎರಡೂ ಭಾರತವು S-400 ಪಡೆಯುವುದನ್ನು ವಿರೋಧಿಸಿದ್ದವು. ಹಿಂದಿನ ಟ್ರಂಪ್ ಆಡಳಿತವು ನಿರ್ಬಂಧಗಳ ಬೆದರಿಕೆಯನ್ನೂ ಒಡ್ಡಿತ್ತು.
ಆದರೆ ಮೋದಿ ನೇತೃತ್ವದ ಭಾರತಕ್ಕೆ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸಲು S-400 ಎಷ್ಟು ನಿರ್ಣಾಯಕ ಎನ್ನುವುದು ತಿಳಿದಿತ್ತು. S-400 ನ ಮೂರು ಸ್ಕ್ವಾಡ್ರನ್‌ಗಳು ದೇಶಕ್ಕೆ ಆಗಮಿಸಿದ್ದು, ಅದರ ನಿಯೋಜನೆಯೂ ಆಗಿದೆ. ಈ ವರ್ಷ ಇನ್ನಷ್ಟು ಬರುವ ನಿರೀಕ್ಷೆಯಿದೆ. ಇದು ವಿಶ್ವದ ಪ್ರಮುಖ ದೀರ್ಘ-ಶ್ರೇಣಿಯ ವಾಯು ರಕ್ಷಣಾ ಅಸ್ತ್ರವಾಗಿದ್ದು, 600 ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿ ಬಹು ವೈಮಾನಿಕ ಗುರಿಗಳನ್ನು ಪತ್ತೆಹಚ್ಚುವ ಮತ್ತು ಅದನ್ನು ಹೊಡೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ವಾಯುಪಡೆಯಲ್ಲಿ ಇದಕ್ಕೆ 'ಸುದರ್ಶನ ಚಕ್ರ' ಎಂದು ಹೆಸರಿಡಲಾಗಿದೆ. ಇದು ಯುದ್ಧ ವಿಮಾನಗಳಿಂದ ಹಿಡಿದು UAV ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳವರೆಗೆ ವಿವಿಧ ರೀತಿಯ ವಾಯುಗಾಮಿ ಬೆದರಿಕೆಗಳನ್ನು ಪತ್ತೆ ಮಾಡುತ್ತದೆ, ಟ್ರ್ಯಾಕ್ ಮಾಡುತ್ತದೆ ಮತ್ತು ನಾಶಪಡಿಸುತ್ತದೆ.
ರಫೇಲ್ ಖರೀದಿಯಲ್ಲಿ ರಾಜಕೀಯ ಒತ್ತಡ ಎದುರಿಸಿದ್ದ ಮೋದಿ: ಭಾರತವು 2020 ರಿಂದ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಸರ್ಕಾರದಿಂದ ಸರ್ಕಾರಕ್ಕೆ ಮಾಡಿಕೊಂಡ ಒಪ್ಪಂದದ ಪ್ರಕಾರ ಖರೀದಿಸಿದೆ. ಇದು ಭಾರತದ ವಾಯು ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿತು. ಪಾಕಿಸ್ತಾನದ ಬಳಿ ಇರುವ ಅಮೆರಿಕ ನಿರ್ಮಿತ ಎಫ್-16 ಇರುವ ಕಾರಣಕ್ಕೆ ಭಾರತದ ವಾಯುಸೇನೆಗೆ ಇದು ದೊಡ್ಡ ಬಲ ನೀಡಿತ್ತು. ಪಾಕಿಸ್ತಾನ ಪ್ರದೇಶದೊಳಗೆ ಸುಮಾರು 100 ಕಿ.ಮೀ ಆಳದಲ್ಲಿರುವ ಬಹವಾಲ್ಪುರವನ್ನು ಗುರಿಯಾಗಿಸಲು ಭಾರತವು SCALP ಕ್ಷಿಪಣಿಗಳನ್ನು ಅಳವಡಿಸಲಾದ ರಫೇಲ್ ಜೆಟ್‌ಗಳನ್ನು ಬಳಸಿದೆ ಎಂದು ಹೇಳಲಾಗುತ್ತದೆ. ಮತ್ತು, ರಫೇಲ್ ತನ್ನ ದೀರ್ಘ-ಶ್ರೇಣಿಯ ದಾಳಿ ಸಾಮರ್ಥ್ಯವನ್ನು ನೀಡಿರುವುದರಿಂದ ಗಡಿಯನ್ನು ದಾಟಬೇಕಾದ ಅನಿವಾರ್ಯತೆಯೇ ಇದ್ದಿರಲಿಲ್ಲ.
ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಪ್ರಧಾನ ಕಚೇರಿಯಾಗಿದ್ದ ಬಹಾವಲ್ಪುರದ ಮೇಲೆ ರಫೇಲ್ ನಡೆಸಿದ ದಾಳಿಯಲ್ಲಿ, ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಅವರ ಬಹುತೇಕ ಇಡೀ ಕುಟುಂಬ ನಾಶವಾಯಿತು. ಸತ್ತವರಲ್ಲಿ ಜೈಶ್ ನ ಮೋಸ್ಟ್ ವಾಂಟೆಡ್ ಮತ್ತು ಹಾಲಿ ಮುಖ್ಯಸ್ಥ, ಮೌಲಾನಾ ಮಸೂದ್ ಅಜರ್ ಅವರ ಸಹೋದರ ಮತ್ತು ಐಸಿ-814 ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಅಬ್ದುಲ್ ರೌಫ್ ಅಜರ್ ಕೂಡ ಸೇರಿದ್ದಾನೆ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ