
ಗುವಾಹಟಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಐದೂ ರಾಜ್ಯಗಳಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಅಭ್ಯರ್ಥಿಗಳಲ್ಲಿ ಬಹುತೇಕರು ಮುಸ್ಲಿಮರು ಎಂಬ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ.
ಅಸ್ಸಾಂನ 126 ಶಾಸಕ ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಗೆದ್ದಿದೆ. ಈ 19 ಮಂದಿಯಲ್ಲಿ 18 ಜನ ಮುಸ್ಲಿಂ ಅಭ್ಯರ್ಥಿಗಳು ಎಂಬುದು ಗಮನಾರ್ಹ. ಪಕ್ಷವು ಒಟ್ಟು 20 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಇಬ್ಬರು ಮಾತ್ರ ಪರಾಜಿತರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಪಕ್ಷವು ಕಣಕ್ಕಿಳಿಸಿದ 79 ಮುಸ್ಲಿಮೇತರ ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕಾಂಗ್ರೆಸ್‌ನ ಮಿತ್ರಪಕ್ಷ ರೈಜೋರ್ ದಳ 2 ಸ್ಥಾನಗಳನ್ನು ಗೆದ್ದಿದೆ. ಅದರ ವಿಜೇತ ಅಭ್ಯರ್ಥಿಗಳಲ್ಲಿ ಒಬ್ಬರು ಮುಸ್ಲಿಂ ಆಗಿದ್ದರೆ, ಮತ್ತೊಬ್ಬರು ಅಖಿಲ್ ಗೊಗೊಯ್. ಇವರು ಮಾವೋವಾದಿಗಳ ಸಂಪರ್ಕದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಎದುರಿಸಿದ್ದಾರೆ.
ಕೇರಳ:
ಕೇರಳದ 140 ಸ್ಥಾನಗಳ ಪೈಕಿ 35 ಮುಸ್ಲಿಂ ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದಾರೆ. ಇವರಲ್ಲಿ 30 ಜನ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನಿಂದ ಸ್ಪರ್ಧಿಸಿದ್ದರು. ಈ ಮಿತ್ರಕೂಟದಲ್ಲಿ 8 ಕಾಂಗ್ರೆಸ್ ಶಾಸಕರು ಮುಸ್ಲಿಮರು, ಉಳಿದ 22 ಶಾಸಕರು ಯುಡಿಎಫ್‌ನ ಮುಖ್ಯ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ ಸೇರಿದವರು.
ಬಂಗಾಳ:
ಪಶ್ಚಿಮ ಬಂಗಾಳದಲ್ಲಿ, ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿದೆ. ಇವರಿಬ್ಬರೂ ಮುಸ್ಲಿಮರಾಗಿದ್ದು, ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಿಂದಲೇ ಗೆದ್ದಿದ್ದಾರೆ. ಪಕ್ಷವು ರಾಜ್ಯದಲ್ಲಿ 63 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದು ಟಿಎಂಸಿಗಿಂತ ಕಣಕ್ಕಿಳಿಸಿದ್ದ ಮುಸ್ಲಿಮರಿಗಿಂತ (47) ಹೆಚ್ಚು.
ತಮಿಳುನಾಡು:
ಇಲ್ಲಿ ಕಾಂಗ್ರೆಸ್ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಒಬ್ಬರು ಗೆಲುವು ಸಾಧಿಸಿದ್ದಾರೆ. ಅಸ್ಸಾಂ ಮತ್ತು ಕೇರಳದಾದ್ಯಂತ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಂದ ಕಣಕ್ಕಿಳಿಸಲಾದ ಮುಸ್ಲಿಂ ಅಭ್ಯರ್ಥಿಗಳು ಶೇ.80ಕ್ಕಿಂತ ಹೆಚ್ಚಿನ ಗೆಲುವಿನ ದರ ದಾಖಲಿಸಿದ್ದಾರೆ.
ತಿರುವನಂತಪುರಂ: ಕೇರಳದಲ್ಲಿ 3 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಐತಿಹಾಸಿಕ ಜಯವನ್ನು ಗಳಿಸಿರುವ ಬಿಜೆಪಿ, 6 ಕ್ಷೇತ್ರಗಳಲ್ಲಿ 2ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ, ದಶಕದ ಹಿಂದಷ್ಟೇ ರಾಜ್ಯದಲ್ಲಿ ಖಾತೆ ತೆರೆದಿದ್ದ ಪಕ್ಷ ಈ ಬಾರಿ ಉತ್ತಮ ಪ್ರದರ್ಶನ ನೀಡಿದೆ. ಇದು ಮುಂದಿನ ಚುನಾವಣೆಗಳಲ್ಲಿ ಪಕ್ಷ ಮತ್ತಷ್ಟು ಸ್ಥಾನಗಳನ್ನು ಗೆಲ್ಲುವ ಮತ್ತು ರಾಜ್ಯ ಕಾರಣದಲ್ಲಿ ತನ್ನದೇ ಛಾಪು ಮೂಡಿಸುವತ್ತ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ. ತಿರುವಳ್ಳ, ಪಾಲಕ್ಕಾಡ್, ಮಲಂಪುಳ, ಅಟ್ಟಿಂಗಲ್, ಕಾಸರಗೋಡು ಮತ್ತು ಮಂಜೇಶ್ವರದಲ್ಲಿ 2ನೇ ಸ್ಥಾನ ಪಡೆದಿರುವ ಬಿಜೆಪಿ, ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಎಲ್ಲಾ ಕ್ಷೇತ್ರಗಳಲ್ಲಿ ಶೇಕಡವಾರು ಮತದಲ್ಲಿ ಭಾರೀ ಸುಧಾರಣೆ ಕಂಡಿದೆ.
ಕೋಲ್ಕತಾ: ಬಂಗಾಳದ ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್, ಮಾಲ್ಡಾ, ಉತ್ತರ ದಿನಾಜ್‌ಪುರನಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ತೋರಿದೆ. 3 ಜಿಲ್ಲೆಯ 43 ಕ್ಷೇತ್ರಗಳಲ್ಲಿ 2021ರಲ್ಲಿ 8 ಸ್ಥಾನ ಗೆದ್ದಿದ್ದ ಬಿಜೆಪಿ ಬಲ ಈಗ 19ಕ್ಕೆ ಏರಿದೆ. 35 ಸ್ಥಾನ ಹೊಂದಿದ್ದ ಟಿಎಂಸಿ ಬಲ 22ಕ್ಕೆ ಕುಸಿದಿದೆ. ಮುಸ್ಲಿಂ ಮತಗಳ ವಿಭಜನೆ ಬಿಜೆಪಿಗೆ ನೆರವಾಗಿದೆ.
ಕೋಲ್ಕತಾ: 15 ವರ್ಷಗಳ ಕಾಲ ಪಶ್ಚಿಮ ಬಂಗಾಳ ಆಳಿದ್ದ ಟಿಎಂಸಿ ಈ ಬಾರಿಯ ಬಿಜೆಪಿ ಆರ್ಭಟಕ್ಕೆ ಧೂಳೀಪಟವಾಗಿದೆ. ರಾಜ್ಯದ 23 ಜಿಲ್ಲೆಗಳ ಪೈಕಿ 9 ಜಿಲ್ಲೆಗಳಲ್ಲಿ ಸೊನ್ನೆ ಸುತ್ತಿದೆ. ಈ ಮೂಲಕ ಬಿಜೆಪಿಯ ಬೃಹತ್ ಅಲೆಗೆ ಸಿಕ್ಕಿ 68 ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ